ಮೈಸೂರು

ದಸರಾ ದೀಪಾಲಂಕಾರಕ್ಕೆ ಸಕಲ ಸಿದ್ಧತೆ

Published On :

ಕ.ಪ್ರ.ವಾರ್ತೆ , ಮೈಸೂರು , ಆ. 20
ಮುಂಬರುವ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ನಗರದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್) ಮಂಗಳವಾರ ಕರೆದಿದ್ದ ಪ್ರಾಯೋಜಕತ್ವ ಸಭೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೆ, ದಸರಾ ಅಂಗವಾಗಿ ವಸ್ತು ಪ್ರದರ್ಶನ ಆವರಣದಲ್ಲಿ ಮಳಿಗೆಯೊಂದನ್ನು ತೆರೆಯಲು ಸಿದ್ಧತೆ ನಡೆಸಲಾಗಿದೆ.
ಕುವೆಂಪುನಗರದ ನ್ಯೂ ಕಾಂತರಾಜ ಅರಸು ರಸ್ತೆಯಲ್ಲಿನ ಸೆಸ್ಕ್ ಕಚೇರಿಯಲ್ಲಿ ಏರ್ಪಡಿಸಿದ್ದ ಪ್ರಾಯೋಜಕರ ಸಭೆಯಲ್ಲಿ ವಿದ್ಯುತ್ ದೀಪಾಲಂಕಾರದ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತು. ಅಲ್ಲದೆ, ಆಸಕ್ತರು ಹೆಸರು ನೋಂದಣಿ ಮತ್ತು ಹೊಸ ರೂಪದ ಅಲಂಕಾರದ ಮಾದರಿ ಸಲ್ಲಿಸಲು ಸೂಚಿಸಿ, ಮುಂದಿನ ಸಭೆಯನ್ನು ಆ. 27ರ ಸಂಜೆ 4ಕ್ಕೆ ಕರೆಯಲು ತೀರ್ಮಾನಿಸಲಾಯಿತು.
ನಗರದ ವೃತ್ತ ಮತ್ತು ರಸ್ತೆಯನ್ನು ಎ, ಬಿ ಎಂದು ಎರಡು ಗುಂಪಾಗಿ ವಿಗಂಡಿಸಲಾಗಿದೆ. ಎ ವಿಭಾಗದಲ್ಲಿ ಕೆ.ಆರ್. ವೃತ್ತ, ಹಾರ್ಡಿಂಗ್ ವೃತ್ತ, ಹಳೆ ಪ್ರತಿಮೆ ವೃತ್ತ, ಆಯುರ್ವೇದ ಆಸ್ಪತ್ರೆ ವೃತ್ತ, ಗನ್‌ಹೌಸ್ ವೃತ್ತ ಇದೆ. ಬಿ ವಿಭಾಗದಲ್ಲಿ ದೊಡ್ಡ ಗಡಿಯಾರ ವೃತ್ತ, ಗಾಂಧಿ ಚೌಕ, ಫೌಂಟೇನ್ ವೃತ್ತ, ಎನ್.ಆರ್. ಮೊಹಲ್ಲಾದ ಅಂಬೇಡ್ಕರ್ ವೃತ್ತ, ರಾಮಸ್ವಾಮಿ ವೃತ್ತ, ಮೆಟ್ರೋಪೋಲ್ ವೃತ್ತ, ಕುರುಬಾರಹಳ್ಳಿ ವೃತ್ತ, ನೆಹರು ವೃತ್ತ ಸೇರುತ್ತದೆ.
ಎ ವಿಭಾಗದಲ್ಲಿನ ವೃತ್ತಗಳಿಗೆ ಹೆಚ್ಚು ಮೊತ್ತ ಅಂದರೆ, ಸುಮಾರು 4 ರಿಂದ 5 ಲಕ್ಷ ವೆಚ್ಚದಲ್ಲಿ ದೀಪಾಲಂಕಾರ ಮಾಡಬೇಕು. ಬಿ ವಿಭಾಗಕ್ಕೆ ಸುಮಾರು 3 ಲಕ್ಷ ವೆಚ್ಚದಲ್ಲಿ ದೀಪಾಲಂಕಾರ ಮಾಡಬೇಕು. ಇತರ ಕಡೆಗಳಲ್ಲಿ ಸಾಮಾನ್ಯವಾಗಿ ದೀಪಾಲಂಕಾರ ಮಾಡುವ ಕುರಿತ ಪಟ್ಟಿಯನ್ನು ಪ್ರಾಯೋಜಕರಿಗೆ ನೀಡಲಾಯಿತು.
