ಮೇಕೆದಾಟು- ಬಿಳಿಗುಂಡ್ಲು ನಡುವೆ ಡ್ಯಾಂ ನಿರ್ಮಿಸಿ
ಕ.ಪ್ರ.ವಾರ್ತೆ ಮೈಸೂರು ಆ. 2
ಕರ್ನಾಟಕ ರಾಜ್ಯದಲ್ಲಿ ಮತ್ತಷ್ಟು ಕಾವೇರಿ ಅಚ್ಚುಕಟ್ಟು ಪ್ರದೇಶವನ್ನು ವಿಸ್ತರಿಸಿಕೊಳ್ಳಲು ಮೇಕೆದಾಟು- ಬಿಳಿಗುಂಡ್ಲುವಿನ ನಡುವೆ ಹೊಸದೊಂದು ಅಣೆಕಟ್ಟು ನಿರ್ಮಿಸಿದರೆ ರಾಜ್ಯಕ್ಕೆ ಹೆಚ್ಚುವರಿ 50 ಟಿಎಂಸಿ ನೀರು ದೊರೆಯಲಿದೆ ಎಂದು ಮೇಲುಕೋಟೆ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅಭಿಪ್ರಾಯಪಟ್ಟರು.
ಶುಕ್ರವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುರುವಾರದಿಂದ ಕಾವೇರಿ ಜಲಾಶಯದಿಂದ ತಮಿಳುನಾಡಿಗೆ 80 ಸಾವಿರ ಕ್ಯುಸೆಕ್ ನೀರು ಹರಿದು ಹೋಗುತ್ತಿದೆ. ಇದರಿಂದ ಬರೋಬ್ಬರಿ 11 ಟಿಎಂಸಿ ನೀರು ತಮಿಳುನಾಡು ಪಾಲಾಗಲಿದೆ. ಈ ನೀರು ಮೆಟ್ಟೂರು ಅಣೆಕಟ್ಟು ಮೂಲಕ ಬಂಗಾಳ ಕೊಲ್ಲಿ ಸೇರುತ್ತದೆಯೇ ಹೊರತು ಉಪಯೋಗವಾಗುವುದಿಲ್ಲ. ಅದೇ ನಮ್ಮ ರಾಜ್ಯದಲ್ಲಿ ಹೊಸ ಅಣೆಕಟ್ಟು ನಿರ್ಮಿಸಿದರೆ ಈ ನೀರನ್ನು ಬಳಸಿಕೊಳ್ಳಬಹುದು. ಜತೆಗೆ ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯೂ ಸಾಧ್ಯವಾಗಲಿದೆ ಎಂದರು.
1991 ಮೂರ್ಖರ ವರ್ಷ: ಕರ್ನಾಟಕದಿಂದ ತಮಿಳುನಾಡಿಗೆ 192 ಟಿಎಂಸಿ ನೀರು ಬಿಡಲು 1991ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ ರಾಜ್ಯದ ಪ್ರತಿನಿಧಿಗಳು ಮೂರ್ಖತನ ಪ್ರದರ್ಶಿಸಿದರು. ಹಾಗಾಗಿ ಆ ವರ್ಷವನ್ನು 'ಮೂರ್ಖರ ವರ್ಷ' ಎಂದೇ ಕರೆಯಬಹುದು. ಜೂನ್ನಲ್ಲಿ 10, ಜುಲೈನಲ್ಲಿ 34, ಆಗಸ್ಟ್ನಲ್ಲಿ 40, ಸೆಪ್ಟಂಬರ್ನಲ್ಲಿ 50, ಅಕ್ಟೋಬರ್ನಲ್ಲಿ 20 ಹಾಗೂ ಡಿಸೆಂಬರ್ನಿಂದ ಮೇವರೆಗೆ 3 ಟಿಎಂಸಿ ನೀರು ಬಿಡುತ್ತೇವೆ ಎಂದು ಸಹಿ ಹಾಕಿದ ಮಹಾತ್ಮರಿಗೆ ಮುಂದೊಂದು ದಿನ ಸಂಕಷ್ಟ ಎದುರಾಗುತ್ತೇ ಎಂದೇ ಗೊತ್ತೆ ಆಗಲಿಲ್ಲ. ಸಂಕಷ್ಟದಲ್ಲೂ ಈ ಒಪ್ಪಂದವನ್ನೇ ಅನುಸರಿಸುತ್ತೇವೆ ಎಂದು ವಾಗ್ದಾನ ನೀಡಿ ರೈತರನ್ನು ಬಲಿ ತೆಗೆದುಕೊಂಡರು ಎಂದು ಕಿಡಿಕಾರಿದರು.
ನಾಲೆ ಆಧುನೀಕರಣ ಇಲ್ಲ: ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಬರ ವ್ಯಾಪಿಸಿತ್ತು. ಆಗಲಾದರೂ 600 ಕೋಟಿ ವ್ಯಯಿಸಿ ರಾಜ್ಯದ ನಾಲೆಗಳನ್ನು ಆಧುನೀಕರಣ ಮಾಡಿದ್ದಲ್ಲಿ ಈಗ ಉತ್ತಮ ಫಸಲು ಪಡೆಯಬಹುದಿತ್ತು. ಈ ಹಿಂದಿನ ಬಿಜೆಪಿ ಸರ್ಕಾರಕ್ಕೆ ಒಳ್ಳೆ ಕೆಲಸ ಮಾಡುವ ಇಚ್ಛಾಶಕ್ತಿಯೇ ಇರಲಿಲ್ಲ ಎಂದು ಆರೋಪಿಸಿದರು.
ಸಿದ್ದು ಸುದ್ದಿ ಮಾಡಬಾರದು: ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದಕ್ಕೂ ಸಿದ್ಧರಾಗದೆ ಸುದ್ದಿ ಮಾಡುತ್ತಿದ್ದಾರೆ. ಅದರ ಬದಲಾಗಿ ಮೊದಲು ಸಿದ್ಧರಾಗಿ ನಂತರ ಸುದ್ದಿ ಮಾಡಬೇಕು. ಸಕ್ಕರೆ ಕಾರ್ಖಾನೆಗಳ ಪುನಾರಾರಂಭ, ಕೃಷಿ ಆಯೋಗದ ಸ್ಪಷ್ಟ ಉದ್ದೇಶ, ಆರ್ಥಿಕ ವಿಕೇಂದ್ರಿಕರಣದ ಬಗ್ಗೆ ಮುಖ್ಯಮಂತ್ರಿ ಮಾತನಾಡುತ್ತಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

