ಮೈಸೂರು

ಟಿಸಿ ಇಲ್ಲದ ಬಸ್ ನಿಲ್ದಾಣ: ಪ್ರಯಾಣಿಕರ ಪರದಾಟ

Published On :

ಪಿರಿಯಾಪಟ್ಟಣ: ತಾಲೂಕಿನ ಕಿತ್ತೂರಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಸಂಚಾರ ನಿಯಂತ್ರಣಾಧಿಕಾರಿಗಳೆ ಇಲ್ಲದೆ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮಹಾರಾಜ ಕಾಲೇಜು ಪತ್ರಿಕೋದ್ಯಮ ವಿದ್ಯಾರ್ಥಿ ಜಿ. ಕುಮಾರ ದೂರಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಬಸ್ ನಿಲ್ದಾಣಗಳೆ ಇರುವುದಿಲ್ಲ. ಅಲ್ಲೊಮ್ಮೆ- ಇಲ್ಲೊಮ್ಮೆ ಬಸ್ ನಿಲ್ದಾಣ ಇದ್ದರೂ ಸಂಚಾರ ನಿಯಂತ್ರಣಾಧಿಕಾರಿಗಳು ಇರುವುದಿಲ್ಲ. ಬಸ್‌ಗಳು ಸರಿಯಾದ ವೇಳೆ ಬರುತ್ತಿಲ್ಲ.  ಕಿತ್ತೂರಿಗೆ ಕ್ರೀಡಾಕೂಟಕ್ಕೆ ಆಗಮಿಸಿದ್ದ ಬೆಟ್ಟದಪುರ, ಬೂದಿತಿಟ್ಟು ಮುಂತಾದ ಗ್ರಾಮಗಳ ವಿದ್ಯಾರ್ಥಿಗಳು ಬಸ್ ಇಲ್ಲದೆ, ಸಾರ್ವಜನಿಕರ ಸಹಾಯಕ್ಕೆ ಹಂಬಲಿಸುತ್ತಿದ್ದು, ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಕೂಡಲೆ ಕಿತ್ತೂರು ಸಾರಿಗೆ ಬಸ್ ನಿಲ್ದಾಣಕ್ಕೆ ಸಂಚಾರ ನಿಯಂತ್ರಣಾಧಿಕಾರಿಗಳನ್ನು ನೇಮಿಸುವಂತೆ ಕುಮಾರ್ ಒತ್ತಾಯಿಸಿದ್ದಾರೆ.
ಸಂತ ಜೋಸೆಫರ ಕಾಲೇಜಿಗೆ ಸಮಗ್ರ ಪ್ರಶಸ್ತಿ
ಹುಣಸೂರು: ತಾಲೂಕಿನ ಗಾವಡಗೆರೆಯಲ್ಲಿ ನಡೆದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಪಟ್ಟಣದ ಸಂತ ಜೋಸೆಫರ ಪಿಯು ಕಾಲೇಜಿಗೆ ಸಮಗ್ರ ಪ್ರಶಸ್ತಿ ಲಭಿಸಿತು. ಬಾಲಕ ಮತ್ತು ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಹಾಗೂ ಥ್ರೋಬಾಲ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದೆ. ಬಾಲಕಿಯರ ವಿಭಾಗದ ಅಥ್ಲೇಟಿಕ್ಸ್‌ನಲ್ಲಿ 1500 ಮೀ, 400 ಮೀ. ಓಟ ಹಾಗೂ ಟ್ರಿಬಲ್ ಜಂಪ್‌ನಲ್ಲಿ ತೇಜಸ್ವಿನಿ ಪ್ರಥಮ, 800 ಮೀ. ಓಟ, ಉದ್ದ ಜಿಗಿತ, ಗುಂಡು ಎಸೆತದಲ್ಲಿ ಸೌಮ್ಯರಾಣಿ ಪ್ರಥಮ, 1500 ಮೀ. ಓಟದಲ್ಲಿ ಎಂ. ಕೃತಿಕಾ ದ್ವಿತೀಯ ಸ್ಥಾನ ಪಡೆದರು. 3000 ಮೀ. ಓಟದಲ್ಲಿ ಕಿಶೋರಿ ದ್ವಿತೀಯ, ಗುಂಡು ಎಸೆತ ಹಾಗೂ ತಟ್ಟೆ ಎಸೆತದಲ್ಲಿ ಅನು ಪಲ್ಲವಿ ದ್ವಿತೀಯ, ಭರ್ಜಿ ಎಸೆತದಲ್ಲಿ ಎನ್. ಪೂಜಾ ದ್ವಿತೀಯ, ತ್ರಿವಿಧ ಜಿಗಿತದಲ್ಲಿ ತಾನಿಯ ಪಿರೇರಾ ದ್ವಿತೀಯ, 4್ಢ100 ಮೀ. ರಿಲೇಯಲ್ಲಿ ತೇಜಸ್ವಿನಿ, ಅಶ್ವಿನಿ, ಕೃತಿಕಾ, ಅನುಪಲ್ಲವಿ ತಂಡ ಪ್ರಥಮ ಹಾಗೂ ಇದೇ ತಂಡ 4್ಢ400 ಮೀ. ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ ಎಂದು ಕಾಲೇಜಿನ ಪ್ರಾಂಶುಪಾಲೆ ಎಮಿಲಿ ಡಿಸೋಜ ತಿಳಿಸಿದ್ದಾರೆ.
