ಮೈಸೂರು

ಚಿನ್ನದ ಅಂಬಾರಿಯನ್ನೇ ಹೊರಿಸಲು ನಿರ್ಧಾರ: ಶ್ರೀನಿವಾಸ್ ಪ್ರಸಾದ್

Published On :

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದಲ್ಲಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಆನೆಯ ಮೇಲೆ ಹೊರಿಸುವ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಸ್ಪಷ್ಟಪಡಿಸಿದರು.
ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕಾರಿ ಸಮಿತಿಯ ಮೊದಲ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಆನೆಗೆ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಅಲ್ಲದೆ, ಆನೆಗೆ ಹೆಚ್ಚು ಭಾರ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತದೆ. ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯೆ ಅಂಬಾರಿ ಆದ್ದರಿಂದ ಆ ವಿಚಾರದಲ್ಲಿ ಬದಲಾವಣೆ ಇಲ್ಲ. ಅಲ್ಲದೆ, ಹಿಂದಿನ ಪರಂಪರೆ ಕೈ ಬಿಡಲಾಗದು ಎಂದರು.
'ದಸರಾ ಉತ್ಸವದಲ್ಲಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಆನೆಯ ಮೇಲೆ ಹೊರಿಸಿ ಹಿಂಸಿಸುವುದೇ ಸರಿಯೇ? ಇದರ ಬದಲಿಗೆ ಕಡಿಮೆ ತೂಕದ ಚಿನ್ನಲೇಪಿತ ಅಂಬಾರಿಯನ್ನೇಕೆ ಬಳಸಬಾರದು' ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿತ್ತು. ಅಲ್ಲದೇ ಗಾಡಿಯಲ್ಲಿ ಅಂಬಾರಿಯನ್ನು ಮೆರವಣಿಗೆ ಮಾಡುವ ವ್ಯವಸ್ಥೆಯನ್ನೇಕೆ ಅಳವಡಿಸಿಕೊಳ್ಳಬಾರದು ಎಂದೂ ಸರ್ಕಾರಕ್ಕೆ ಸಲಹೆ ನೀಡಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ವಿ. ಶ್ರೀನಿವಾಸಪ್ರಸಾದ್, ಪರಂಪರೆಯನ್ನೇ ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದರು. ಜನರ ಧಾರ್ಮಿಕ ಭಾವನೆಗೆ ಧಕ್ಕೆಯಾಗುವಂತ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಪೊಲೀಸರೂ ಅರಮನೆ ಸಿಬ್ಬಂದಿಯ ಉಡುಪನ್ನೆ ಹಾಕಿಕೊಳ್ಳಬೇಕೆಂಬುದರ ಬಗ್ಗೆಯೂ ಚರ್ಚಿಸಲಾಗಿದೆ ಎಂದರು.
ಇಂದಿನಿಂದ ಗಜಪಯಣ
ಆ.28ರಂದು ಹುಣಸೂರು ತಾಲೂಕು ನಾಗಾಪುರ ಗಿರಿಜನ ಹಾಡಿಯಿಂದ ಗಜಪಯಣ ಆರಂಭಗೊಳ್ಳಲಿದೆ. ಇದರ ಜತೆ ದಸರಾ ಕಾರ್ಯಕ್ರಮದ ಸಿದ್ಧತೆಗಳೂ ಆರಂಭವಾಗಲಿವೆ. ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರಿಂದ ದಸರಾ ವಿಶೇಷಾಧಿಕಾರಿಯಾದ ಜಿಲ್ಲಾಧಿಕಾರಿಯೇ 20 ಉಪ ಸಮಿತಿಗಳನ್ನು ರಚಿಸಿ, ಆಯಾ ಇಲಾಖೆಯ ಉಪ ನಿರ್ದೇಶಕರನ್ನು ಕಾರ್ಯಾಧ್ಯಕ್ಷರಾಗಿ ನೇಮಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.