ಕೋಲಾರ

ಹಳೆ ಬೇರು-ಹೊಸ ಚಿಗುರು ಸಮಾಗಮ

Published On :

-ಪಾ.ಶ್ರೀ.ಅನಂತರಾಮ್
ಕೋಲಾರ: ನಗರಸಭೆಯ ಅಸ್ತಿತ್ವ, ಮಹತ್ವ, ಉದ್ದೇಶ ಹಾಗೂ ಕಾರ್ಯಕ್ರಮಗಳ ಕುರಿತು ಆಡಳಿತ ಮಂಡಳಿಗೆ ಮಾಜಿ ಅಧ್ಯಕ್ಷರುಗಳು ಮಾರ್ಗದರ್ಶನ ನೀಡಿದ ಅಪರೂಪದ ಸ್ನೇಹ ಮಿಲನ ಕಾರ್ಯಕ್ರಮ ಶನಿವಾರ ಸಂಜೆ ನಗರಸಭೆ ಅಧ್ಯಕ್ಷ ಮುಬಾಕರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಕೋಲಾರ ನಗರದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮ ಅರ್ಥಪೂರ್ಣವಾಗಿತ್ತು, 16 ಮಂದಿ ಮಾಜಿ ಅಧ್ಯಕ್ಷರು ತಮ್ಮ ಕಾಲದಲ್ಲಿನ ಆಡಳಿತ ವ್ಯವಸ್ಥೆ, ಜನತೆಯ ನಿರೀಕ್ಷೆ, ಆಡಳಿತ ಮಂಡಳಿಯು ಕೈಗೊಂಡ ನಿರ್ಧಾರಗಳನ್ನು ಮೆಲಕು ಹಾಕಿದರು.
ಸರ್ಕಾರದಿಂದ ಯಾವುದೇ ಅನುದಾನ ನಿರೀಕ್ಷೆ ಇಲ್ಲದೆ, ಸ್ಥಳೀಯ ಸಂಪನ್ಮೂಲಗಳು ದುರುಪಯೋಗವಾಗದಂತೆ, ವಸೂಲಿ ಆಗುತ್ತಿದ್ದ ಕಂದಾಯದಿಂದ ಜನತೆಗೆ ಮೂಲ ಸೌಕರ್ಯ ಕಲ್ಪಿಸಲು ಕೈಗೊಂಡ ಕ್ರಮಗಳನ್ನು ಮಾಜಿ ಅಧ್ಯಕ್ಷರು, ಹಾಲಿ ಅಧ್ಯಕ್ಷರು, ಉಪಾಧ್ಯಕ್ಷರು ಮನಮುಟ್ಟುವ ರೀತಿಯಲ್ಲಿ ವಿವರಿಸಿದರು.
ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಯ ನಡುವೆ ಸಾಮರಸ್ಯ, ಜನಪರ ಕಾಳಜಿ ಹಾಗೂ ಸೇವಾ ಮನೋಭಾವನೆ ಇಲ್ಲದಿದ್ದರೆ ನಗರಸಭೆ ಇದ್ದು ಸತ್ತಂತೆ ಎಂದು ಮಾಜಿ ಅಧ್ಯಕ್ಷರು ಕಿವಿಮಾತು ಹೇಳಿದರು. ಇತ್ತೀಚಿನ ದಿನಗಳಲ್ಲಿ ನಗರಸಭೆಯ ಆಡಳಿತ ವ್ಯವಸ್ಥೆಯಲ್ಲಿನ ಅಂಕು-ಡೊಂಕುಗಳನ್ನು ಬಹಿರಂಗ ಪಡಿಸುವ ಮೂಲಕ ಆಡಳಿತ ವ್ಯವಸ್ಥೆ ಸುಧಾರಣೆಗೆ ಹಲವು ಸೂತ್ರಗಳನ್ನು ಮಂಡಿಸಿದರು.
