ಮೈಸೂರು

ಸಂಚಾರಿ ಶಿಸ್ತಿಗೆ ಬರಲಿದೆ ಎಂ-ಟ್ರ್ಯಾಕ್

Published On :

ಕ.ಪ್ರ.ವಾರ್ತೆ   ಮೈಸೂರು   ಆ. 17
ಎಂ- ಟ್ರ್ಯಾಕ್ ಎಂಬ ಮೈಸೂರು ಸಂಚಾರ ಸುಧಾರಣೆ ಯೋಜನೆಯನ್ನು 6 ತಿಂಗಳಲ್ಲಿ ರೂಪಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಹೇಳಿದರು.
ಕೃಷ್ಣರಾಜ ಸಂಚಾರ ಪೊಲೀಸ್ ಠಾಣೆಯಲ್ಲಿ ಶನಿವಾರ ನಡೆದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ 2010 ರಲ್ಲಿ ಬಿ-ಟ್ರ್ಯಾಕ್ ಜಾರಿಗೊಳಿಸಲಾಗಿದ್ದು, ಯಶಸ್ವಿಯಾಗಿದೆ. ಬೆಂಗಳೂರು ಮಾದರಿಯಲ್ಲಿ ಮೈಸೂರಿನಲ್ಲೂ ಎಂ- ಟ್ರ್ಯಾಕ್ ಮಾಡಲಾಗುವುದು ಎಂದರು.
ನಗರ ಮತ್ತು ಗ್ರಾಮಾಂತರ ಪ್ರದೇಶಕ್ಕೆ ವ್ಯತ್ಯಾಸವಿದೆ. ಮೈಸೂರಿನಲ್ಲಿ ಸಂಚಾರ ಶಿಸ್ತು ಬರಬೇಕಿದೆ. ಹೀಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ವಾಹನ ಸವಾರರು, ಚಾಲಕರು ಹಾಗೂ ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದರು. ಟ್ರಾಫಿಕ್ ವಾರ್ಡನ್ ನೇಮಕ ಪ್ರಕ್ರಿಯೆ ಆರಂಭಿಸಲಾಗುತ್ತಿದ್ದು, ಆಸಕ್ತರು ಸದಸ್ಯರಾಗಿ ವಾರದಲ್ಲಿ 4 ಗಂಟೆ ಸಂಚಾರ ಪೊಲೀಸರಿಂದ ಕೆಲಸ ಮಾಡಬೇಕು. ಟ್ರಾಫಿಕ್ ವಾರ್ಡನ್ಗಳಿಗೆ ಆಕರ್ಷಕವಾದ ಸಮವಸ್ತ್ರ ಸಹ ನೀಡಲಾಗುವುದು ಎಂದು ಅವರು ಹೇಳಿದರು.
ನಗರಪಾಲಿಕೆ ಸದಸ್ಯ ಪ್ರಶಾಂತ್ಗೌಡ, ದೇವರಾಜ ಸಂಚಾರ ಠಾಣೆ ಎಸ್ಐ ಸುರೇಶ್ಕುಮಾರ್, ಲಷ್ಕರ್ ಸಂಚಾರ ಠಾಣೆ ಎಸ್ಐ ಸಿ. ರವಿಕುಮಾರ್ ಇದ್ದರು. ವಿವಿ ಪುರಂ ಸಂಚಾರ ಠಾಣೆಯಲ್ಲಿ ನಡೆದ ಸಾರ್ವಜನಿಕರ ಸಭೆಯು ಡಿಸಿಪಿ ಎಂ.ಎಂ. ಮಹದೇವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಚಾರ ಸುಧಾರಣೆ ಬಗ್ಗೆ ಸಾರ್ವಜನಿಕರು ಸಲಹೆ ಸೂಚನೆಗಳನ್ನು ನೀಡಿದರು. ಎನ್.ಆರ್. ಸಂಚಾರ ಠಾಣೆ ಇನ್ಸ್ಪೆಕ್ಟರ್ ಅರುಣ್ ನಾಗೇಗೌಡ, ವಿವಿ ಪುರಂ ಠಾಣೆ ಇನ್ಸ್ಪೆಕ್ಟರ್ ಪ್ರಕಾಶ್, ವಿವಿ ಪುರಂ ಸಂಚಾರ ಠಾಣೆ ಎಸ್ಐ ಡಿ. ಯೋಗೇಶ್ ಪಾಲ್ಗೊಂಡಿದ್ದರು.



ಜೆಎಲ್ಬಿ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಿ
 ಜೆಎಲ್ಬಿ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಬೇಕು. ಏಕಮುಖ ಸಂಚಾರ ಇರುವ ಕಡೆ ಫಲಕಗಳನ್ನು ಅಳವಡಿಸಬೇಕು. ಸಿಗ್ನಲ್ಗಳಲ್ಲಿ ಫ್ರೀ ಲೆಫ್ಟ್ ವ್ಯವಸ್ಥೆ ಕಲ್ಪಿಸಬೇಕು. ಸಿದ್ದಪ್ಪ ಚೌಕದಲ್ಲಿ ಪಾದಚಾರಿಗಳು ರಸ್ತೆ ದಾಟಲು 15 ಸೆಕೆಂಡ್ ನಿಗದಿಪಡಿಸಿರುವುದು ಸಾಲುವುದಿಲ್ಲ. ಈ ಅವಧಿಯನ್ನು ಹೆಚ್ಚಿಸಬೇಕು ಎಂದು ಸಭೆಯಲ್ಲಿ ಈಶ್ವರ್, ರಘುರಾಂ, ಉಮೇಶ್, ಮೋಹನಚಂದ್ರ, ಯದುನಂದನ್ ಕೋರಿದರು. ಕೆ.ಆರ್. ಸಂಚಾರ ಠಾಣೆ ಎಸ್ಐ ಸತೀಶ್, ಕುವೆಂಪುನಗರ ಸಂಚಾರ ಠಾಣೆ ಎಸ್ಐ ಡಿ.ಬಿ. ಜಯಪ್ರಕಾಶ್ ಇದ್ದರು.


