ಕೊಪ್ಪಳ

ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಎಚ್.ಎಸ್. ಪಾಟೀಲ?

Published On :

ಕನ್ನಡಪ್ರಭ ವಾರ್ತೆ, ಕೊಪ್ಪಳ, ಮಾ. 9
ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಈ ಸಾರಿ ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದಲ್ಲಿ ಮಾರ್ಚ್ 30 ಹಾಗೂ 31ರಂದು ನಡೆಸಲು ನಿರ್ಧರಿಸಿದ್ದು, ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಆದರೆ, ಪೈಪೋಟಿಯಲ್ಲಿ ಅನೇಕರ ಹೆಸರುಗಳಿವೆ.
ಈ ಕುರಿತು ಮಾ. 10ರಂದು ನಗರದ ಸಾಹಿತ್ಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸದಸ್ಯರ ಹಾಗೂ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಮಧ್ಯಾಹ್ನದ ವೇಳೆಗೆ ಸಮ್ಮೇಳನಾಧ್ಯಕ್ಷರ ಹೆಸರನ್ನು ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಸಭೆಯಲ್ಲಿ ಸರ್ವಾನುಮತದಿಂದ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡುವ ಕುರಿತು ಚಿಂತನೆ ನಡೆಸಿರುವ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವೀರಣ್ಣ ನಿಂಗೋಜಿ, ಎಲ್ಲರ ಅಭಿಪ್ರಾಯ ಪಡೆಯಲು ಮುಂದಾಗಿದ್ದಾರೆ.
ಲಭ್ಯ ಮಾಹಿತಿ ಪ್ರಕಾರ ಅಲ್ಲಮಪ್ರಭು ಬೆಟ್ಟದೂರು, ಎಚ್.ಎಸ್. ಪಾಟೀಲ, ಕೆ.ಬಿ. ಬ್ಯಾಳಿ, ವೀರಣ್ಣ ರಾಜೂರು, ಎಸ್.ಬಿ. ಪಾಟೀಲ ಗುಂಡೂರು ಅವರ ಹೆಸರು ಚಾಲ್ತಿಯಲ್ಲಿವೆ. ಇದರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವುದೇ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ, ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು, ಯಾರ ಪರವಾಗಿ ಅಧಿಕ ಒಲವು ವ್ಯಕ್ತವಾಗುತ್ತದೆ ಎನ್ನುವುದನ್ನು ತಿಳಿದುಕೊಂಡು, ಅಂತಿಮವಾಗಿ ಆಯ್ಕೆ ಮಾಡುವ ಚಿಂತನೆ ನಡೆಸಲಾಗಿದೆ.
ಒತ್ತಡ: ಸಮ್ಮೇಳನ ದಿನಾಂಕ ನಿಗದಿ ಮಾಡುತ್ತಿದ್ದಂತೆ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡುವ ಕುರಿತು ಅನೇಕ ಒತ್ತಡಗಳು ಬರಲಾರಂಭಿಸಿವೆ. ಆದರೆ, ಈ ಬಗ್ಗೆ ಕಸಾಪ ತಲೆಕೆಡಿಸಿಕೊಳ್ಳದೆ ಸಭೆಯಲ್ಲಿ ಆಯ್ಕೆ ಮಾಡುವುದಾಗಿ ಹೇಳಿಕೊಂಡಿದೆ.
ಹಿರಿಯರು ಹಾಗೂ ಸಾಹಿತಿಕ ವಲಯದಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸುವುದರ ವಿಶೇಷವಾಗಿ ಎಲ್ಲರೂ ಗೌರವಿಸುವಂತಹ ವ್ಯಕ್ತಿಯನ್ನೇ ಆಯ್ಕೆ ಮಾಡುವುದಕ್ಕೆ ಭಾರಿ ಕಸರತ್ತು ನಡೆಸಲಾಗಿದೆ. ರೇಸ್ನಲ್ಲಿರುವ ಹೆಸರಿನವರು ನೇರವಾಗಿ ತಾವೇ ನಮ್ಮನ್ನು ಆಯ್ಕೆ ಮಾಡುವಂತೆ ಒತ್ತಡ ಹಾಕುತ್ತಿಲ್ಲವಾದರೂ, ಕೆಲವೇ ಕೆಲವರು ಯಾರಿಂದಲೂ ಕರೆ ಮಾಡಿಸಿ, ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ. ಆದರೆ, ಸರದಿಯಲ್ಲಿ ಇಲ್ಲದವರೂ ಅನೇಕರು ಒತ್ತಡ ಹಾಕುತ್ತಿದ್ದಾರೆ ಎನ್ನುವುದು ಮಾತ್ರ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಪೈಪೋಟಿ: ಅಚ್ಚರಿ ಎಂದರೆ ತೀವ್ರ ಪೈಪೋಟಿಯಲ್ಲಿ ಅಲ್ಲಮಪ್ರಭು ಬೆಟ್ಟ್ಟದೂರು ಹಾಗೂ ಎಚ್.ಎಸ್. ಪಾಟೀಲ ಅವರ ಹೆಸರುಗಳಿವೆ ಎನ್ನಲಾಗುತ್ತಿದೆ. ಇವರು ಎಲ್ಲರಿಗೂ ಆತ್ಮೀಯರಾಗಿದ್ದಾರೆ. ಅವರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಚಿಂತನೆಯಲ್ಲಿ ತೊಡಗಿರುವ ಕನ್ನಡ ಸಾಹಿತ್ಯ ಪರಿಷತ್ ಹಿರಿಯರಾಗಿರುವ ಎಚ್.ಎಸ್. ಪಾಟೀಲ ಅವರ ಕಡೆಗೆ ಒಲವು ತೋರುವ ಸಾಧ್ಯತೆ  ಅಧಿಕವಾಗಿರುವುದರಿಂದ ಅವರೇ ಆಯ್ಕೆಯಾಗುತ್ತಾರೆ ಎಂದೇ ಹೇಳಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.