ಭೇರ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ
ಕ.ಪ್ರ.ವಾರ್ತೆ ,  ಭೇರ್ಯ ,  ಆ. 25
ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಸನ- ಮೈಸೂರು ಹೆದ್ದಾರಿ ಭೇರ್ಯ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ ಶಾಲಾ ಮಕ್ಕಳಿಗೆ ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.
ಕಾಂಗ್ರೆಸ್ ಮುಖಂಡ ಮುದುಗುಪ್ಪೆ ಜಯದೇವ್ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ ರಾಜ್ಯದ ಎಲ್ಲಾ ನಾಯಕರ ಶ್ರಮದಿಂದ ಈ ಚುನಾವಣೆಯಲ್ಲಿ ನಿರೀಕ್ಷೆಗೂ ಹೆಚ್ಚು ಮತಗಳ ಅಂತರದಲ್ಲಿ ಅಭ್ಯರ್ಥಿಗಳು ಗೆಲವು ಸಾಧಿಸಿದರು ಎಂದು ಅಭಿಪ್ರಾಯಪಟ್ಟರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರ್, ಮೈಸೂರು ಯುವ ಕಾಂಗ್ರೆಸ್ ಕಾರ್ಯದರ್ಶಿ ಮೋಹನ್‌ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಮುಶೀರ್, ಸದಸ್ಯರಾದ ಕೃಷ್ಣೇಗೌಡ, ಕಾರ್ಯಕರ್ತರಾದ ಬಿ.ಎಂ. ಪ್ರಕಾಶ್, ಸುರೇಶ್ ಬಾಬು, ಹುಚ್ಚೇಗೌಡ, ಶುಭಕರ, ಗಿಡ್ಡುಕುಮಾರ್, ಕಾಳೇಗೌಡ, ಪ್ರಕಾಶ್, ಶಿವಕುಮಾರನಾಯ್ಕ, ನಾಗರಾಜ್, ಶಕೀಲ್, ಜಬ್ಬಾರ್, ಅಸ್ಲಾಂ ಇದ್ದರು.
ಕುಮಾರಸ್ವಾಮಿ ಮುಂದುವರಿಯಲಿ: ಶಿವಶಂಕರ್
ಚುನಾವಣೆ ಎಂದ ಮೇಲೆ ಸೋಲು- ಗೆಲವು ಸಾಮಾನ್ಯ. ಇದರಿಂದ ಧೃತಿಗೆಡದೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಲ್ಲಿಯೇ ಮುಂದುವರಿಯುವಂತೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಲಾಗುವುದು ಎಂದು ವಕೀಲ ಶಿವಶಂಕರ್ ತಿಳಿಸಿದ್ದಾರೆ. ಚುನಾವಣೆಯಲ್ಲಿ ಮತದಾರರು ಕೊಡುವ ತೀರ್ಪೆ ಅಂತಿಮ. ಮತ್ತೆ ಅವರ ಮನಗೆಲ್ಲುವ ಕಡೆ ಗಮನಹರಿಸೋಣ. ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಉಪ ಚುನಾವಣೆಗೆ ಮತದಾರರು ಮತದಾನದಲ್ಲಿ ತೊಡಗದಿರಲು ಪರಿಸ್ಥಿತಿಯೂ ಸರಿ ಇರಲಿಲ್ಲ. ಕೃಷಿ ಚಟುವಟಿಕೆಯಿಂದ ಶೇ. 50 ರಷ್ಟು ಮತದಾರರು ಮತ ಚಲಾಯಿಸದೆ ಹಿನ್ನೆಲೆಯಲ್ಲಿ ಜೆಡಿಎಸ್‌ಗೆ ಸೋಲುಂಟಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ಟಿ.