ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ವರದಾನ ವೇಮಗಲ್ ಕಾಲೇಜು
ಕೋಲಾರ: ಗ್ರಾಮೀಣ ಪ್ರದೇಶದಲ್ಲಿ ಉನ್ನತ ಶಿಕ್ಷಣ ನೀಡುವ ಸರ್ಕಾರಿ ಸಂಸ್ಥೆಗಳಿಗೆ ಕೊರತೆ ಇದೆ ಎಂಬ ದೂರು ನಿವಾರಿಸಲು ರಾಜ್ಯ ಸರ್ಕಾರ ಕೋಲಾರ ತಾಲೂಕಿನ ವೇಮಗಲ್ ಗ್ರಾಮದಲ್ಲಿ ಉತ್ತಮ ಗುಣಮಟ್ಟದ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಪ್ರಾರಂಭಿಸಿದ್ದರೂ ಬಡ ವಿದ್ಯಾರ್ಥಿಗಳು ಶೈಕ್ಷಣಿಕ ಸೇವೆ ಸದುಪಯೋಗಕ್ಕೆ ಮೀನ ಮೇಷ ಎಣಿಸುತ್ತಿದ್ದಾರೆ.
ಸುಸಜ್ಜಿತ ಸ್ವಂತ ಕಟ್ಟಡ, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಆಟದ ಮೈದಾನ, ಮಾಲಿನ್ಯ ರಹಿತ ಪರಿಸರ, ಹಾಸ್ಟೆಲ್‌ವ್ಯವಸ್ಥೆ, ರಸ್ತೆ ಸಾರಿಗೆ ಸಂಪರ್ಕ, ನುರಿತ-ಅನುಭವಿ ಅಧ್ಯಾಪಕ ತಂಡ, ಪಾರದರ್ಶಕ ಆಡಳಿತ ನಿರ್ವಹಣೆ ಹೊಂದಿದ್ದರೂ, ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳುತ್ತಿಲ್ಲ.
ಕಾಲೇಜಿನಲ್ಲಿ 2014-15 ನೇ ಸಾಲಿನಲ್ಲಿ ಲಭ್ಯವಿರುವ ಬಿ.ಎ, ಬಿ.ಕಾಂ, ಬಿ.ಬಿ.ಎಂ, ಬಿಎಸ್ಸಿ ಕೋರ್ಸ್‌ಗಳ ಮೂಲಕ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜ ಶಾಸ್ತ್ರ, ಭೌತಶಾಸ್ತ್ರ, ಗಣಿತ ಶಾಸ್ತ್ರ, ಗಣಕ ವಿಜ್ಞಾನ ಕಲಿಕೆಗೆ ಬೇಕಾದ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಪೂರಕವಾದ ಅನುಭವಿ ಅಧ್ಯಾಪಕ ತಂಡ ಇದ್ದರೂ ವಿದ್ಯಾರ್ಥಿಗಳು ಹೊರಗಿನ ಕಾಲೇಜುಗಳತ್ತ ಮುಖ ಮಾಡುತ್ತಿರುವುದು ಸರ್ಕಾರದ ಆಶಯಗಳಿಗೆ ಹಿನ್ನಡೆ ಉಂಟು ಮಾಡುವಂತಾಗಿದೆ. ಕಾಲೇಜಿನಲ್ಲಿ ವಿವಿಧ ವಿದ್ಯಾರ್ಥಿ ವೇತನ, ಪಠ್ಯೇತರ ಚಟುವಟಿಕೆಗಳು, ಸಹ-ಪಠ್ಯ ಚಟುವಟಿಕೆಗಳು ಲಭ್ಯವಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿರುವುದರಿಂದ ಪೋಷಕರು ತಮ್ಮ ಮಕ್ಕಳಿಗೆ ಬುದ್ಧಿ ಹೇಳಿ ಸರ್ಕಾರಿ ಕಾಲೇಜಿಗೆ ಸೇರುವಂತೆ ಪ್ರೇರಣೆ ನೀಡಬೇಕೆಂದು ಕಾಲೇಜಿನ ಪ್ರಾಂಶುಪಾಲ ಪ್ರೊ.ಎನ್. ಕೃಷ್ಣಪ್ಪ ಮನವಿ ಮಾಡಿದ್ದಾರೆ. 2014-15 ಸಾಲಿನ ಪದವಿ ಕೋರ್ಸ್‌ಗಳ ದಾಖಲಾತಿ ಪ್ರಾರಂಭವಾಗಿದ್ದು ಗ್ರಾಮೀಣ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ವರದಾನವಾಗಿರುವ ಸರ್ಕಾರಿ ಕಾಲೇಜಿನ ಸದ್ಬಳಕೆ ಮಾಡಿಕೊಳ್ಳುವಂತೆ ಕಾಲೇಜಿನ ಅಧ್ಯಾಪಕ ವೃಂದ ಕೋರಿದೆ.
ಕಾಲೇಜು ನಡೆದು ಬಂದ ದಾರಿ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವೇಮಗಲ್‌ನಲ್ಲಿ 2007ರ ಜೂನ್ 23ರಂದು ಪ್ರಭಾರ ಪ್ರಾಂಶುಪಾಲ ಆರ್. ಶ್ರೀನಿವಾಸ್ ನೇತೃತ್ವದಲ್ಲಿ ವಿಧಾನ ಪರಿಷತ್ತಿನ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಅವರ ತಂದೆ ದಿ. ರಾಮಶೆಟ್ಟಿ ಬಯಲು ರಂಗ ಮಂದಿರದಲ್ಲಿ ಕಚೇರಿ ಹಾಗೂ ಪ್ರಾಂಶುಪಾಲರ ಕೊಠಡಿ, ವೇಮಗಲ್ ಗ್ರಾಪಂ ಮತ್ತು ಅಂಬೇಡ್ಕರ್ ಭವನದ ಕೊಠಡಿಗಳಲ್ಲಿ ತರಗತಿ ಆರಂಭಿಸುವುದರ ಮೂಲಕ ಪ್ರಾರಂಭಿಸಲಾಯಿತು. 2007-08 ನೇ ಸಾಲಿನಲ್ಲಿ ಸುಮಾರು 92ವಿದ್ಯಾರ್ಥಿಗಳಿಗೆ ಬಿಎ, ಬಿಕಾಂ ಮತ್ತು ಬಿಬಿಎಂ ತರಗತಿಗಳಿಗೆ ಪ್ರವೇಶ ನೀಡಲಾಯಿತು. ಕಾಲೇಜು ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರದಿಂದ 2 ಎಕರೆ ಭೂಮಿ ಹಾಗೂ 2 ಕೋಟಿ ಅನುದಾನ ಮಂಜೂರಾಗಿತ್ತು. ವಿದ್ಯಾರ್ಥಿಗಳು ಈ ಕಾಲೇಜಿನ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾದಲ್ಲಿ ಸರ್ಕಾರದಿಂದ ಹಾಗೂ ವಿವಿಯಿಂದ ಮತ್ತಷ್ಟು ಸವಲತ್ತುಗಳು ಸಿಗುತ್ತವೆ ಎಂಬುದು ಪ್ರಾಂಶುಪಾಲರ ಅಭಿಮತವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