ಇದಕ್ಕೂ ಮುನ್ನ ಸೆಸ್ಕ್ ಅಧಿಕಾರಿಗಳು 2012ರ ದಸರಾ ಮಹೋತ್ಸವ ವೇಳೆ ಕೈಗೊಂಡಿದ್ದ ದೀಪಾಲಂಕಾರ ಮತ್ತು ಈ ಬಾರಿ ಕೈಗೊಳ್ಳಲು ಅವಕಾಶ ಇರುವ ದೀಪಾಲಂಕಾರದ ಮಾದರಿಯನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಈ ವೇಳೆ ಪ್ರಮುಖವಾಗಿ ಕೆ.ಆರ್. ವೃತ್ತ, ಹಳೆ ಪ್ರತಿಮೆ ವೃತ್ತ, ಹಾರ್ಡಿಂಗ್ ವೃತ್ತ, ಆಯುರ್ವೇದ ವೃತ್ತಗಳಲ್ಲಿ ವಿಶಿಷ್ಟ ರೀತಿಯಲ್ಲಿ ದೀಪಾಲಂಕಾರ ಮಾಡಲು ಸೂಚಿಸಲಾಯಿತು.
ಸಯ್ಯಾಜಿರಾವ್ ರಸ್ತೆಯಲ್ಲಿ ಹಸಿರು ಚಪ್ಪರದ ಮಾದರಿಯಲ್ಲಿ ದೀಪಾಲಂಕಾರ ಮಾಡುವುದು, ಕೋರ್ಟ್ ರಸ್ತೆ, ಚಾಮರಾಜ ಜೋಡಿ ರಸ್ತೆ ಹಳೆ ಪ್ರತಿಮೆ ರಸ್ತೆಯಿಂದ ಹಾರ್ಡಿಂಗ್ ವೃತ್ತದವರೆಗಿನ ರಸ್ತೆ ಬದಿಯ ಮರಗಳಿಗೆ ಎಲ್‌ಇಡಿ ಬಲ್ಪ್‌ಗಳಿಂದ ದೀಪಾಲಂಕಾರ ಮಾಡಬೇಕು. ಮರ ಇರುವ ರೂಪದಲ್ಲಿಯೆ ದೀಪಾಲಂಕಾರ ಮಾಡಬೇಕು ಎಂದು ಸೂಚಿಸಲಾಯಿತು.
ಈ ವೇಳೆ ಮಾತನಾಡಿದ ಸೆಸ್ಕ್ ಎಂಡಿ ಎ.ಬಿ. ಇಬ್ರಾಹಿಂ, ರಸ್ತೆಗಳ ದೀಪಾಲಂಕಾರಕ್ಕೆ ಈ ಮುಂಚೆ ಬಳಸುತ್ತಿದ್ದ ಸಾಮಾನ್ಯ ಬಲ್ಪ್‌ಗಳನ್ನು ಬಳಸಬಾರದು.
ವಿದ್ಯುತ್ ಉಳಿತಾಯದ ದೃಷ್ಟಿಯಿಂದ ಎಲ್‌ಇಡಿ ಬಲ್ಪ್‌ಗಳನ್ನೆ ಬಳಸಬೇಕು. ನಾವು ಇತರರಿಗೆ ಸಾಮಾನ್ಯ ಬಲ್ಪ್ ಬಳಸದಂತೆ ಹೇಳಿ, ನಾವೆ ಬಳಸಿದರೆ ತಪ್ಪಾಗುತ್ತದೆ. ಅಲ್ಲದೆ, ಪ್ರತಿ ಬಣ್ಣದ ಬಲ್ಪ್ ಬಳಸುವಾಗಲೂ ಅದಕ್ಕೆ ಒಂದು ಅರ್ಥ ಇರಬೇಕು. ಕೆಂಪು ಯಾವುದರ ಸೂಚಕ, ನೀಲಿ ಯಾವುದರ ಸೂಚಕ ಎಂಬುದನ್ನು ತೋರಿಸುವಂತಿರಬೇಕು ಎಂದು ಸಲಹೆ ನೀಡಿದರು.