ನರಸೀಪುರ: ತಾಲೂಕಿನ ಶರಣ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷರಾಗಿ ವಾಟಾಳು ಮಠದ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ ಆಯ್ಕೆಯಾಗಿದ್ದಾರೆ. ಗೌರವ ಸಲಹೆಗಾರರಾಗಿ ಪ್ರಾಧ್ಯಾಪಕಿ ಡಾ.ಸಿ.ಜಿ. ಉಷಾದೇವಿ, ಅಧ್ಯಕ್ಷರಾಗಿ ಬಿ. ಸೋಮಶೇಖರ್, ಉಪಾಧ್ಯಕ್ಷರಾಗಿ ನಟರಾಜು, ಕಾರ್ಯದರ್ಶಿಯಾಗಿ ಕುಮಾರಸ್ವಾಮಿ, ಸಂಘಟನಾ ಕಾರ್ಯದರ್ಶಿಯಾಗಿ ಬಿ.ಜಿ. ರಾಜಶೇಖರ್, ಖಜಾಂಚಿಯಾಗಿ ಬಿ.ಎಂ. ನಿಜುಗಣಾರಾಧ್ಯ, ಪತ್ರಿಕಾ ವರದಿಗಾರರಾಗಿ ಚನ್ನಬಸವಣ್ಣ, ಮಹಾ ಪೋಷಕರಾಗಿ ಎಂ. ಲಿಂಗರಾಜು, ಸುಗಂಧರಾಜು, ಎಂ.ಎಸ್. ಮಹೇಶ್ ಆಯ್ಕೆಯಾಗಿದ್ದಾರೆ. ಕಸಬಾ ಹೋಬಳಿ ನಿರ್ದೇಶಕರಾಗಿ ಎನ್. ಶೇಖರ್, ಪಿ. ಶಿವಣ್ಣ, ಪ್ರಕಾಶ್, ಶ್ರೀಕಂಠಸ್ವಾಮಿ, ಸೋಸಲೆ ಹೋಬಳಿಗೆ ಬಿ.ಎಸ್. ಬಸಪ್ಪ, ಆರ್. ಶಿವಕುಮಾರಸ್ವಾಮಿ, ಕುಮಾರ, ಎಂ. ನಂಜುಂಡಸ್ವಾಮಿ, ನಾಗಣ್ಣ, ಬನ್ನೂರು ಹೋಬಳಿಗೆ ಎಂ.ಇ. ಮಂಜುನಾಥ, ಬಿ.ಎಸ್. ಅಡವೀಶಯ್ಯ, ಕೆ. ಪುಟ್ಟಸ್ವಾಮಿ, ಮಹದೇವಸ್ವಾಮಿ, ಮೂಗೂರು ಹೋಬಳಿಗೆ ಗುರುಪಾದ, ಶಿವಕುಮಾರ್, ಸಿದ್ದೇಶ್, ಮೋಹನ್, ಶಿವಣ್ಣ, ತಲಕಾಡು ಹೋಬಳಿಗೆ ಶಂಕರಪ್ಪ, ಕುಮಾರ ಮತ್ತು ರುದ್ರಸ್ವಾಮಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಅಧ್ಯಕ್ಷ ಡಾ.ಎಸ್. ಶಿವರಾಜಪ್ಪ ತಿಳಿಸಿದ್ದಾರೆ.
ಪ್ರತಿಭಾ ಪುರಸ್ಕಾರ
ನಂಜನಗೂಡು: ಪಟ್ಟಣದ ಕಪಿಲ ಎಜುಕೇಷನ್ ಟ್ರಸ್ಟ್ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ತಾಲೂಕಿನ ಪ್ರತಿಭಾವಂತ ಪ.ಜಾತಿ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಆಯೋಜಿಸಿದೆ. ಆಸಕ್ತ ವಿದ್ಯಾರ್ಥಿಗಳು ಅರ್ಜಿಯನ್ನು, ಪ್ರಧಾನ ಕಾರ್ಯದರ್ಶಿ, ನಂ. ಎಲ್ 59, 3ಎ ಮುಖ್ಯರಸ್ತೆ, ಐ ಬ್ಲಾಕ್, ರಾಮಕೃಷ್ಣನಗರ, ಮೈಸೂರು- 22 ಇಲ್ಲಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಮೊ. 9449059224.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.