ನಗರಸಭೆಯ ಅತ್ಯಂತ ಹಿರಿಯ ಮಾಜಿ ಅಧ್ಯಕ್ಷ ಸಾ.ಮ.ರಂಗಪ್ಪ, ನಮ್ಮ ಕಾಲದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇಲ್ಲದಂತೆ ಎಚ್ಚರ ವಹಿಸಲಾಗಿತ್ತು. ಟ್ಯಾಂಕರ್ ಸದ್ದೇ ಇರಲಿಲ್ಲ. ಅದೇ ರೀತಿ ನಿಮ್ಮ ಕಾಲದಲ್ಲೂ ನೀರಿಗೆ ಪ್ರಥಮ ಆದ್ಯತೆ ನೀಡಿ ಎಂದು ಸಲಹೆ ನೀಡಿದರು.
ಮತ್ತೊಬ್ಬ ಹಿರಿಯ ಮಾಜಿ ಅಧ್ಯಕ್ಷ ಚಿಕ್ಕ ಹನುಮಪ್ಪ, ಸದಸ್ಯರೇ ನೀತಿ-ನಿಯಮ ಉಲ್ಲಂಘನೆ ಮಾಡಿ ಇತರರಿಗೆ ಆದರ್ಶ ಭೋದನೆ ಮಾಡಿದರೆ ಭೂತದ ಬಾಯಲ್ಲಿ ಭಗವದ್ಗೀತೆ ನುಡಿದಂತಾಗುತ್ತದೆ ಎಂದು ಚಾಟಿ ಬೀಸಿದರು.
ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರಲ್ಲಿ ಜನಪರವಾದ ವಿಚಾರಗಳಲ್ಲಿ ಹೊಂದಾಣಿಕೆ ಇರಬೇಕು, ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ಗೂಂಡಾವರ್ತನೆ ಬೇಡ, ಅದೇ ರೀತಿ ಅಧಿಕಾರಿಗಳು ಸಹ ಸದಸ್ಯರು ಜನಪರವಾಗಿ ಮಂಡಿಸುವ ಬೇಡಿಕೆಗಳನ್ನು ಕಾನೂನು ಬದ್ಧವಾಗಿ ಈಡೇರಿಸಲು ಗಮನ ನೀಡಬೇಕೆಂದು ಇತ್ತೀಚೆಗೆ ನಗರಸಭೆಯಲ್ಲಿ ನಡೆದ ವಿದ್ಯಮಾನವನ್ನು ನೆನಪಿಸಿ ಕಿವಿಮಾತು ಹೇಳಿದರು.
ರವೀಂದ್ರ ಕುಮಾರ್, ಮಾಜಿ ಅಧ್ಯಕ್ಷರ ಸಭೆ ಏರ್ಪಡಿಸಿದ ಮುಬಾಕರ್ ಅವರನ್ನು ಅಭಿನಂದಿಸಿ ಮಾತನಾಡಿದರು.
ನಜೀರ್ ಅಹಮ್ಮದ್, ಡಾ.ಗೋವಿಂದರಾಜ್, ಮಧುಸೂದನ್, ರಾಜೇಶ್,ಅಪ್ರೋಜ್ ಪಾಷ, ಖದೀರ್, ಗಿರಿಜಮ್ಮ,ಸೂರ್ಯ ನಾರಾಯಣ, ಮತ್ತಿತರರು ನಗರಸಭೆ ಆಡಳಿತ ಮಂಡಳಿಗೆ ಹತ್ತು-ಹಲವು ಸಲಹೆ ನೀಡಿದರು. 16 ಮಂದಿ ಮಾಜಿ ಅಧ್ಯಕ್ಷರನ್ನು ಅಧ್ಯಕ್ಷ ಮುಬಾರಕ್ ಸನ್ಮಾನಿಸಿದರು. ಹಿರಿಯ ಮಾರ್ಗದರ್ಶದಂತೆ ದೂರದೃಷ್ಟಿಯುಳ್ಳ ಕ್ರಿಯಾ ಯೋಜನೆ ರೂಪಿಸಿ ನಗರದ ಅಭಿವೃದ್ಧಿಗೆ ಎಲ್ಲ ಸದಸ್ಯರ ಹಾಗೂ ಅಧಿಕಾರಿಗಳ ಸಹಾಯದಿಂದ ಶ್ರಮಿಸುವುದಾಗಿ ಭರವಸೆ ನೀಡಿದರು.
ಉಪಾಧ್ಯಕ್ಷೆ ಸಾಕಮ್ಮ, ಆಯುಕ್ತ ಜಗದೀಶ್, ವ್ಯವಸ್ಥಾಪಕ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.