ಕಾರ್ಖಾನೆಗಳ ಪರ ಜಿಲ್ಲಾಡಳಿತ ಕೆಲಸ: ಪೂಜಾರ್
ಕನ್ನಡಪ್ರಭ ವಾರ್ತೆ, ಕೊಪ್ಪಳ, ಮಾ. 9
ತುಂಗಭದ್ರಾ ಜಲಾಶಯದ ನೀರನ್ನು ಜಿಲ್ಲೆಯ ಎಲ್ಲ ಕಾರ್ಖಾನೆಗಳು ಅಕ್ರಮವಾಗಿ ಪಡೆದು ಕೆಲಸ ನಡೆಸುತ್ತಿವೆ. ಜಲಾಶಯದ ಪಕ್ಕದಲ್ಲಿಯೇ ಬೋರ್ವೆಲ್ ಕೊರೆಸಿ ನೀರು ಪೂರೈಕೆ ಮಾಡಿಕೊಳ್ಳುತ್ತಿವೆ. ಇಷ್ಟೆಲ್ಲ ಅಕ್ರಮ ನಡೆದರೂ ಜಿಲ್ಲಾಡಳಿತ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳು ಮೌನವಹಿಸಿದ್ದಾರೆ ಎಂದು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (ಟಿಯುಸಿಐ) ರಾಜ್ಯಾಧ್ಯಕ್ಷ ಡಿ.ಎಚ್. ಪೂಜಾರ್ ಆಕ್ರೋಶ ವ್ಯಕ್ತಪಡಿಸಿದರು.
ಕೊಪ್ಪಳದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಖಾನೆ ಪರ ಜಿಲ್ಲಾಧಿಕಾರಿ ಕೆಲಸ ಮಾಡುತ್ತಿದ್ದಾರೆ. ಕಾರ್ಖಾನೆಗಳು ಅತಿ ಕಡಿಮೆ ವೇತನ ನೀಡುತ್ತಿವೆ. ಉತ್ತೇಜನ ಭತ್ಯೆ (ಇನ್ಸೆಂಟಿವ್), ಇಫಿಎಫ್ ಬೋನಸ್, ಸುರಕ್ಷಾ ಸೌಕರ್ಯ ಸೇರಿದಂತೆ ಇತರ ಸೌಲಭ್ಯವನ್ನು ನೀಡಲು ಹಿಂದೇಟು ಹಾಕುತ್ತಿವೆ ಎಂದು ಆರೋಪಿಸಿದರು.
ಕಾರ್ಮಿಕ ಕಾಯ್ದೆಗಳ ಉಲ್ಲಂಘನೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಜಿಲ್ಲಾಡಳಿತ ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.
ತುಂಗಭದ್ರಾ ಜಲಾಶಯದಿಂದ ಕಾರ್ಖಾನೆಗಳಿಗೆ ಪಂಪ್ಸೆಟ್ ಮೂಲಕ ನಿತ್ಯ ನೀರು ಹರಿಸಲಾಗುತ್ತಿದೆ. ಇದರಿಂದ ರೈತರ ಕೃಷಿಗೆ ಮತ್ತು ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ. ಜಲಾಶಯದ ಪಕ್ಕದಲ್ಲಿಯೇ ಕಾರ್ಖಾನೆಗಳು ಬೋರ್ವೆಲ್ ಕೊರೆಯಿಸುತ್ತಿವೆ. ಈ ಬಗ್ಗೆಯೂ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿಲ್ಲ. ಅಲ್ಲದೇ, ಕಾರ್ಖಾನೆಗಳು ಕಲುಷಿತ ನೀರು, ಬೂದಿ, ಹೊಗೆ ಇತರ ತಾಜ್ಯವನ್ನು ಶುದ್ಧೀಕರಿಸದೆ ನೇರವಾಗಿ ಬಿಡುತ್ತಿರುವುದರಿಂದ ಪರಿಸರ ಮಾಲಿನ್ಯವಲ್ಲದೆ, ರೈತರ ಬೆಳೆ ನಾಶವಾಗುತ್ತಿವೆ ಎಂದು ಕಿಡಿಕಾರಿದರು.
ಹಿರೇಬಗನಾಳದ ಕೋಕಾ ಕೋಲಾ ಬೇವರೆಜಸ್ ಪ್ರೈ.ಲಿ. ಕಂಪನಿ ಅಧಿಕೃತವಾಗಿ ಪ್ರಕಟಣೆ ಮಾಡದೆ ಗುಪ್ತವಾಗಿ ಅರ್ಜಿ ಕರೆದು ಕಾನೂನು ಬಾಹಿರವಾಗಿ ಹೊಸದಾಗಿ ನೇಮಕಾತಿ ಮಾಡಿಕೊಳ್ಳುತ್ತಿರುವುದನ್ನು ಸಂಘಟನೆ ವಿರೋಧಿಸಿದೆ ಎಂದರು.
ಸಂಘಟನೆ ಮುಖಂಡ ಕೆ.ಬಿ. ಗೋನಾಳ ಮಾತನಾಡಿದರು. ಉಮೇಶ, ಗಣಪ, ಪಂಪಣ್ಣ, ಟಿಯುಸಿಐ ಜಿಲ್ಲಾ ಕಾರ್ಯದರ್ಶಿ ಬಸವರಾಜ ನರೇಗಲ್, ಹನುಮೇಶ ಪೂಜಾರ್ ಸುದ್ದಿಗೋಷ್ಠಿಯಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

