ಮೈಸೂರು

ಈ ಬಾರಿ 90 ದಿನ ದಸರಾ ವಸ್ತು ಪ್ರದರ್ಶನ

Published On :

ಕ.ಪ್ರ.ವಾರ್ತೆ ,  ಮೈಸೂರು ,  ಆ. 23
ಈ ಬಾರಿ ದಸರಾ ವಸ್ತು ಪ್ರದರ್ಶನವು ಆ. 5ರಿಂದ ಜ.4 ರವರೆಗೆ ಒಟ್ಟು 90 ದಿನಗಳು ನಡೆಯಲಿದ್ದು, ಇದಕ್ಕಾಗಿ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಎಚ್.ಟಿ. ಚಂದ್ರಶೇಖರ್ ಹೇಳಿದರು.
ವಸ್ತು ಪ್ರದರ್ಶನದಲ್ಲಿ ಹಲವಾರು ನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಪ್ರಾಧಿಕಾರದ ಒಳಾವರಣವನ್ನು ಪ್ಲಾಸ್ಟಿಕ್ ಮುಕ್ತ ವಲಯ ಹಾಗೂ ಧೂಮಪಾನ ನಿಷೇಧ ವಲಯ ಎಂದು ಘೋಷಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ವಚ್ಛ ವಸು ್ತಪ್ರದರ್ಶನ ಎಂಬ ಮುಖ್ಯ ಧ್ಯೇಯ ಹೊಂದಲು ಸಾರ್ವಜನಿಕರಿಗೆ ಅರಿವು ಮೂಡಿಸಲು ಕಾರ್ಯಕ್ರಮ, ಉತ್ತಮ ಗುಣಮಟ್ಟದ ಆಹಾರ ಮಳಿಗೆ ಹೊಂದಲು ಫುಡ್ ಇನ್ಸ್‌ಟಿಟ್ಯೂಟ್ ಮ್ಯಾನೇಜ್‌ಮೆಂಟ್ ಸಹಯೋಗ, ಹೆಲ್ಪ್‌ಲೈನ್ ಡೆಸ್ಕ್ ಅಳವಡಿಕೆ- ಮಿಸ್ ಕಾಲ್ ಕೊಟ್ಟರೆ ಪ್ರತಿಕ್ರಿಯಿಸುವ ವ್ಯವಸ್ಥೆ, ಸ್ವಯಂಸೇವಾ ಸಂಸ್ಥೆಗಳು ಹಾಗೂ ಸ್ವಯಂ ಸೇವಕರ ಸಹಾಯ ಪಡೆಯುವುದು, ನಿಯಮ ಉಲ್ಲಂಘಿಸಿದವರಿಗೆ ದಂಡ, ನೀರಿನ ಮರಳು ಬಳಕೆ, ಸಸಿ ನೆಡುವುದು, ಶೂನ್ಯ ತ್ಯಾಜ್ಯ ನಿರ್ವಹಣೆ, ಶೌಚಾಲಯಗಳ ಜವಾಬ್ದಾರಿ ನಿರ್ವಹಣೆ- ಸುಲಭ ಶೌಚಾಲಯ, ಸಮರ್ಪಕ ಕಸದ ಬುಟ್ಟಿ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಕಾರಂಜಿ ಕೆರೆಯ ಮಾದರಿಯಲ್ಲಿ ವಸ್ತುಪ್ರದರ್ಶನದಲ್ಲಿ ಮಕ್ಕಳ ಆಟಿಕೆ, ಹಿರಿಯ ನಾಗರಿಕರು ಹಾಗೂ ಚಿಣ್ಣರ ಉದ್ಯಾನವನ ಆಸನಗಳೊಂದಿಗೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಪ್ರವಾಸೋದ್ಯಮ ಇಲಾಖೆ ಮಾರ್ಗದರ್ಶನದಲ್ಲಿ 101 ಮಳಿಗೆಗಳನ್ನೊಳಗೊಂಡ ಬೃಹತ್ ಪೆಂಡಾಲ್ ನಿರ್ಮಿಸಲಾಗುವುದು. ಮಹಿಳಾ ಸ್ವಯಂಸೇವಾ ಸಂಘ, ಕರಕುಶಲಕರ್ಮಿಗಳು, ಅಂತರರಾಜ್ಯ ಪ್ರಸಿದ್ಧ ಸರ್ಕಾರಿ ಹಾಗೂ ಸಹಕಾರಿ ಕುಶಲಕರ್ಮಿಗಳಿಗೆ ಪ್ರದರ್ಶನ ಹಾಗೂ ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ.
ದಸರೆ ವೇಳೆ 10 ದಿನಗಳ ವೈದ್ಯಕೀಯ ಪ್ರವಾಸೋದ್ಯಮವನ್ನು ಪ್ರಾಧಿಕಾರದ ಕನ್ನಡ ಕಾರಂಜಿ ಕಟ್ಟಡದ ಬಳಿ ಆಯೋಜಿಸಲಾಗುತ್ತಿದೆ. ಜೊತೆಗೆ ಕೈಗಾರಿಕಾ ಮಳಿಗೆಗಳ ತೆರೆಯುವುದಕ್ಕೆ ಸ್ಥಳ ಮೀಸಲಿಡಲಾಗಿದೆ ಎಂದು ತಿಳಿಸಿದರು.
