ಕೋಲಾರ

ಭೂಮಿ ಕಸಿದುಕೊಳ್ಳಲು ಕೈಹಾಕಿದರೆ ಹುಷಾರ್: ಸರ್ಕಾರಕ್ಕೆ ರೈತರ ಎಚ್ಚರಿಕೆ

Published On :

ಬಾಗೇಪಲ್ಲಿ: ರೈತರ ಭೂಮಿಗಳನ್ನು ಸಕ್ರಮಗೊಳಿಸದೆ ರೈತರಿಂದ ಭೂಮಿಯನ್ನು ಕಸಿದುಕೊಳ್ಳುವ ಕೆಲಸಕ್ಕೆ ರಾಜ್ಯ ಸರ್ಕಾರ ಕೈ ಹಾಕಿದೆ ಎಂದು ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಕಟುವಾಗಿ ಟೀಕಿಸಿದರು.
ತಾಲೂಕಿನ ದೇವರಗುಡಿಪಲ್ಲಿ ಗ್ರಾಮದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಏರ್ಪಡಿಸಿದ್ದ ರೈತರ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ರೈತರು ಲಕ್ಷಾಂತರ ಎಕರೆ ಸರ್ಕಾರದ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಬಾಲಸುಬ್ರಮಣ್ಯಂ ವರದಿ  ಅಧರಿಸಿ ರಾಜ್ಯ ಸರ್ಕಾರ ಉಳುಮೆ ಮಾಡುತ್ತಿರುವ ಕೃಷಿ ಭೂಮಿ ಕಿತ್ತುಕೊಳ್ಳಲು ಮುಂದಾಗಿ ನೋಟಿಸ್ ಜಾರಿ ಮಾಡಿದೆ. ಸುಮಾರು 15-20 ವರ್ಷಗಳಿಂದ ಈ ಭೂಮಿಯನ್ನು ಬಡ ರೈತರು ಉಳುಮೆ ಮಾಡುತ್ತ ತಮ್ಮ ಕುಟುಂಬದ ಪೋಷಣೆ ಮಾಡುತ್ತಿದ್ದಾರೆ.
ಆದರೆ, ರಾಜ್ಯ ಸರ್ಕಾರ ವಿವಿಧ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ರೈತರಿಂದ ಕೃಷಿ ಭೂಮಿಯನ್ನು ಕಿತ್ತುಕೊಂಡು ಕಂಪನಿಗಳಿಗೆ ನೀಡಲು ಹುನ್ನಾರ ನಡೆಸುತ್ತಿದೆ ಎಂದರು. ರಾಜ್ಯದ ಬಹುತೇಕ ಶಾಸಕರಿಗೆ ಕೃಷಿ ಭೂಮಿ ಬಗ್ಗೆ ಮಾಹಿತಿ ಇಲ್ಲ. ನಾನು ಶಾಸಕನಾಗಿದ್ದಾಗ  ವಿಧಾನಸಭೆ ಕಲಾಪದಲ್ಲಿ ಗಲಾಟೆ ಮಾಡಿ ಈ ಕಾಯ್ದೆ ಜಾರಿಗೆ ಬಾರದಂತೆ ಕೇವಲ ಎರಡು ದಿನ ತಡೆದೆ.ಆದರೆ ಯಾವ ಶಾಸಕನಿಗೂ ಈ ಬಗ್ಗೆ ಮಾಹಿತಿ ಇಲ್ಲದ ನಿಟ್ಟಿನಲ್ಲಿ ಶಾಸನ ಸಭೆಯಲ್ಲಿ ಈ ಕಾಯ್ದೆ ಮಂಜೂರಾತಿ ಪಡೆಯಿತು ಎಂದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸುಮಾರು 30-40 ವರ್ಷಗಳಿಂದ ರೈತರು ಸರ್ಕಾರಿ ಜಮೀನುಗಳಲ್ಲಿ ಉಳುಮೆ ಮಾಡಿಕೊಂಡಿದ್ದಾರೆ. ಆಕ್ರಮ ಸಕ್ರಮ ಮಾಡುವಂತೆ ಹಲವು ದಶಕಗಳಿಂದಲೂ ಅರ್ಜಿ ಹಾಕಿ ಕಾದು ಕುಳಿತ್ತಿರುವ ರೈತರಿಗೆ ಇತ್ತೀಚೆಗೆ ರಾಜ್ಯ ಸರ್ಕಾರ ಶಾಕ್  ನೀಡಿದೆ. ಇದನ್ನು ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಆಶ್ರಯಲ್ಲಿ ಜೂ. 4,5,6 ರಂದು ಮೂರು ದಿನಗಳ ಕಾಲ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಗಲು- ರಾತ್ರಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲಿದೆ ಎಂದರು. ಜಿಲ್ಲಾ ಸಿಪಿಎಂ ಕಾರ್ಯದರ್ಶಿ ಎಂ.ಪಿ.ಮುನಿವೆಂಟಕಪ್ಪ,ತಾಲೂಕು ಕಾರ್ಯದರ್ಶಿ ಎಂ.ಎನ್ .ರಘುರಾಮರೆಡ್ಡಿ, ಜೇಸಿಬಿ ಮಂಜುನಾಥರೆಡ್ಡಿ, ಹಾಗೂ ಮುಖಂಡರಾದ ಚನ್ನರಾಯಪ್ಪ, ರಾಮಲಿಂಗಪ್ಪ, ಆರ್ .ಚಂದ್ರಶೇಖರರೆಡ್ಡಿ, ನಾಗರಾಜ್, ನಾಗಿರೆಡ್ಡಿ, ಶ್ರೀರಾಮಪ್ಪ, ಚಿಕ್ಕವೆಂಕಟರವಣಪ್ಪ ಮುಂತಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.