ದುರಾಡಳಿತದಿಂದ ಜನತೆಗೆ ಬೇಸರ
ಕ.ಪ್ರ.ವಾರ್ತೆ ಮೈಸೂರು ಆ. 22
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದುರಾಡಳಿತದಿಂದ ಬೇಸತ್ತಿರುವ ಜನತೆ ಬದಲಾವಣೆ ಬಯಸಿದ್ದು, ಅದು ಈಗ ನಡೆದಿರುವ ಲೋಕಸಭೆ ಉಪಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದಲ್ಲಿಯೆ ತಿಳಿಯಲಿದೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ಇಲ್ಲಿನ ತಾಪಂ ಕಚೇರಿಯಲ್ಲಿ ಗುರುವಾರ ವಿಧಾನ ಪರಿಷತ್ ಚುನಾವಣೆಗೆ ಮತ ಚಲಾಯಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಎರಡು ಲೋಕಸಭೆ ಮತ್ತು ಒಂದು ವಿಧಾನ ಪರಿಷತ್ ಸ್ಥಾನಗಳಲ್ಲಿಯೂ ಜೆಡಿಎಸ್ ಜಯಭೇರಿ ಬಾರಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಮತ್ತು ಬಿ.ಎಸ್. ಯಡಿಯೂರಪ್ಪ ಅವರ 20 ತಿಂಗಳ ಅಧಿಕಾರಾವಧಿಯಲ್ಲಿ ನಡೆದ ಅಭಿವೃದ್ಧಿ ಕೆಲಸಗಳು, ಜನಪರ ಕಾರ್ಯಗಳು ಈವರೆಗೆ ನಡೆದಿಲ್ಲ. ಆದ್ದರಿಂದ ಜನತೆ ಬದಲಾವಣೆಯತ್ತ ಮುಖ ಮಾಡಿದ್ದು, ಈ ಚುನಾವಣೆ ಮುಂದಿನ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಭವಿಷ್ಯ ನುಡಿದರು.
ತಾಲೂಕಿನ ಐಚನಹಳ್ಳಿ ಗ್ರಾಮಸ್ಥರು ಲೋಕಸಭಾ ಉಪ ಚುನಾವಣೆಯ ಮತದಾನ ಬಹಿಷ್ಕರಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಮತ್ತು ಕೆರೆಗೆ ನೀರು ತುಂಬಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಗ್ರಾಮಗಳಿಗೆ ಮೂಲ ಸವಲತ್ತು ಕಲ್ಪಿಸುವ ವಿಚಾರದಲ್ಲಿ ತಾರತಮ್ಯ ಮಾಡುವುದಿಲ್ಲ ಎಂದು ಹೇಳಿದರು.
ಸಾ.ರಾ. ಮಹೇಶ್ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದು ವಿಶೇಷವಾಗಿತ್ತು. ತಾಪಂ ಅಧ್ಯಕ್ಷೆ ಕವಿತಾ ರವಿ, ಉಪಾಧ್ಯಕ್ಷೆ ಶಕುಂತಲಾ ರಮೇಶ್, ಮಾಜಿ ಅಧ್ಯಕ್ಷೆ ಹೇಮಾವತಿ, ಮಾಜಿ ಉಪಾಧ್ಯಕ್ಷರಾದ ಹಾಡ್ಯ ಮಹದೇವಸ್ವಾಮಿ, ವೇಲೂರು ಕೃಷ್ಣೇಗೌಡ, ಪುರಸಭಾ ಮಾಜಿ ಅಧ್ಯಕ್ಷೆ ಗೀತಾಮಹೇಶ್ ಮತ್ತು ಇತರ ಚುನಾಯಿತ ಸದಸ್ಯರು ಮತದಾನ ಮಾಡಿದರು.
ತಾಲೂಕಿನ 31 ಗ್ರಾಪಂಗಳಲ್ಲಿಯೂ ಸದಸ್ಯರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಮತ ಕೇಂದ್ರ ತೆರೆಯಲಾಗಿತ್ತು. ಚುನಾಯಿತ ಸದಸ್ಯರು ಉತ್ಸಾಹದಿಂದ ಮತ ಚಲಾಯಿಸಿದರು. ಶಾಸಕರು ಸೇರಿದಂತೆ ಒಟ್ಟು 576 ಮಂದಿ ಚುನಾಯಿತರು ಮತದಾನ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