ಸೆಸ್ಕ್ ಅಧಿಕಾರಿಗಳು ಮಾತನಾಡಿ, ಈ ಬಾರಿ ದಸರಾ ವಸ್ತು ಪ್ರದರ್ಶನದಲ್ಲಿ ಸೆಸ್ಕ್ ವತಿಯಿಂದ ವಿದ್ಯುತ್ ಮೇಳ ಎಂಬ ಮಳಿಗೆ ತೆರೆಯಲು ತೀರ್ಮಾನಿಸಲಾಗಿದೆ. ಅದಕ್ಕಾಗಿ ಸ್ಥಳ ನಿಯೋಜಿಸಲಾಗುತ್ತಿದೆ. ಇದಕ್ಕೆ ಆಸಕ್ತ ಕಂಪನಿಗಳು ಭಾಗವಹಿಸಬಹುದು. ಈ ಮೇಳದಲ್ಲಿ ಸೋಲಾರ್ ಪ್ಯಾನಲ್, ಪವನ ವಿದ್ಯುತ್, ವಿದ್ಯುತ್ ಸಂರಕ್ಷಣೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.
ಸಭೆಗೆ ಆಗಮಿಸಿದ್ದ ವಿವಿಧ ಕಂಪನಿಗಳ ಪ್ರಮುಖರು, ವಿದ್ಯುತ್ ದೀಪಾಲಂಕಾರ ಮಾಡಲು ಪಾಲಿಕೆ ಅಧಿಕಾರಿಗಳು ಮತ್ತು ಹಲವು ವೇಳೆ ಸಂಚಾರ ಪೊಲೀಸ್ ಸಿಬ್ಬಂದಿ ಅಡ್ಡಿಪಡಿಸುತ್ತಾರೆ. ಇಂತಹ ತೊಂದರೆ ಮರುಕಳಿಸಬಾರದು. ಅಲ್ಲದೆ, ಕಳೆದ ಬಾರಿ ವಿದ್ಯುತ್ ದೀಪಾಲಂಕಾರ ಮಾಡಿದವರಿಗೆ ಸೌಜನ್ಯಕ್ಕೂ ಧನ್ಯವಾದ ಹೇಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಾರ್ಡಿಂಜ್ ವೃತ್ತ ಮತ್ತು ಹಳೆಯ ಪ್ರತಿಮೆ ವೃತ್ತದ ದೀಪಾಲಂಕಾರವನ್ನು ಟಿವಿಎಸ್ ಮತ್ತು ಸೋನಿ ಕಂಪನಿ, ದಾಸಪ್ಪ ವೃತ್ತದಿಂದ ರೇಲ್ವೆ ನಿಲ್ದಾಣದವರೆಗೆ ಕೇನ್ಸ್ ಸಂಸ್ಥೆ ಹಿನಕಲ್ ಜಂಕ್ಷನ್ ಬಳಿ ಆಟೋಮೇಟಿವ್ ಸಂಸ್ಥೆ ವಹಿಸಿಕೊಂಡಿತು. ಮತ್ತೆ ಕೆಲವರು ಈ ಹಿಂದೆ ವಹಿಸಿಕೊಂಡಿದ್ದ ವೃತ್ತ ಮತ್ತು ರಸ್ತೆಯನ್ನೆ ತಮಗೆ ವಹಿಸಿಕೊಡುವಂತೆ ಮನವಿ ಮಾಡಿದರು.
ತಲಕಾಡು ಜೆಇ ರಕ್ಷಕ್ ತಾವೆ ತಯಾರಿಸಿದ ವಾಟರ್ ಫ್ರೂಫ್ ಎಲ್‌ಇಡಿ ಕುರಿತು ಪ್ರಾತ್ಯಕ್ಷಿಕೆ ನೀಡಿದರು.
ಸೆಸ್ಕ್ ಅಧಿಕಾರಿಗಳಾದ ಶಾಂತಿ, ರಾಜು, ಹೆಬ್ಬಾಳು ಕೈಗಾರಿಕಾ ಸಂಘದ ಅಧ್ಯಕ್ಷ ಜಯಂತ್, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ಕೇನಸ್ ಸಂಸ್ಥೆಯ ಜಯರಾಂ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮತ್ತು ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.