ಉದ್ಯೋಗ ಖಾತ್ರಿ: ರು. 41 ಕೋಟಿ ಬಳಕೆ
ಕನ್ನಡಪ್ರಭ ವಾರ್ತೆ, ಕೊಪ್ಪಳ, ಮಾ. 9
ಪ್ರಸಕ್ತ ಹಣಕಾಸು ವರ್ಷ ಮುಗಿಯುವುದಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಆದರೆ, ಉದ್ಯೋಗ ಖಾತ್ರಿ ಅನುದಾನವನ್ನು ಇನ್ನೂ ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳಲು ಆಗಿಲ್ಲ. ಇಲ್ಲಿವರೆಗೆ ರು. 41 ಕೋಟಿ ವೆಚ್ಚ ಮಾಡಲಾಗಿದೆ. ಇನ್ನು ರು. 11 ಕೋಟಿ ವೆಚ್ಚ ಮಾಡದೆ ಹಾಗೇ ಕೊಳೆಯುತ್ತಿದೆ.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅತ್ಯಧಿಕ ಅಕ್ರಮ ನಡೆದಿರುವ ಯಲಬುರ್ಗಾ ತಾಲೂಕಿನಲ್ಲಿಯೇ ಈ ಸಾರಿಯೂ ಅತ್ಯಧಿಕ ಅನುದಾನ ಬಳಕೆ ಮಾಡಲಾಗಿದೆ. ಇಲ್ಲಿಯ ಅಕ್ರಮಕ್ಕೆ ಉದ್ಯೋಗ ಖಾತ್ರಿ ಯೋಜನೆಯ ಘಟಕ ಬೆಚ್ಚಿಬಿದ್ದಿತ್ತು. ಆದರೂ, ಈ ಸಾರಿ ರು. 15 ಕೋಟಿ ಬಳಕೆ ಮಾಡುವ ಮೂಲಕ ಜಿಲ್ಲೆಯಲ್ಲಿಯೇ ಅತ್ಯಧಿಕ ಅನುದಾನ ಬಳಕೆ ಮಾಡಿ ಪ್ರಥಮ ಸ್ಥಾನದಲ್ಲಿದೆ. ಇನ್ನು ಕುಷ್ಟಗಿ ಕೇವಲ ರು. 6.9 ಕೋಟಿ ಬಳಕೆ ಮಾಡುವ ಮೂಲಕ ಕೊನೆಯ ಸ್ಥಾನದಲ್ಲಿದೆ. ಗಂಗಾವತಿಯಲ್ಲಿ ರು. 10 ಕೋಟಿ ಹಾಗೂ ಕೊಪ್ಪಳ ತಾಲೂಕಿನಲ್ಲಿ ರು. 9.3 ಕೋಟಿ ಬಳಕೆ ಮಾಡಿಕೊಳ್ಳಲಾಗಿದೆ.
ಉಳಿದ ಅನುದಾನ: ಜಿಲ್ಲಾದ್ಯಂತ ಉದ್ಯೋಗ ಖಾತ್ರಿ ಯೋಜನೆ ಜಾರಿ ಮಾಡಲು ಸುಮಾರು ರು. 60 ಕೋಟಿ ಬಿಡುಗಡೆ ಮಾಡಲಾಗಿತ್ತು. ಅದಾದನ ನಂತರ ಅಕ್ರಮಗಳ ಕುರಿತು ಭಾರಿ ವಿವಾದವಾಗಿದ್ದರಿಂದ ಒಂದಿಷ್ಟು ಅನುದಾನ ಹಿಂಪಡೆಯಲಾಗಿದೆ ಎನ್ನಲಾಗಿದೆ. ಈಗ ರು. 41 ಕೋಟಿ ಬಳಕೆಯಾಗಿದ್ದರೂ ಇನ್ನೂ ರು. 11 ಕೋಟಿ ಹಾಗೇ ಉಳಿದಿದೆ. ಇದರ ಅವಧಿ ಮಾರ್ಚ್ ಅಂತ್ಯಕ್ಕೆ ಮುಗಿಯುತ್ತದೆ ಎನ್ನುವುದು ಜಿಪಂ ಅಧಿಕಾರಿಗಳ ವಿವರಣೆಯಾಗಿದೆ.
50 ಜನ ಕ್ರಿಮಿನಲ್: ಜಿಪಂ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಕ್ರಮ ಎಸಗಿದ ಸುಮಾರು 50ಕ್ಕೂ ಅಧಿಕ ಸಿಬ್ಬಂದಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗಿದೆ. ಅಚ್ಚರಿ ಎಂದರೆ ಇಷ್ಟೆಲ್ಲ ಆರೋಪದ ನಡುವೆಯೂ ಅವರೂ ಈಗಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಮೇಲೆ ಕ್ರಮ ಕೈಗೊಂಡರೆ, ಎಲ್ಲವೂ ಬಯಲಿಗೆ ಬರಲಿದೆ ಎನ್ನಲಾಗಿದೆ. ಪಾಸ್ವರ್ಡ್ ಕದ್ದವರು ಸಿಕ್ಕರೂ ಅವರ ಮೇಲೆ ಯಾವ ಕ್ರಮಕೈಗೊಳ್ಳಲಾಯಿತು ಎನ್ನುವ ಬಗ್ಗೆ ಜಿಪಂನಲ್ಲಿಯೇ ಅಧಿಕೃತ ಮಾಹಿತಿ ಇಲ್ಲ. ಆದರೆ, ಆರೋಪ ಎದುರಿಸುತ್ತಿರುವವರು ಕೆಲಸದಲ್ಲಿ ಇದ್ದಾರೆ ಎನ್ನುವುದರ ದೊಡ್ಡ ಪಟ್ಟಿಯೇ ಇದೆ. ವಿಚಾರಣೆಯೂ ಮುಂದುವರಿದಿದೆ. ಅಚ್ಚರಿ ಎಂದರೆ ಪಾಸ್ವರ್ಡ್ ಕದ್ದು, ಯಾರ್ಯಾರದೋ ಹಣವನ್ನು ಯಾರ್ಯಾರದೋ ಖಾತೆಗೆ ಜಮಾ ಮಾಡಿದ್ದು, ಅಲ್ಲದೆ, ಡ್ರಾ ಕೂಡಾ ಮಾಡಿದ್ದು ತನಿಖೆಯ ವೇಳೆ ಗೊತ್ತಾಗಿತ್ತು. ಆದರೆ, ಅದಾದ ನಂತರ ಅದರ ಜಾಲವನ್ನು ಭೇದಿಸುವ ಯತ್ನ ಕೈಗೊಂಡಿಲ್ಲ.
ಭಾರಿ ಅಕ್ರಮ: ಪ್ರತಿ ಸಾರಿಯೂ ಮಾರ್ಚ್ ತಿಂಗಳಲ್ಲಿಯೇ ಬಹುತೇಕ ಬಿಲ್ಗಳು ಪಾಸಾಗುತ್ತವೆ. ಈ ಸಾರಿಯೂ ಅಂಥ ಪ್ರಯತ್ನ ನಡೆದಿದ್ದು, ಭಾರಿ ಅಕ್ರಮ ನಡೆದಿರುವ ಸಾಧ್ಯತೆ ಇದೆ. ಈ ಬಗ್ಗೆ ಜಿಪಂ ವಿಶೇಷ ನಿಗಾ ಇಡಬೇಕಾಗಿದೆ. ಮಾರ್ಚ್ ಗೋಲ್ಮಾಲ್ಗೆ ಕಡಿವಾಣ ಹಾಕಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