ಸೋರಿಕೆಗೆ ತಡೆ: ಮುಖ್ಯದ್ವಾರದ ಪ್ರದೇಶದ ಶುಲ್ಕವನ್ನು 10 ರಿಂದ 15 ಹೆಚ್ಚಿಸಿದ್ದರೂ ಅದನ್ನು ಟೆಂಡರ್‌ನಲ್ಲಿ ಅಳವಡಿಸಿರಲಿಲ್ಲ. ಈ ಬಾರಿ ಟೆಂಡರ್‌ನಲ್ಲಿ ಅಳವಡಿಸಿ, ಸೋರಿಕೆ ತಡೆಯಲಾಗಿದೆ. ವಾಹನ ನಿಲ್ದಾಣ ನಡೆಸಲು ನ್ಯಾಯಾಲಯ ಹಾಗೂ ಸರ್ಕಾರದ ಆದೇಶವಿದ್ದರೂ ಹಿಂದಿನ ವರ್ಷ ಟೆಂಡರ್ ಕರೆಯದೆ ಇರುವುದನ್ನು ಸರಿಪಡಿಸಲಾಗಿದೆ. ಪ್ರಾಧಿಕಾರದ 21 ಕಟ್ಟಡ ಮತ್ತು ಸ್ಥಳಗಳ ಶುಲ್ಕವನ್ನು ಪಾರದರ್ಶಕವಾಗಿ ವಿಧಿಸುವಿಕೆಯನ್ನು ಪ್ರದರ್ಶಿಸಿ ಸೋರಿಕೆ ತಡೆಯಲಾಗಿದೆ. ಈ ಎಲ್ಲದರಿಂದ 1 ಕೋಟಿ ಸೋರಿಕೆ ತಡೆಯಲಾಗಿದೆ ಎಂದು ಹೇಳಿದರು.
20 ಸಿಸಿಟಿವಿ ಕ್ಯಾಮೆರಾ: ಪಾರದರ್ಶಕಗೊಳಿಸಲು ಪ್ರದರ್ಶನದ ಮುಖ್ಯದ್ವಾರದ ಪ್ರವೇಶ ಚೀಟಿಯನ್ನು ಎಲೆಕ್ಟ್ರಾನಿಕ್ ಉಪಕರಣ ಪದ್ಧತಿ ಮೂಲಕ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ವಸ್ತು ಪ್ರದರ್ಶನ, ವಾಹನ ನಿಲ್ದಾಣ ಸೇರಿದಂತೆ ವಿವಿಧೆಡೆ 20 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು ಎಂದರು.
ಸರ್ಕಾರಿ ಇಲಾಖೆಗಳು, ನಿಗಮ ಮಂಡಳಿಗಳ ಹಾಗೂ ಜಿಪಂ ಮಳಿಗೆಗಳು ನಿಗದಿತ ಸಮಯದಲ್ಲಿ ತೆರೆಯಲು ಈಗಾಗಲೇ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದಾರೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಪ್ರತಿಯೊಬ್ಬರಿಗೂ ಖುದ್ದೆ ಅರೆ ಸರ್ಕಾರಿ ಪತ್ರ ಬರೆದಿದ್ದಾರೆ. ಮಳಿಗೆಗಳಿಗಾಗಿ ಈ ಬಾರಿ 3.80 ಕೋಟಿ ಇ-ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.
ತಂತಿ ಬೇಲಿ ನಿರ್ಮಾಣ
ದೊಡ್ಡಕೆರೆ ಮೈದಾನದ ಸರ್ವೆ ನಂ.1ರ 145.13 ಎಕರೆ ಪ್ರದೇಶ ಸಂರಕ್ಷಣೆಗಾಗಿ ಸುತ್ತ ಬೇಲಿ ನಿರ್ಮಿಸಲು 9 ಲಕ್ಷ ಎಂಡಿಎ ಅನುದಾನ ಬಿಡುಗೆಡೆ ಮಾಡಿದೆ. ಪಾಲಿಕೆ ವತಿಯಿಂದ ತಂತಿ ಬೇಲಿ ನಿರ್ಮಿಸಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಸರ್ಕಾರದ ಆಸ್ತಿ ಅತಿಕ್ರಮಿಸುವವ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಫಲಕಗಳನ್ನು ಅಳವಡಿಸಲಾಗಿದೆ ಎಂದು ಡಾ. ಚಂದ್ರಶೇಖರ್ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.