ವ್ಯವಹಾರದಲ್ಲಿ ಲಾಸು, ಕೃಷಿಯಲ್ಲಿ ಕಾಸು
ಕ.ಪ್ರ.ವಾರ್ತೆ , ಮೈಸೂರು , ಆ. 19
ಎಂ.ಎ. ಸಮಾಜಶಾಸ್ತ್ರ ಓದಿದರೂ ಕೆಲಸ ಸಿಗದಿದ್ದಾಗ ಕೃಷಿಯಲ್ಲಿ ತೊಡಗಿಕೊಂಡು ನೆಮ್ಮದಿಯಾಗಿದ್ದ ಯುವಕನೊಬ್ಬ, ಮಧ್ಯೆ ವ್ಯವಹಾರ ಮಾಡಲು ಹೋಗಲು ಹೋಗಿ ನಷ್ಟ ಮಾಡಿಕೊಂಡು ಮತ್ತೆ ವ್ಯವಸಾಯಕ್ಕೆ ಮರಳಿ ಲಾಭ ಮಾಡುತ್ತಿರುವ ಕಥೆ ಇದು.
ಹುಣಸೂರು ತಾಲೂಕು ಧರ್ಮಾಪುರದ ಮಸ್ತೇಗೌಡ- ಸಣ್ಣದೇವಮ್ಮ ಅವರ ಪುತ್ರ ರಮೇಶ್ಗೆ ನಾಲ್ಕು ಎಕರೆ ಜಮೀನಿದೆ. ಕೃಷಿಕ ಕುಟುಂಬ. ಜಮೀನು ಸಣ್ಣದೇವಮ್ಮ ಹಾಗೂ ರಮೇಶ್ ಹೆಸರಿನಲ್ಲಿದೆ. ತಾತ- ಮುತ್ತಾತರ ಕಾಲದಿಂದಲೂ ವ್ಯವಸಾಯ ಮಾಡಿಕೊಂಡೇ ಬದುಕು ಸಾಗಿಸುತ್ತಿದ್ದಾರೆ. ಸ್ನಾತಕೋತ್ತರ ಪದವಿ ಪಡೆದರೂ ಕೆಲಸ ಸಿಗದಿದ್ದಾಗ ರಮೇಶ್ ಕೂಡ ಊರಿಗೆ ವಾಪಸಾಗಿ, ತಂದೆ- ತಾಯಿಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ ನಡುವೆ ಕೃಷಿಯ ಬಗ್ಗೆ ಬೇಜಾರಾಗಿ ಅಂಗಡಿ ಆರಂಭಿಸಿದರು. ಫೋಟೋ ತೆಗೆಯುವ ಕೆಲಸ ಮಾಡಿದರು. ಆದರೆ ಅದರಿಂದ ಲಾಭವಾಗುವ ಬದಲು ನಷ್ಟವಾಗತೊಡಗಿದ್ದರಿಂದ ನಮ್ಮಂಥವರಿಗಲ್ಲ ಈ ಕೆಲ್ಸ ಎಂದು 2009 ರಿಂದ ಮತ್ತೆ ವ್ಯವಸಾಯಕ್ಕಿಳಿದರು.
ಇವರ ಜಮೀನಿಗೆ ಮೊದಲು ನೀರಾವರಿ ಸೌಲಭ್ಯವಿಲ್ಲ. ಮಳೆಯಾಶ್ರಿತ ಭೂಮಿ. ಆದರೆ ಮಳೆ ನಂಬಿಕೊಂಡು ವ್ಯವಸಾಯ ಮಾಡಿ, ಲಾಭ ಮಾಡಲು ಸಾಧ್ಯವಿಲ್ಲ ಎಂಬುದು ಅವರಿಗೆ ಗೊತ್ತಿತ್ತು. ಹೀಗಾಗಿ ಕೊಳವೆ ಬಾವಿ ಕೊರೆಸಿದರು. 2 ಎಕರೆಯಲ್ಲಿ ನೇಂದ್ರ ಬಾಳೆ, ತಲಾ 1 ಎಕರೆಯಲ್ಲಿ ಅರಿಶಿನ ಹಾಗೂ ಹತ್ತಿ ಬೆಳೆಯತೊಡಗಿದರು. ಗ್ರಾಮೀಣ ಪ್ರದೇಶದ ಜನರಿಗೆ ಸ್ವಲ್ಪ ರಾಜಕೀಯದ ಗೀಳು. ರಮೇಶ್ ಕೂಡ ರಾಜಕೀಯ ಅಂತಾ ಹೊರಗೆ ಹೋದಾಗಲೆಲ್ಲಾ ಮಸ್ತೇಗೌಡ ಹಾಗೂ ಸಣ್ಣದೇವಮ್ಮ ಜಮೀನಿನಲ್ಲಿದ್ದುಕೊಂಡು ಬೇಸಾಯ ಮಾಡುತ್ತಾರೆ.
ಲಾಭವೇ 1.5 ಲಕ್ಷದಿಂದ 3.5 ಲಕ್ಷ: ಎರಡು ಎಕರೆಯಲ್ಲಿ 1,800 ನೇಂದ್ರ ಬಾಳೆಗಿಡಗಳಿವೆ. ಒಂದು ಗೊನೆ 200 ರಿಂದ 300ಗೆ ಮಾರಾಟವಾಗುತ್ತದೆ. ಒಂದು ಎಕರೆ ಬಾಳೆಗೆ 40 ರಿಂದ 50,000 ವೆಚ್ಚವಾಗುತ್ತದೆ. ಆಯಾ ಕಾಲಕ್ಕೆ ಮಾರುಕಟ್ಟೆ ದರ ಆಧರಿಸಿ, 2 ರಿಂದ 4 ಲಕ್ಷದವರೆಗೂ ಲಾಭ ಬರುತ್ತದೆ. ನಿವ್ವಳ ಲಾಭವೇ 1.50 ರಿಂದ 3.50 ಲಕ್ಷ ಆಗುತ್ತದೆ. ಬಾಳೆ ಜಮೀನಿನ ಬಳಿಯೇ ಮಾರಾಟವಾಗುತ್ತದೆ.
