ಜಿಪಂನಲ್ಲಿ ನಿಲ್ಲದ ವರ್ಗಾವರ್ಗಿ
ಕನ್ನಡಪ್ರಭ ವಾರ್ತೆ, ಕೊಪ್ಪಳ, ಫೆ. 14
ಇಲ್ಲಿಯ ಜಿಲ್ಲಾ ಪಂಚಾಯ್ತಿ ಸಿಇಓ ಹುದ್ದೆಗೆ ಮೇಲಾಟ ಮುಂದುವರೆದಿದೆ. ಸರ್ಕಾರ ಇದಕ್ಕೆ ತ್ವರಿತವಾಗಿ ಸ್ಪಂದಿಸುವ ಮೂಲಕ ರಾಜಕೀಯ ಲೆಕ್ಕಾಚಾರಕ್ಕೆ ಇಂಬು ನೀಡುತ್ತಿದೆ. ಈಗ ಜಿಲ್ಲಾ ಪಂಚಾಯ್ತಿ ಸಿಇಓ ರಾಜಾರಾಂ ಅವರನ್ನು ಮತ್ತೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ವಿವಾದಕ್ಕೆ ನಾಂದಿಯಾಗಿದೆ.
ಸರ್ಕಾರದ ಆಧೀನ ಕಾರ್ಯದರ್ಶಿ ವಿಶ್ವನಾಥ ಪಿ. ಹಿರೇಮಠ ಫೆ. 12ರಂದು ಆದೇಶಿಸಿದ್ದಾರೆ. ಆದೇಶದ ಪ್ರತಿ 'ಕನ್ನಡಪ್ರಭ'ಕ್ಕೆ ಲಭ್ಯವಾಗಿದೆ. ಕೊಪ್ಪಳ ಜಿಪಂ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ ಹಾಗೂ ಮಾಜಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ನಡುವಿನ ಶೀತಲ ಸಮರವೇ ಅಧಿಕಾರಿಗಳ ವರ್ಗಾವರ್ಗಿಗೆ ಕಾರಣ ಎನ್ನಲಾಗಿದೆ. ಈ ಮೇಲಾಟ ಮುಗಿಯುವ ಸಾಧ್ಯತೆ ಕಾಣುತ್ತಿಲ್ಲ. ಸರ್ಕಾರದ ಆದೇಶ ಪ್ರಶ್ನಿಸಿ ರಾಜಾರಾಂ ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಏನಿದು ವಿವಾದ? ಜಿಪಂ ಸಿಇಓ ರಾಜಾರಾಂ ಅವರನ್ನು ವರ್ಗಾವಣೆ ಮಾಡಿ, ಅವರ ಸ್ಥಾನಕ್ಕೆ ಸರ್ಕಾರ ಡಿ.ಕೆ. ರವಿ ಅವರನ್ನು ನಿಯೋಜಿಸಿತ್ತು. ಆದರೆ, ವರ್ಗವಾಗಿರುವ ರಾಜಾರಾಂ ಅವರಿಗೆ ಯಾವುದೇ ಹುದ್ದೆಯನ್ನು ತೋರಿಸಿರಲಿಲ್ಲ. ಇದು ನಿಯಮಾನುಸಾರ ತಪ್ಪಾಗುತ್ತದೆ. ಬಲವಾದ ಕಾರಣವಿಲ್ಲದೆ ಮತ್ತು ಹುದ್ದೆಯನ್ನು ತೋರಿಸದೇ ಇರುವುದನ್ನು ಪ್ರಶ್ನಿಸಿ ರಾಜಾರಾಂ ಕೆಎಟಿ ಮೊರೆ ಹೋಗಿ, ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ತಂದಿದ್ದರು. ಅಲ್ಲದೆ, ಮರಳಿ ಸಿಇಓ ಆಗಿ ಕಾರ್ಯ ವಹಿಸಿಕೊಂಡಿದ್ದರು.