ಅರಸು ರಸ್ತೆಯಲ್ಲಿ ಪೇ ಅಂಡ್ ಪಾರ್ಕ್


ದೇವರಾಜ ಸಂಚಾರ ಠಾಣೆಯಲ್ಲಿ ನಡೆದ ಸಾರ್ವಜನಿಕರ ಸಭೆಯಲ್ಲಿ ದೇವರಾಜ ಅರಸು ರಸ್ತೆಯಲ್ಲಿ ಪೇ ಆ್ಯಂಡ್ ಪಾರ್ಕ್ ವ್ಯವಸ್ಥೆ ಮಾಡಬೇಕು. ಅರಸು ರಸ್ತೆಯ ಮಳಿಗೆ ಮಾಲೀಕರು ಮತ್ತು ಸಿಬ್ಬಂದಿ ತಮ್ಮ ಕಾರು ಮತ್ತು ಬೈಕ್ಗಳನ್ನು ಬೆಳಗ್ಗೆಯಿಂದ ಸಂಜೆವರೆಗೆ ನಿಲ್ಲಿಸುತ್ತಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಹುಣಸೂರು ರಸ್ತೆಯಲ್ಲಿ ಕೆಲವು ಯುವಕರು ವ್ಹೀಲಿಂಗ್ ಮಾಡುತ್ತಿದ್ದು, ಅಪಘಾತ ಹೆಚ್ಚಾಗಿದೆ. ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಇನ್ನರ್ವ್ಹೀಲ್ ಕ್ಲಬ್ ಮಾಜಿ ಅಧ್ಯಕ್ಷೆ ನೀನ್ಪು ಖುರೇಷಿ ಸಲಹೆ ನೀಡಿದರು.
ಸಯ್ಯಾಜಿರಾವ್ ರಸ್ತೆ, ಇರ್ವಿನ್ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಅಗತ್ಯ ಇರುವ ಕಡೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವಂತೆ ಶ್ರೀನಿವಾಸ ಗಾಂಧಿ ಹೇಳಿದರು. ಸದ್ವಿದ್ಯಾ ಶಾಲೆ ವೃತ್ತದ ಬಳಿ ಕೆಲವರು ವಾಹನಗಳನ್ನು ನಿಲ್ಲಿಸುವುದರಿಂದ ತೊಂದರೆ ಆಗುತ್ತಿದೆ ಎಂದು ಶಂಕರ್ರಾವ್ ದೂರಿದರು.
ಇರ್ವಿನ್ ರಸ್ತೆಯಲ್ಲಿ ದಟ್ಟಣೆ ಹೆಚ್ಚಾಗಿದೆ. ಇಲ್ಲಿ ನಿಯೋಜಿಸಲಾಗುವ ಪೊಲೀಸರು ವಾಹನ ಸವಾರರಿಂದ ವಸೂಲಿ ಮಾಡುತ್ತಿದ್ದಾರೆ ಎಂದು ಡಾ. ರಾಮಚಂದ್ರರಾವ್ ಆರೋಪಿಸಿದರು.



ನಗರದಲ್ಲಿ ಸ್ಪೀಡ್ ಲಿಮಿಟ್ ವ್ಯವಸ್ಥೆಗೆ ನಿರ್ಧಾರ


ದೇವರಾಜ ಸಂಚಾರ ಠಾಣೆ ಇನ್ಸ್ಪೆಕ್ಟರ್ ಶಾಂತಮಲ್ಲಪ್ಪ ಮಾತನಾಡಿ, ನಗರದಲ್ಲಿ ವೇಗ ನಿಗದಿ (ಸ್ಪೀಡ್ ಲಿಮಿಟ್) ವ್ಯವಸ್ಥೆ ಮಾಡಲಾಗುತ್ತಿದ್ದು, ಈ ಸಂಬಂಧ ಪೊಲೀಸ್ ಆಯುಕ್ತರು ಕ್ರಮ ಕೈಗೊಂಡಿದ್ದಾರೆ ಎಂದರು. ಸಂಚಾರ ವಿಭಾಗದಲ್ಲಿ ಸಿಬ್ಬಂದಿ ಕೊರತೆ ಇದೆ. ದೇವರಾಜ ಅರಸು ರಸ್ತೆಯಲ್ಲಿ 210 ಕಾರುಗಳನ್ನು ನಿಲ್ಲಿಸುವಷ್ಟು ಸ್ಥಳಾವಕಾಶ ಇದೆ. 2007ರಲ್ಲಿ 75 ಕಾರುಗಳು ಬೆಳಗ್ಗೆಯಿಂದ ಸಂಜೆಯವರೆಗೆ ನಿಲ್ಲುತ್ತಿದ್ದವು. ಈಗ 110 ಕಾರುಗಳು ನಿಲ್ಲುತ್ತಿವೆ. ಪೇ ಆ್ಯಂಡ್ ಪಾರ್ಕ್ ವ್ಯವಸ್ಥೆ ಕಲ್ಪಿಸಲು ನಗರಪಾಲಿಕೆಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.