ಮೊದಲ ವರ್ಷ ಅರಿಶಿನ ಬೆಳೆದಾಗ ಬಂಪರ್ ಬೆಲೆ. 1 ಎಕರೆಯಲ್ಲಿ 15 ಕ್ವಿಂಟಲ್ ಇಳುವರಿ ಬಂದು, ಪ್ರತಿ ಕ್ವಿಂಟಲ್ 15,000 ರಂತೆ ಮಾರಾಟವಾಯಿತು. ಎರಡನೇ ವರ್ಷ ದರ ಕುಸಿತದಿಂದ ಲಾಭವಾಗಲಿಲ್ಲ. ಹೀಗಾಗಿ ಮೂರನೇ ವರ್ಷ ಅರಿಶಿನ ಬೆಳೆಯಲಿಲ್ಲ. ಈಗ ಒಂದು ವರ್ಷದ ನಂತರ 2 ಎಕರೆಯಲ್ಲಿ ಅರಿಶಿನ ಬೆಳೆದಿದ್ದಾರೆ. 30 ಕ್ವಿಂಟಲ್ ಇಳುವರಿಯ ನಿರೀಕ್ಷೆ ಇದೆ. ಪ್ರಸ್ತುತ ಮಾರುಕಟ್ಟೆಯ ದರ ಕ್ವಿಂಟಲ್ಗೆ 7 ರಿಂದ 8,000 ಇದೆ. ಅರಿಶಿನವನ್ನು ತಮಿಳುನಾಡಿನ ಈರೋಡ್ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಲಾಗುತ್ತದೆ. ಅರಿಶಿನ ಬೆಳೆಯಲು ಎಕರೆಗೆ 30,000 ವೆಚ್ಚವಾಗುತ್ತದೆ.
1 ಎಕರೆಯಲ್ಲಿ 15 ಕ್ವಿಂಟಲ್ ಆರ್ಸಿಎಚ್ ತಳಿಯ ಹತ್ತಿ ಬೆಳೆಯಲಾಗುತ್ತದೆ. 4 ರಿಂದ 5,000 ಮಾರಾಟ ದರ ಇದೆ. ಹತ್ತಿ ಬೆಳೆಯಲು ವೆಚ್ಚ ಕಡಿಮೆ. ಅಂದರೆ ಎಕರೆಗೆ 10,000 ಮಾತ್ರ. ಹೀಗಾಗಿ 65,000 ನಿವ್ವಳ ಲಾಭ ಬರುತ್ತದೆ. ರಮೇಶ್ ಅವರು ಮೂರು ಬೆಳೆಗಳಿಗೂ ರಾಸಾಯನಿಕ ಗೊಬ್ಬರ ಬಳಕೆ ಮಾಡುತ್ತಾರೆ. ಕಾಲಕಾಲಕ್ಕೆ ರಾಸಾಯನಿಕ ಗೊಬ್ಬರ ನೀಡುವುದರ ಜತೆಗೆ ಅಗೆತ, ಕಳೆ ಕೀಳಿಸುವುದು ಮತ್ತಿತರ ಕಾರ್ಯ ಮಾಡುತ್ತಾರೆ. ಹತ್ತಿ ಬೆಳೆಗೆ ಮಾತ್ರ ಕ್ರಿಮಿ ಹಾಗೂ ಕೀಟನಾಶಕ ಬಳಸುತ್ತಾರೆ. ಕೂಲಿಯಾಳುಗಳ ಸಮಸ್ಯೆ ಇಲ್ಲ. ಒಟ್ಟಾರೆ ನಾಲ್ಕು ಎಕರೆಯಲ್ಲಿ ವೆಚ್ಚ 1 ಲಕ್ಷ ಕಳೆದು ವಾರ್ಷಿಕ 5 ರಿಂದ 6 ಲಕ್ಷ ಆದಾಯ ಗಳಿಸುತ್ತಿದ್ದಾರೆ.
ಭೂಮಿತಾಯಿ ಬಂಜೆಯಲ್ಲ. ಭೂಮಿ ನಂಬಿ ಯಾರೂ ಹಾಳಾಗಿಲ್ಲ. ಸರಿಯಾಗಿ ವ್ಯವಸಾಯ ಮಾಡಿದರೆ ಖಂಡಿತಾ ನಷ್ಟವಾಗುವುದಿಲ್ಲ. ರೈತರು ಶ್ರಮಪಡಬೇಕು. ಜತೆಗೆ ಸರ್ಕಾರ ಸರಿಯಾದ ವೋಲ್ಜೇಜ್ ಇರುವ ಕರೆಂಟ್ ನೀಡಬೇಕು. ಸಕಾಲದಲ್ಲಿ ರೈತರಿಗೆ ರಸಗೊಬ್ಬರ ಸಿಗುವಂತೆ ಮಾಡಬೇಕು. ಇಷ್ಟು ಮಾಡಿದರೆ ಯಾವುದೇ ಸಹಾಯಧನ ಇಲ್ಲದೆಯೂ ರೈತರು ಕೃಷಿ ಆರಂಭ ಮಾಡಿ, ಬದುಕಬಲ್ಲರು.
ರಮೇಶ್, ಧರ್ಮಾಪುರ
-ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

