ಕಳಪೆ ಕಾಮಗಾರಿ: ಆದಿವಾಸಿಗಳ ಪ್ರತಿಭಟನೆ
ಕ.ಪ್ರ.ವಾರ್ತೆ, ಎಚ್.ಡಿ.ಕೋಟೆ, ಆ. 12-
ಅತ್ಯಂತ ಕಳಪೆ ಮಟ್ಟದ ಮರಳನ್ನು ಬಳಸಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಆದಿವಾಸಿ ಮುಖಂಡರು ಸೋಮವಾರ ಕಾಮಗಾರಿ ತಡೆದು ಪ್ರತಿಭಟಿಸಿದರು.
ತಾಲೂಕಿನ ಸೊಳ್ಳೇಪುರ ಪುನರ್ ವಸತಿ ಗ್ರಾಮದಲ್ಲಿ ಏಕಲವ್ಯ ಮಾದರಿ ಶಾಲೆಯನ್ನು ಕೇಂದ್ರ ಸರ್ಕಾರದ ಕಡ್ಡಾಯ ಶಿಕ್ಷಣ ಯೋಜನೆಯಡಿ 12 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದು, ಇಲ್ಲಿ ಕಾಮಗಾರಿಗೆ ಬಳಸುತ್ತಿರುವ ಮರಳು ಕಳಪೆಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಗ್ರಾಪಂ ಸದಸ್ಯ ಜಿ.ಸ್ವಾಮಿ ಮಾತನಾಡಿ ಆದಿವಾಸಿಗಳ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರು. ಹರಿದು ಬರುತ್ತಿದೆ. ಆದರೆ ಮಧ್ಯವರ್ತಿಗಳು, ಗುತ್ತಿಗೆದಾರರು ಹಾಗೂ ಎಂಜಿನಿಯರ್ಗಳು ಹಣದ ಆಸೆಗಾಗಿ ಗಿರಿಜನರ ಬದುಕನ್ನೇ ಕಸಿದುಕೊಳ್ಳುತ್ತಿದ್ದಾರೆ. 12 ಕೋಟಿ ವೆಚ್ಚದಲ್ಲಿ ನಿರ್ಮಿಸಿರುತ್ತಿರುವ ಆ ಏಕಲವ್ಯ ಕಟ್ಟಡಕ್ಕೆ ಕಳಪೆ ಮರಳನ್ನು ಹಾಕುತ್ತಿದ್ದಾರೆ. ಈ ಭಾಗದ ವಲಯ ಅರಣ್ಯಾಧಿಕಾರಿಯ ಬೆಂಬಲದೊಂದಿಗೆ ಕಾಡಿನಲ್ಲಿ ಸಿಗುವ ಕೊಚ್ಚಲು ಮಣ್ಣು ಮಿಶ್ರಿತ ಮರಳನ್ನು ಕಡಿಮೆ ದರದಲ್ಲಿ ಖರೀದಿಸಿ ಕಟ್ಟಡಕ್ಕೆ ಬಳಸಲಾಗುತ್ತಿದೆ ಎಂದು ದೂರಿದರು.
ಲ್ಯಾಂಪ್ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ, ಕಳಪೆ ಮರಳನ್ನು ಬಳಸಿ ಕಟ್ಟಡ ನಿರ್ಮಾಣವಾಗುವುದರಿಂದ ಕೆಲವು ವರ್ಷಗಳಲ್ಲಿಯೇ ಕುಸಿಯುವ ಸಾಧ್ಯ ಇರುತ್ತದೆ ಎಂದು ಆತಂಕ ವ್ಯಕ್ತಪಡಿಸಿ, ನಮ್ಮ ಸುತ್ತಮುತ್ತಲಿನ ಗಿರಿಜನರ ಮಕ್ಕಳನ್ನು ಯಾವುದೇ ಕಾರಣಕ್ಕೂ ಈ ಶಾಲೆಗೆ ಸೇರಿಸುವುದಿಲ್ಲ ಎಂದು ಹೇಳಿದರು.
19ನೇ ಆದಿವಾಸಿ ದಿನಾಚರಣೆ ಅಂಗವಾಗಿ ಮೂಲ ಆದಿವಾಸಿಗಳ ಹಕ್ಕೋತ್ತಾಯವನ್ನು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಮಂಗಳವಾರ ನಡೆಸಲಾಗುತ್ತಿದ್ದು, ಈ ವಿಷಯ ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದರು.
ಆದಿವಾಸಿಗಳ ಪ್ರತಿಭಟನೆಗೆ ಮಣಿದು ಅಲ್ಲಿನ ಗುತ್ತಿಗೆದಾರರು ಕಳಪೆ ಮರಳನ್ನು ಬೇರೆಡೆ ಸಾಗಿಸಿದರು. ಸಿದ್ದರಾಜು, ಕರಿಯಪ್ಪ ಮೊತ್ತ, ರಾಮಮೂರ್ತಿ, ವೆಂಕಟೇಗೌಡ, ಪುಟ್ಟಬಸವಯ್ಯ, ಇಲಿಯಾಜ್ ಪಾಷ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

