ಮೈಸೂರು

ಟ್ರೀ ಆಪ್ ಬಾಬೆಲ್ ನಾಟಕಕ್ಕೆ ಅಸ್ತು

Published On :

ಕ.ಪ್ರ.ವಾರ್ತೆ ,  ಮೈಸೂರು ,  ಆ. 18
ಮೈಸೂರು ರಂಗಾಯಣದಿಂದ ಧಾರವಾಡ ಹಾಗೂ ಶಿವಮೊಗ್ಗಕ್ಕೆ ವರ್ಗಾವಣೆಗೊಂಡಿದ್ದ ಕಲಾವಿದರು ನಿಯೋಜನೆ ಮೇರೆಗೆ ಮೈಸೂರಿಗೆ ಮರಳಿದ್ದು, ಸ್ಪ್ಯಾನಿಷ್ ಭಾಷೆಯ ಟ್ರೀ ಆಪ್ ಬಾಬೆಲ್ ನಾಟಕ ಅಭಿನಯಿಸಲು ಒಪ್ಪಿಗೆ ಸೂಚಿಸಿದ್ದಾರೆ.
ಕಳೆದ ವರ್ಷ ದಸರಾ ವೇಳೆ ನಡೆದ ನವರಾತ್ರಿ ನಾಟಕೋತ್ಸವ ನೋಡಿ ಹೋಗಿದ್ದ ಬ್ರೆಜಿಲ್ ಮೂಲದ ನಿರ್ದೇಶಕಿ ಎಲಿಸಾ ಟೆಲೊಡೆ ಅವರು ರಂಗಾಯಣ ಕಲಾವಿದರನ್ನು ಒಳಗೊಂಡು ನಾಟಕ ನಿರ್ದೇಶಿಸುವ ತವಕ ವ್ಯಕ್ತಪಡಿಸಿದ್ದರು. ಈ ಸಂಬಂಧ ಒಂದು ಯೋಜನೆ ರೂಪಿಸಿ ಅಲ್ಲಿನ ಸರ್ಕಾರದಿಂದ ಅನುಮೋದನೆ ಪಡೆದು ಕರ್ನಾಟಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಅವರ ಮನವಿ ಪುರಸ್ಕರಿಸಿದ್ದ ರಾಜ್ಯ ಸರ್ಕಾರ ರಂಗಾಯಣ ಕಲಾವಿದರ ತಂಡವನ್ನು ಒಟ್ಟುಗೂಡಿಸಿ ನಾಟಕ ನಿರ್ದೇಶಿಸಲು ಒಪ್ಪಿಗೆ ಸೂಚಿಸಿತ್ತು.
ಈ ನಾಟಕ ಅಭಿನಯಿಸಲು 20 ವರ್ಷ ಅನುಭವವಿರುವ ಕಲಾವಿದರೇ ಬೇಕು ಎಂಬ ಬೇಡಿಕೆ ಇಟ್ಟಿದ್ದ ಎಲಿಸಾ, ರಂಗಾಯಣ ಕಲಾವಿದರ ತಂಡವನ್ನು ಅಪೇಕ್ಷಿಸಿದ್ದರು. ಈ ಮೂಲಕ ಮೂರು ಭಾಗವಾಗಿದ್ದ ರಂಗಾಯಣ ತಂಡವನ್ನು ಒಟ್ಟುಗೂಡಿಸುವಲ್ಲಿ ವಿದೇಶಿ ನಿರ್ದೇಶಕಿಯೊಬ್ಬರು ಯಶಸ್ವಿಯಾಗಿದ್ದಾರೆ. ಆರಂಭದಲ್ಲಿ ಮೈಸೂರಿನಲ್ಲಿರುವ ಆರು ಹಿರಿಯ ಹಾಗೂ ಕಿರಿಯ ಕಲಾವಿದರನ್ನು ಒಟ್ಟುಗೂಡಿಸಿ ನಾಟಕ ಮಾಡಿಸುವಂತೆ ಇಲ್ಲಿನ ಅಧಿಕಾರಿಗಳು ತಿಳಿಸಿದ್ದರು. ಈ ಅಭಿಪ್ರಾಯವನ್ನು ತಿರಸ್ಕರಿಸಿದ್ದ ಎಲಿಸಾ, ಒಟ್ಟು ತಂಡವೇ ಬೇಕು ಎಂದು ಹಠ ಹಿಡಿದಿದ್ದರು.
ಭಾನುವಾರ ಮೈಸೂರಿಗೆ ಆಗಮಿಸಿದ್ದ ಎಲಿಸಾ ಟೆಲೊಡೆ ರಂಗಾಯಣದ 18 ಮಂದಿ ಕಲಾವಿದರೊಂದಿಗೆ ಸಭೆ ನಡೆಸಿದರು. ಟ್ರೀ ಆಪ್ ಬಾಬೆಲ್ ಎಂಬ ಸ್ಪ್ಯಾನಿಷ್ ಭಾಷೆಯ ನಾಟಕವನ್ನು ಮಾಡಿಸುವ ಬಗ್ಗೆ ತಿಳಿಸಿದರು. ಸೆ. 25 ರವರೆಗೆ ಮೈಸೂರಿನಲ್ಲಿಯೇ ಉಳಿಯುವ ಎಲಿಸಾ ಕಲಾವಿದರಿಗೆ ಹೋಂ ವರ್ಕ್ ನೀಡಿ ವಾಪಸ್ ಹೋಗುವರು.
ಮತ್ತೆ ಡಿಸೆಂಬರ್‌ಗೆ ಆಗಮಿಸಿ ತರಬೇತಿ ನೀಡುವರು. ಸತತ ನಾಲ್ಕು ತಿಂಗಳ ಕಾಲ ತರಬೇತಿ ನೀಡಿ 2014ರ ಮಾರ್ಚ್‌ನಿಂದ ಪ್ರದರ್ಶನ ಆರಂಭಿಸುವರು. ಮೈಸೂರು, ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ.

-ಜೆ. ಮಹದೇವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.