ಇದರಿಂದ ದಿಕ್ಕು ತೋಚದಾಗಿದ್ದ ಡಿ.ಕೆ. ರವಿ ಬಂದ ದಾರಿಗೆ ಸುಂಕ ಇಲ್ಲ ಎಂದು ಮರಳಿ ಬೆಂಗಳೂರಿಗೆ ಹೋಗಿದ್ದರು. ಆದರೆ, ಈಗ ಏಕಾಏಕಿ ರಾಜ್ಯ ಸರ್ಕಾರ ಮತ್ತೊಂದು ಆದೇಶ ಮಾಡಿ, ಕೊಪ್ಪಳ ಸಿಇಓ ರಾಜಾರಾಂ ಅವರನ್ನು ಆಡಳಿತಾತ್ಮಕ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಬೆಂಗಳೂರಿನ ಜಲಾನಯನ ಇಲಾಖೆ ಅಪರ ನಿರ್ದೇಶಕರನ್ನಾಗಿ ನೇಮಕ ಮಾಡಿ, ಆದೇಶ ಹೊರಡಿಸಿದೆ.
ಈ ಮೂಲಕ ಕೆಎಟಿಯಲ್ಲಿ ತಡೆಯಾಜ್ಞೆ ತನ್ನಿಂದ ತಾನೇ ತೆರವಾಗುತ್ತದೆ. ಈ ಮೂಲಕ ಡಿ.ಕೆ. ರವಿ ಅವರು ಕೊಪ್ಪಳ ಸಿಇಓ ಆಗಿ ಮುಂದುವರಿಯಲು ಅನುಕೂಲ ಮಾಡಿಕೊಡಲಾಗಿದೆ.
ಬಿಕ್ಕಟ್ಟು: ಅಚ್ಚರಿ ಎಂದರೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ವಿವೇಚನಾ ಕೋಟಾ ನಿಧಿ ಬಳಕೆ ಮಾಡಿಕೊಳ್ಳಲು ಉಂಟಾಗಿರುವ ವಿವಾದ ಇನ್ನು ಬಿಕ್ಕಟ್ಟಾಗಿಯೇ ಉಳಿದಿದೆ. ಈ ಹಿಂದಿನ ಸಿಇಓ ಅವರು ರು. 20 ಲಕ್ಷ ಬಿಡುಗಡೆ ಮಾಡಿ, ಆದೇಶ ಮಾಡಿದ್ದಾರೆ. ಇನ್ನು ರು. 1.80 ಕೋಟಿ ಇದೆ. ಈ ಪೈಕಿ ಈಗಾಗಲೇ ಟೆಂಡರ್ಗೆ ಅನುಮೋದನೆ ನೀಡಿ, ಇನ್ನೂ ರು. 30 ಲಕ್ಷ ಬಿಡುಗಡೆ ಮಾಡಬೇಕಾಗಿದೆ. ಈಗ ಸಿಇಓ ವರ್ಗಾವಣೆಯಿಂದ ಮತ್ತೆ ವಿವಾದ ತಾರಕಕ್ಕೇರುವುದು ಅನುಮಾನವಿಲ್ಲ.
ಮತ್ತೆ ನ್ಯಾಯಾಲಯದ ಮೊರೆ: ಅಚ್ಚರಿ ಎಂದರೆ ಈಗ ಸರ್ಕಾರ ಪುನಃ ಹೊರಡಿಸಿರುವ ಆದೇಶದ ವಿರುದ್ಧ ರಾಜಾರಾಂ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದೆ.
ಬಲ್ಲ ಮೂಲಗಳ ಪ್ರಕಾರ ಫೆಬ್ರವರಿ ತಿಂಗಳಲ್ಲಿ ಏಕಾಏಕಿ ವರ್ಗಾವಣೆ ಮಾಡುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ ಎನ್ನುವ ಕಾರಣ ಒಡ್ಡಿ ಮತ್ತೆ ಕೆಎಟಿ ಮೊರೆ ಹೋಗುವ ಸಾಧ್ಯತೆ ಇದೆ.
-ಸೋಮರಡ್ಡಿ ಅಳವಂಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

