ಮಂಡ್ಯ

ವೈಭವದ ವೈರಮುಡಿ ಉತ್ಸವಕ್ಕೆ ಸಜ್ಜು

Published On :

ಕ.ಪ್ರ ವಾರ್ತೆ ್ಣ ಮೇಲುಕೋಟೆ ್ಣ ಮಾ.19
ಚೆಲುವರಾಯಸ್ವಾಮಿಯವರ ವೈರಮುಡಿ ಉತ್ಸವವನ್ನು ವೈಭವದಿಂದ ನಡೆಸಲು ಜಿಲ್ಲಾಡಳಿತ ಸಜ್ಜಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣಯ್ಯ ತಿಳಿಸಿದರು.
ಮಂಗಳವಾರ ಜಾತ್ರಾ ಮಹೋತ್ಸವ ಅಂಗವಾಗಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಕುಡಿಯುವ ನೀರು, ಸ್ವಚ್ಛತೆ ಹಾಗೂ ನಿರಂತರ ವಿದ್ಯುತ್ ಪೂರೈಕೆಗೆ ಆದ್ಯತೆ ನೀಡಲಾಗಿದೆ. ಭಕ್ತರಿಗೆ ಯಾವುದೆ ತೊಂದರೆಯಾಗದಂತೆ ದೇವರ ದರ್ಶನ ಪಡೆಯುವಂತಾಗಲು ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಹತ್ತು ಕಡೆ ಬೃಹತ್ ಪರದೆ ಅಳವಡಿಸಿ ದೇವಾಲಯದ ಒಳಭಾಗದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮ ಬಿತ್ತರಿಸಲು ವ್ಯವಸ್ಥೆ ಮಾಡಲಾಗಿದೆ. ಮೇಲುಕೋಟೆಯ ಪ್ರಮುಖ ಸ್ಥಳಗಳಲ್ಲಿ ಧ್ವನಿವರ್ಧಕ ಅಳವಡಿಸಿ ಭಕ್ತರಿಗೆ ಕ್ಷೇತ್ರದ ಸಮಗ್ರ ಮಾಹಿತಿ ನೀಡಲಾಗುತ್ತದೆ ಎಂದರು. ಮೇಲುಕೋಟೆ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಯಣ್ಣ, ಪಾಂಡವಪುರ ಉಪವಿಭಾಗಾಧಿಕಾರಿ ಲತಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜಣ್ಣ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ವೇಣುಗೋಪಾಲ್, ವಾರ್ತಾಧಿಕಾರಿ ರಾಜು, ತಹಸೀಲ್ದಾರ್ ಶಿವಕುಮಾರಸ್ವಾಮಿ ಇದ್ದರು.

ಕಿರೀಟ ತರಲು ಕೈಪಿಡಿ ನಿಯಮ
ವೈರಮುಡಿ ಉತ್ಸವದಂದು ಕಿರೀಟ ತರುವ ಸ್ಥಾನಿಕರ ಕರ್ತವ್ಯದ ಸಂಬಂಧ ದೇವಾಲಯದ ಕೈಪಿಡಿ ನಿಯಮ ಅನುಸರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕೃಷ್ಣಯ್ಯ ಸ್ಪಷ್ಟಪಡಿಸಿದರು.  ವೈರಮುಡಿ ಉತ್ಸವದಂದು ಜಿಲ್ಲಾ ಖಜಾನೆಯಿಂದ ಕಿರೀಟ ತರುವ ಸಂದರ್ಭ ಉಂಟಾಗುವ ಸ್ಥಾನೀಕರ ವಿವಾದದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ ಕಳೆದ ಬಾರಿಯೇ ಅಂದಿನ ಜಿಲ್ಲಾಧಿಕಾರಿಗಳು ಕೈಪಿಡಿಯ ನಿಯಮದಂತೆ ಸಮಸ್ಯೆ ಬಗೆಹರಿಸಿದ್ದು, ಹೊಸದಾಗಿ ಆದೇಶ ನೀಡುವ ಅಗತ್ಯವಿಲ್ಲ. ಹಿಂದಿನ ಜಿಲ್ಲಾಧಿಕಾರಿಗಳು ನೀಡಿದ ಅದೇಶದಂತೆ  ಕ್ರಮ ವಹಿಸಲಾಗುತ್ತದೆ. ಕೊನೆ ಗಳಿಗೆಯಲ್ಲಿ ಯಾವುದೇ ಗೊಂದಲವಾಗದಂತೆ ಈ ಬಾರಿ ಕ್ರಮ ವಹಿಸಿ ಸಮಸ್ಯೆ ಇಲ್ಲದಂತೆ ಉತ್ಸವ ನಿರ್ವಹಿಸಲಾಗುತ್ತದೆ ಎಂದರು.

