ತಂಬಾಕು ಬಿಟ್ಹಾಕು ಗುರು...
ಕೋಲಾರ: ತಂಬಾಕಿನಿಂದ ತಯಾರಿಸುವ ಉತ್ಪನ್ನಗಳನ್ನು ಯುವಜನತೆ ಬಳಕೆ ಮಾಡದೆ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ರೇಣುಕಾ ಪ್ರಸಾದ್ ಕಿವಿಮಾತು ನೀಡಿದರು.
ನಗರದ ಗಾಂಧಿವನದಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಕೀಲರ ಸಂಘ, ಜಾಗೃತಿ ಸೇವೆ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಜನತೆ ಗುಟ್ಕ, ತಂಬಾಕು ಸೇರಿದಂತೆ ಇತರೆ ಚಟಗಳಿಗೆ ದಾಸರಾಗಿ ತಮ್ಮ ಜೀವನಕ್ಕೆ ಕುತ್ತು ತಂದುಕೊಳ್ಳುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದ ಅವರು, ತಂಬಾಕು ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಿ.ಕೆ.ರವಿ ಮಾತನಾಡಿ, ತಂಬಾಕು, ಮದ್ಯಪಾನ ಮನುಷ್ಯನ ವ್ಯಕ್ತಿಗತ ವಿಷಯವಾಗಿದೆ. ಆದರೆ ಸಮಾಜಕ್ಕೆ ಮಾರಕ ಮತ್ತು ಪಿಡಗು ಎಂದರು. ತಂಬಾಕು ಸೇವನೆಯಿಂದ ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳು ಮನುಷ್ಯನ ಪ್ರಾಣವನ್ನು ತೆಗೆದುಕೊಳ್ಳುತ್ತಿರುವುದರಿಂದ ಪ್ರತಿಯೊಬ್ಬರು ಎಚ್ಚರಿಕೆಯ ಜೀವನವನ್ನು ನಡೆಸಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯಾಧಿಕಾರಿ ಡಾ.ಪಯಾಜ್ಖಾನ್ ಅನೇಕ ಮಾಹಿತಿ ನೀಡಿದರು. ಜಿಪಂ ಸಿಇಒ ಆರ್.ವಿನೋದ್ಪ್ರಿಯಾ, ವಕೀಲರ ಸಂಘದ ಅಧ್ಯಕ್ಷ ಎ.ವಿ.ಆನಂದ್, ನ್ಯಾಯಾಧೀಶರಾದ ಮಲ್ಲಿಕಾರ್ಜುನ, ಮನಗೋಳಿ ಪ್ರೇಮಾವತಿ ಮಲ್ಲಿಕಾರ್ಜುನ್, ಜಾಗೃತಿ ಸೇವಾ ಸಂಸ್ಥೆ ಅಧ್ಯಕ್ಷ ಧನರಾಜ್ ಮತ್ತಿತರರು ಉಪಸ್ಥಿತರಿದ್ದರು.
'ತಂಬಾಕು ಬಿಡಿ ರೋಜ ಹಿಡಿ'
ಕೆಜಿಎಫ್: ಇಂದಿನ ಯುವಪೀಳಿಗೆ ತಂಬಾಕು ಮತ್ತು ಇತರೆ ಮಾದಕ ದ್ರವ್ಯ ವಸ್ತುಗಳಿಗೆ ಮಾರು ಹೋಗಿ ತಮ್ಮ ಉತ್ತಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುವತ್ತ ಸಾಗಿದೆ ಇದರಿಂದ ಅವರನ್ನು ಸಂರಕ್ಷಿಸುವುದು ಸರ್ಕಾರದ ಜವಾಬ್ದಾರಿ ಎಂದು ಡಾ.ಮಂಜುನಾಥ್ ಹೇಳಿದರು.
ವಿಶ್ವ ತಂಬಾಕು ನಿಷೇಧ ದಿನಾಚರಣೆ ಅಂಗವಾಗಿ ಕೆಜಿಎಫ್ ಕ್ಷೇತ್ರದ ಖಾಸಗಿ ಆಸ್ಪತ್ರೆಗಳ ವೈದ್ಯರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಜಾಗೃತಿ ಮೆರವಣಿಗೆ ಉದ್ಘಾಟಿಸಿ ಮಾತನಾಡಿದರು.
ಡಾ.ನಾಗಪ್ಪ ಮಾತನಾಡಿ, ಬೀಡಿ, ಸಿಗರೇಟ್, ಗುಟ್ಕ ಸೇರಿದಂತೆ ಇತರೆ ಮಾದಕ ದ್ರವ್ಯ ವಸ್ತುಗಳ ಸೇವನೆಯಿಂದಾಗಿ ಬಾಯಿ, ಗಂಟಲು, ಹೊಟ್ಟೆ, ಲಿವರ್, ಕಿಡ್ನಿ ಹಾಗೂ ದೇಹದ ಇತರೆ ಭಾಗಗಳಿಗೆ ಹಾನಿಯುಂಟಾಗಿ ಕ್ಯಾನ್ಸರ್ ಮುಂತಾದ ಖಾಯಿಲೆಗಳಿಂದ ದಿನನಿತ್ಯ ಲಕ್ಷಾಂತರ ಮಂದಿ ಸಾವನ್ನುಪ್ಪುತ್ತಿದ್ದಾರೆ. ಇವರುಗಳಲ್ಲಿ ಬಹುತೇಕ ಮಂದಿ ಯುವಕರು, ವಿದ್ಯಾರ್ಥಿಗಳು, ಮಹಿಳೆಯರು ಹೆಚ್ಚು ದೇಶದ ಅಭಿವೃದ್ಧಿಗೆ ಮತ್ತು ತಮ್ಮ ಮುಂದಿನ ಉತ್ತಮ ಜೀವನ ರೂಪಿಸಲು ಮುಂದಾಗಬೇಕಾಗಿರುವ ಇವರೇ ಈ ರೀತಿ ತಂಬಾಕು ಸೇವನೆಗೆ ಗುರಿಯಾಗುತ್ತಿರುವುದು ನೋವಿನ ಸಂಗತಿ ಎಂದರು.
ನಗರದ ಕಿಂಗ್ಜಾರ್ಜ್ ಹಾಲ್ ರಸ್ತೆಯಿಂದ ಪ್ರಾರಂಭಗೊಂಡು ಜಾಥಾ ಮೆರವಣಿಗೆ ನಗರದ ಗೀತಾ ರಸ್ತೆ, ಸೂರಜ್ಮುಲ್ ವೃತ್ತ, ಗಾಂಧಿ ವೃತ್ತ, ಪ್ರಿಚರ್ಡ್ರಸ್ತೆ, ಆಂಡ್ರಸನ್ಪೇಟೆ ರಸ್ತೆಸೇರಿದಂತೆ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ನಡೆದ ಮೆರವಣಿಗೆಯಲ್ಲಿ ನೂರಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡು ಸಾರ್ವಜನಿಕರಲ್ಲಿ ತಂಬಾಕು ಬಿಡಿ ರೋಜ ಹಿಡಿ ಎಂದು ಹೇಳುವ ಮೂಲಕ ಅರಿವು ಮೂಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

