ಸಾಂಸ್ಕೃತಿಕ ನಗರಿ ಜಾಗತಿಕವಾಗಿ ಬೆಳೆಯಲಿ
ಕ.ಪ್ರ.ವಾರ್ತೆ ಮೈಸೂರು ಆ. 6
ಮೈಸೂರು ಜಾಗತಿಕ ನಗರವಾಗಿ ಬೆಳೆಯುವ ಅಗತ್ಯವಿದೆ ಎಂದು ಪ್ರವಾಸೋದ್ಯಮ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಹೇಳಿದರು.
ರೋಟರಿ ಮೈಸೂರು ಪಶ್ಚಿಮ ಸಂಸ್ಥೆ ಹಾಗೂ ಮೈಸೂರು ಪ್ರವಾಸೋದ್ಯಮಿಗಳ ಸಂಘ ಸಂಯುಕ್ತಾಯಶ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ಮೈಸೂರು - ಅಂತಾರಾಷ್ಟ್ರೀಯ ಪ್ರವಾಸಿಗರ ಕುರಿತಾದ- ಸವಾಲುಗಳು ಮತ್ತು ಪರಿಹಾರ ಎಂಬ ವಿಷಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ನಿರೀಕ್ಷಿತ ಗುರಿ ಸಾಧಿಸಿಲ್ಲ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರು ಮಾತ್ರ ಗುರುತಿಸಿಕೊಂಡಿದೆ. ಆದರೆ ಬೆಂಗಳೂರಿಗಿಂತಲೂ ಉತ್ತಮ ತಾಣ ಹಾಗೂ ಸ್ಥಾನಮಾನ ಹೊಂದಿರುವ ಮೈಸೂರು ಜಾಗತಿಕ ನಗರವಾಗಿ ಬೆಳೆಯುವಲ್ಲಿ ನಿರೀಕ್ಷಿತ ಗುರಿ ಸಾಧಿಸಿಲ್ಲ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎರಡನೇ ನಗರವಾಗಿ ಬೆಳೆಯುವಲ್ಲಿ ಸಮಗ್ರ ಚಿಂತನೆ ಅಗತ್ಯ ಎಂದರು.
ದೃಷ್ಟಿಕೋನ ಬದಲಾಗಲಿ: ಮೈಸೂರು ಎಂದರೇ ಕೆಲವರು ಅರಮನೆ ನಗರ, ಮತ್ತೆ ಹಲವರು ಪಾರಂಪರಿಕ ಕಟ್ಟಡಗಳ ನಗರ, ಇನ್ನೂ ಕೆಲವರು ಬೃಂದಾವನ ಜಲಾಶಯ, ಚಾಮುಂಡಿಬೆಟ್ಟ ಹಾಗೂ ಮೃಗಾಲಯ ತಾಣಗಳೆಂದು ಗುರುತಿಸುವರು. ಆದರೆ ಇದಕ್ಕೆ ಹೊರತಾಗಿ ಎಲ್ಲರೂ ಒಂದೇ ರೀತಿಯಲ್ಲಿ ಮೈಸೂರನ್ನು ಗುರುತಿಸುವಂತೆ ಆಗಬೇಕು ಎಂದು ಅವರು ತಿಳಿಸಿದರು.
ಸ್ನೇಹಪೂರ್ವ ಆತಿಥ್ಯ ಬೇಕು: ಪ್ರವಾಸಿಗರ ಆಕರ್ಷಣೆಗೆ ಸೂಕ್ತವಾದ ನಗರದ ಸ್ವಚ್ಛತೆ, ಮೂಲ ಸೌಲಭ್ಯಗಳು, ಇಲ್ಲಿನ ಹೋಟಲ್ಗಳಲ್ಲಿ ಸ್ನೇಹಪೂರ್ವ ಆತಿಥ್ಯ ದೊರಕಬೇಕಿದೆ. ಬ್ರೆಜಿಲ್, ಸಿಂಗಪೂರ್ ಮತ್ತಿತರ ದೇಶಗಳನ್ನು ಅಧ್ಯಯನ ಮಾಡಿ ಇಲ್ಲಿನ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ ಎಂದರು.
ಪ್ರವಾಸೋದ್ಯಮದ ಅಭಿವೃದ್ಧಿ ಮುಖ್ಯ: ಪ್ರವಾಸೋದ್ಯಮದ ಅಭಿವೃದ್ಧಿಗೆ ವಿಮಾನ ಸೌಕರ್ಯವು ಬಹುಮುಖ್ಯ. ಆದರೆ ಇಲ್ಲಿನ ವಿಮಾನ ನಿಲ್ದಾಣದಿಂದ ಕೇವಲ ಮೈಸೂರಿನಿಂದ ಬೆಂಗಳೂರಿಗೆ ಮಾತ್ರ ಸೇವೆ ಒದಗಿಸುವ ಚಿಂತನೆ ಮಾಡಿದರೆ ಸಾಲದು. ಕರ್ನಾಟಕದ ಹೊರಗೂ ಸಹ ಸೇವೆ ಕಲ್ಪಿಸಿದಾಗ ಹೆಚ್ಚಿನ ಅಭಿವೃದ್ಧಿ ನಿರೀಕ್ಷಿಸಬಹುದು.
ಮೈಸೂರಿನವರೇ ಆದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿರುವ ಈ ಸಂದರ್ಭವನ್ನು ಸರಿಯಾಗಿ ಬಳಸಿಕೊಂಡು ಅಭಿವೃದ್ಧಿಗೆ ಚಿಂತನ ನಡೆಸಬೇಕು ಎಂದು ಆಶಿಸಿದರು.
ನಂತರ ಗೋ ಬಿಯ್ಯಾಂಡ್ ಎಕ್ಸಪೋ ಅಂಗವಾಗಿ ನಡೆದ ವಿಚಾರ ಸಂಕಿರಣದಲ್ಲಿ ಪ್ರವಾಸೋದ್ಯಮಕ್ಕೆ ಬೇಕಾದ ವ್ಯವಸ್ಥೆಗಳ ಕುರಿತು ಜಿಲ್ಲಾಧಿಕಾರಿ ಸಿ. ಶಿಖಾ, ಆರೋಗ್ಯ ಪ್ರವಾಸೋದ್ಯಮ ಕುರಿತು ಐವಿಎಸಿ ಸಂಸ್ಥಾಪಕ ಡಾ. ತಲವಾನೆ ಕೃಷ್ಣ, ಆತಿಥೋದ್ಯಮ ಕುರಿತು ವಿಂಡ್ ಫ್ಲವರ್ ರೆಸಾರ್ಟ್ ಮಾಲೀಕ ಪಿ.ವಿ. ಗಿರಿ ಹಾಗೂ ವಿದ್ಯಾ ಪ್ರವಾಸೋದ್ಯಮ ಕುರಿತು ಮೈರಾ ಸಂಸ್ಥಾಪಕಿ ಡಾ. ಶಾಲಿನಿ ಅರಸ್ ಮಾತನಾಡಿದರು.
ರೋಟರಿ ಮೈಸೂರು ಪಶ್ಚಿಮ ಸಂಸ್ಥೆ ಅಧ್ಯಕ್ಷ ಎಸ್.ಎನ್. ಪಾರ್ಥನಾಥ್ ಸ್ವಾಗತಿಸಿದರು. ಗೋ ಬಿಯ್ಯಾಂಡ್ ಎಕ್ಸ್ಪೋ ಅಧ್ಯಕ್ಷ ಜೆ.ಪಿ. ಅಯ್ಯಣ್ಣ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