ಬ್ರಹ್ಮೋತ್ಸವಕ್ಕೆ ಚಾಲನೆ
ಚೆಲುವನಾರಾಯಣಸ್ವಾಮಿಯವರ ಪ್ರಖ್ಯಾತ ವೈರಮುಡಿ ಬ್ರಹ್ಮೋತ್ಸವ ಮಂಗಳವಾರ ನಡೆದ ಧ್ವಜಾರೋಹಣ ಕಾರ್ಯಕ್ರಮದೊಂದಿಗೆ ವಿದ್ಯುಕ್ತವಾಗಿ ಆರಂಭವಾಯಿತು. ಗರುಡ ಧ್ವಜವನ್ನು ಆರೋಹಣ ಮಾಡಿ ಜಾತ್ರಾ ಮಹೋತ್ವಕ್ಕೆ ದೇವಾನುದೇವತೆಗಳಿಗೆ ಆಹ್ವಾನ ನೀಡುವ ಶಾಸ್ತ್ರೋಕ್ತವಿಧಿ ವಿಧಾನಗಳನ್ನು ದೇವಾಲಯದಲ್ಲಿ ನೆರವೇರಿಸಲಾಯಿತು. ಮಾ. 22ರ ಶುಕ್ರವಾರ ಬ್ರಹ್ಮೋತ್ಸವದ ಪ್ರಧಾನ ಉತ್ಸವವಾದ ವೈರಮುಡಿ ಕಿರೀಟಧಾರಣ ಮಹೋತ್ಸವ ವೈಭವದಿಂದ ನಡೆಯಲಿದೆ. ಅಂದು ರಾತ್ರಿ 7 ಗಂಟೆಯ ವೇಳೆಗೆ ರಾಜಮಡಿ ಕಿರೀಟ ಪರಿಶೀಲಿಸಲಾಗುತ್ತದೆ. ವೈರಮುಡಿ ಕಿರೀಟವನ್ನು ಶ್ರೀದೇವಿ, ಭೂದೇವಿಯರೊಂದಿಗೆ ಗರುಡಾರೂಢನಾಗಿ ಅಲಂಕಾರಗೊಂಡ ಚೆಲುವರಾಯಸ್ವಾಮಿಗೆ ಧಾರಣೆ ಮಾಡಲಾಗುತ್ತದೆ. ರಾತ್ರಿ 8 ಗಂಟೆಗೆ ಆರಂಭವಾಗುವ ವೈರಮುಡಿ ಬೆಳಗಿನ 3.30 ರವರೆಗೆ ನಡೆಯಲಿದೆ. ನಂತರ ಮೈಸೂರು ಅರಸ ರಾಜೊಡೆಯರ್ ಸಮರ್ಪಿರುವ ರಾಜಮುಡಿ ಕಿರೀಟವನ್ನು ಸ್ವಾಮಿಗೆ ತೊಡಿಸಲಾಗುತ್ತದೆ.

ಕುಡಿಯುವ ನೀರಿಗೆ ಆದ್ಯತೆ
ಮಂಡ್ಯ, ಪಾಂಡವಪುರ, ಕೆ.ಆರ್.ಪೇಟೆ, ನಾಗಮಂಗಲ ಮುಂತಾದ ಪುರಸಭೆಗಳಿಂದ ಹೆಚ್ಚಿನ ಪೌರಕಾರ್ಮಿಕರನ್ನು ಮೇಲುಕೋಟೆಗೆ ನಿಯೋಜಿಸಲಾಗಿದ್ದು, ಸದಾಕಾಲ ಸ್ವಚ್ಛತೆ ಕಾಪಾಡಲು ಮೇಲುಕೋಟೆ ಗ್ರಾಮ ಪಂಚಾಯಿತಿ ಮತ್ತು ಪಾಂಡವಪುರ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಕುಡಿಯುವ ನೀರಿಗೆ ಯಾವುದೇ ತೊಂದರೆ ಎದುರಾಗದಂತೆ ಕ್ರಮ ವಹಿಸಲಾಗಿದ್ದು, ಟ್ಯಾಂಕರ್ ಮೂಲಕವೂ ನೀರು ಪೂರೈಸಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.