ಜಾನಪದರಿಗೆ ಶಿವ, ಬುದ್ಧ, ಏಕಲವ್ಯರೇ ಆದರ್ಶ
ಕ.ಪ್ರ.ವಾರ್ತೆ , ಮೈಸೂರು , ಆ. 21
ಜಾನಪದರಿಗೆ ಶಿವ, ಬುದ್ಧ, ಏಕಲವ್ಯ ಈ ಮೂವರೇ ಆದರ್ಶ ಎಂದು ಜಾನಪದ ವಿದ್ವಾಂಸ ಪ್ರೊ. ಕಾಳೇಗೌಡ ನಾಗವಾರ ಹೇಳಿದರು.
ಸಮರ್ಪಪಣ ಸಂಸ್ಥೆಯು ಬುಧವಾರ ಕಲಾಮಂದಿರದ ಮನೆಯಂಗಳದಲ್ಲಿ ಏರ್ಪಡಿಸಿದ್ದ ರಂಗಕಲೆ, ಜಾನಪದ ನೃತ್ಯ ಪ್ರಕಾರಗಳು ಮತ್ತು ಸಂಗೀತ ಪ್ರಕಾರಗಳ ತರಬೇತಿ ಶಿಬಿರವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಶಿವ ಜಾನಪದರ ಸೃಷ್ಟಿಯಾದರೆ, ಬುದ್ಧ ಜಾನಪದರ ಅಭಿಮಾನಿ. ಏಕಲವ್ಯ ಜಾನಪದರ ಪ್ರತೀಕದಂತೆ ಎಂದರು.
ಪ್ರಪಂಚದಲ್ಲಿ ಮುಸ್ಲಿಂ, ಕ್ರೈಸ್ತ ಧರ್ಮ ಹುಟ್ಟಿಲ್ಲದ ಹೊತ್ತಲ್ಲಿ ಹುಟ್ಟಿದ ಬುದ್ಧನು ಜಾನಪದರ ಬಗ್ಗೆ ಆಗಾಧ ಅಭಿಮಾನ ಹೊಂದಿದ್ದನು. ಸಕಲ ಸಂಪತ್ತನ್ನು ತ್ಯಜಿಸಿ ಸಾಮಾನ್ಯನಾಗುವ ಮೂಲಕ ದೊಡ್ಡ ವ್ಯಕ್ತಿಯಾದನು. ತರುಲತ ವಾಸ, ಕರತಲ ಭಿಕ್ಷೆಗೆ ಒಳಗಾದ ಬುದ್ಧನ ಘಟನೆ ವಿಶ್ವದ ಅಚ್ಚರಿಯಾಯಿತು. ಹೆಣ್ಣಿಗೂ ಸಮಾನವಾದ ಅವಕಾಶ ನೀಡಿದ ಕೀರ್ತಿ ಬುದ್ಧನಿಗೆ ಸಲ್ಲುತ್ತದೆ. ಜಾನಪದರೆಂದರೆ ಪರಿಶುದ್ಧತೆ ಎಂದು ವ್ಯಾಖ್ಯಾನಿಸಿದರು.
ಅಕ್ಷರಸ್ಥರು, ಮಂತ್ರಿಗಳು, ಜನಪ್ರತಿನಿಧಿಗಳು, ತಿಳಿದವರು ಶ್ರಮಜೀವಿಯ ರಕ್ತ ಹೀರುವ ಜಿಗಣೆಗಳಾಗಿದ್ದಾರೆ. ಭೂಮಿ ಮೇಲಿರುವ ಸಂಪತ್ತು ಎಲ್ಲರಿಗೂ ಸೇರಿದೆ. ಅದನ್ನು ಹಂಚಿ ತಿನ್ನಬೇಕು. ಆದರೆ, ಕೆಲವರು ಸಂಪತ್ತನ್ನು ತಮ್ಮ ಕ್ರೋಢೀಕರಿಸಿ ತಮ್ಮ ಮಕ್ಕಳಿಗೆ ವರ್ಗಾಯಿಸುತ್ತಾರೆ. ಇದು ದಾರಿದ್ರ್ಯದ ರುದ್ರನರ್ತನವಾಗಿದೆ. ಯಾರು ಪದೇ ಪದೇ ತೊಂದರೆಗೆ ಒಳಗಾಗುತ್ತಾರೋ ಅಂತವರಲ್ಲಿ ಅವಕಾಶದ ಅಕ್ಷಯ ಪಾತ್ರೆ ಅಡಗಿದೆ. ಕಷ್ಟದಿಂದ ಹೊರಬರಲು ಸೃಜನಶೀಲತೆ ಬೆಳೆಸಿಕೊಳ್ಳುತ್ತಾರೆ ಎಂದು ತಿಳಿಸಿದರು.
ಮೋದಿ ಹೋಲಿಕೆ ಬೇಡ: ಈ ರಾಜ್ಯದ ಮಂತ್ರಿಯಾಗಿರುವ ಒಬ್ಬ ಚಿತ್ರನಟರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೋದಿಗೆ ಹೋಲಿಸಿದ್ದಾರೆ. ಅದು ಅವರ ಅವಿವೇಕಿತನದ ಪರಮಾವಧಿಯಾಗಿದೆ. ಕೂಡಲೇ ಸಾರ್ವಜನಿಕರ ಕ್ಷಮೆಯಾಚಿಸಬೇಕು. ಅವರಿಗೆ ಗೊತ್ತಿಲ್ಲದ ವಿಚಾರದ ಬಗ್ಗೆ ಮಾತನಾಡಬಾರದಿತ್ತು. ಅವರ ಹೇಳಿಕೆ ಅಸಹ್ಯ ಹುಟ್ಟಿಸುವಂತದ್ದು ಎಂದು ಕಿಡಿಕಾರಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ನಿರ್ಮಲಾ ಮಠಪತಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮೇಯರ್ ಪುರುಷೋತ್ತಮ್, ಸಮರ್ಪಣ ಸಂಸ್ಥೆಯ ಅಧ್ಯಕ್ಷ ಲಕ್ಷ್ಮೀರಾಮ್, ಶಿಬಿರದ ನಿರ್ದೇಶಕ ಕೃಷ್ಣಮೂರ್ತಿ ತಲಕಾಡು, ಶಿಬಿರದ ಸಂಯೋಜಕ ಆರ್. ನಿಂಗರಾಜು ಇದ್ದರು.
ಅಕ್ಷರಸ್ಥರು, ಮಂತ್ರಿಗಳು, ಜನಪ್ರತಿನಿಧಿಗಳು, ತಿಳಿದವರು ಶ್ರಮಜೀವಿಯ ರಕ್ತ ಹೀರುವ ಜಿಗಣೆಗಳಾಗಿದ್ದಾರೆ. ಭೂಮಿ ಮೇಲಿರುವ ಸಂಪತ್ತು ಎಲ್ಲರಿಗೂ ಸೇರಿದೆ. ಅದನ್ನು ಹಂಚಿ ತಿನ್ನಬೇಕು
- ಪ್ರೊ. ಕಾಳೇಗೌಡ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

