ಮೈಸೂರು

ಮೇಲ್ಮನೆ ಉಪ ಚುನಾವಣೆ: ಇಂದು ಮತ ಎಣಿಕೆ

Published On :

ಕ.ಪ್ರ.ವಾರ್ತೆ ,  ಮೈಸೂರು ,  ಆ. 25
ಮೈಸೂರು- ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ಒಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಯ ಮತ ಎಣಿಕೆ ಕಾರ್ಯವು ಆ. 26 ರಂದು ನಂಜನಗೂಡು ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆಯಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ನಡೆದಿರುವ ಈ ಉಪ ಚುನಾವಣೆಯ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ. ಗೆಲವಿಗಾಗಿ ಕಾಂಗ್ರೆಸ್ ಹಾಗೂ ಕೆಜೆಪಿ ಅಭ್ಯರ್ಥಿ ನಡುವೆ ಪೈಪೋಟಿ ಇದೆ. 2010 ರಲ್ಲಿ ಆಯ್ಕೆಯಾಗಿದ್ದ ಬಿಜೆಪಿಯ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ ಅವರ ರಾಜಿನಾಮೆಯಿಂದ ಈ ಸ್ಥಾನ ತೆರವಾಗಿತ್ತು.
ಮೈಸೂರು- ಚಾಮರಾಜನಗರ ದ್ವಿಸದಸ್ಯ ಕ್ಷೇತ್ರ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ತಲಾ 1 ಸ್ಥಾನ ಪಡೆದಿದ್ದವು. ಕಾಂಗ್ರೆಸ್ ಪರಾಭವಗೊಂಡಿತ್ತು. ಈ ಬಾರಿ ಶತಾಯಗತಾಯ ಗೆಲ್ಲುವ ಯತ್ನ ನಡೆಸಿದೆ. ಕೆಜೆಪಿಗೆ ಬಿಜೆಪಿ, ಜೆಡಿಎಸ್ ಬೆಂಬಲ ಸೂಚಿಸಿದ್ದು, ತನ್ನ ಸ್ಥಾನ ಉಳಿಸಿಕೊಳ್ಳಲು ಆ ಪಕ್ಷ ಹವಣಿಸಿದೆ. ಬೆಳಗ್ಗೆ 7.45ಕ್ಕೆ ಎಣಿಕೆ ಕೇಂದ್ರದಲ್ಲಿನ ಭದ್ರತಾ ಕೊಠಡಿ ತೆರೆದು, ಬೆಳಗ್ಗೆ 8ಕ್ಕೆ ಮತ ಎಣಿಕೆ ಆರಂಭಿಸಲಾಗುತ್ತದೆ. ಮತ ಎಣಿಕೆಗಾಗಿ 14 ಟೇಬಲ್‌ಗಳನ್ನು ಅಳವಡಿಸಲಾಗಿದ್ದು, ಪ್ರತಿ ಟೇಬಲ್‌ನಲ್ಲಿ ಒಬ್ಬ ಎಣಿಕೆ ಮೇಲ್ವಿಚಾರಕ ಮತ್ತು ಒಬ್ಬ ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ.
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಒಟ್ಟು 368 ಮತ ಕೇಂದ್ರದಲ್ಲಿ ಮತದಾನ ನಡೆದಿದೆ. ಒಟ್ಟು 7,010 ಮತದಾರರ ಪೈಕಿ 6,953 ಮತದಾರರು ತಮ್ಮ ಮತ ಚಲಾಯಿಸಿದ್ದು, ಶೇ. 99.19 ಮತದಾನವಾಗಿದೆ.
ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್. ಧರ್ಮಸೇನ, ಕೆಜೆಪಿ ಅಭ್ಯರ್ಥಿಯಾಗಿ ಯು.ಎಸ್. ಶೇಖರ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಅಯೂಬ್ ಖಾನ್ ಸ್ಪರ್ಧಿಸಿದ್ದಾರೆ.
ನಿಷೇಧಾಜ್ಞೆ: ಮತ ಎಣಿಕೆ ಹಿನ್ನೆಲೆಯಲ್ಲಿ ಆ. 26ರ ಬೆಳಗ್ಗೆ 6 ರಿಂದ ಮಧ್ಯರಾತ್ರಿ 12 ರವರೆಗೆ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಸುತ್ತಮುತ್ತ 1 ಕಿಮೀ ರವರೆಗೆ ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಮತ ಎಣಿಕೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕಾಲೇಜಿಗೆ ರಜೆ ಘೋಷಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.