ಜಾತಿ, ಮತ ತೊರೆಯಲು ಕ್ರೀಡಾಕೂಟ ಸಹಕಾರಿ
ಹುಣಸೂರು: ಸಮಾಜದ ವ್ಯವಸ್ಥೆಯಲ್ಲಿ ಜಾತಿ- ಮತವನ್ನೆಲ್ಲ ಬದಿಗೊತ್ತಿ, ಎಲ್ಲರೂ ಒಂದಾಗಲು ಕ್ರೀಡಾಕೂಟ ಒಳ್ಳೆಯ ವೇದಿಕೆಯಾಗಿದೆ. ಕ್ರೀಡೆಯಲ್ಲಿ ಸೋಲು ಗೆಲವು ಸಹಜ. ಆದರೆ, ಸೋಲನ್ನು ಗೆಲವಿನ ಸೋಪಾನವೆಂದು ತಿಳಿದು ಮುನ್ನುಗ್ಗುವಂತೆ ಜಿಪಂ ಸದಸ್ಯೆ ಡಾ. ಪುಷ್ಪಾವತಿ ಅಮರನಾಥ್ ಕರೆ ನೀಡಿದರು.
ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ 2013- 14ನೇ ಸಾಲಿನ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಪಾರಿವಾಳ ಹಾರಿಬಿಡುವ ಮೂಲಕ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹಲವಾರು ಪ್ರತಿಭೆಗಳು ಎಲೆಮರೆಕಾಯಿಯಂತೆ ಇದ್ದು, ಶಿಕ್ಷಕರ ಪ್ರಯತ್ನದಿಂದ ಮಾತ್ರ ಅವು ಹೊರಬರಲು ಸಾಧ್ಯವಿದೆ ಎಂದರು. ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ತಾಲೂಕಿನ ಹೆಮ್ಮೆಯ ಪುತ್ರಿ ಬೀಬಿ ಸುಮಯಾ ಕ್ರೀಡಾಜ್ಯೋತಿ ಸ್ವೀಕರಿಸಿದರು. ಕ್ರೀಡಾಂಗಣದಲ್ಲಿ ತಾಲೂಕಿನ ಏಳು ವಲಯಗಳ ಕ್ರೀಡಾಪಟುಗಳ ಸಮ್ಮುಖದಲ್ಲಿ ತಹಸೀಲ್ದಾರ್ ಬಿ.ಸಿ. ಶಿವಾನಂದಮೂರ್ತಿ, ಬಿಇಒ ರಾಜಶೇಖರ್ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ನಂತರ ವಿವಿಧ ವಲಯದ ದೈಹಿಕ ಶಿಕ್ಷಣ ಶಿಕ್ಷಕರನ್ನು ಗಣ್ಯರಿಗೆ ಪರಿಚಯಿಸಿತು. ವಿದ್ಯಾರ್ಥಿಗಳು ಪಥಸಂಚಲನ ನಡೆಸಿ ಗಣ್ಯರಿಗೆ ವಂದಿಸಿದರು. ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶನ ನಡೆಸಿಕೊಟ್ಟರು.
ಸರಗೂರು ತಾಲೂಕು ಕೇಂದ್ರವಾಗಲಿ
ಎಚ್.ಡಿ. ಕೋಟೆ: ಸರಗೂರನ್ನು ತಾಲೂಕು ಕೇಂದ್ರವನ್ನಾಗಿ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಹಾಗೂ ಸರ್ಕಾರವನ್ನು ತಾಲೂಕು ಹೋರಾಟ ಸಮಿತಿ ಸದಸ್ಯ ಕೃಷ್ಣ ಒತ್ತಾಯಿಸಿದ್ದಾರೆ. ಹಿಂದೆ ಐಎಎಸ್ ಅಧಿಕಾರಿಗಳು ಈ ಭಾಗದಲ್ಲಿ ಸಂಚರಿಸಿ, ತಾಲೂಕು ಕೇಂದ್ರವನ್ನಾಗಿ ಮಾಡಬೇಕೆಂದು ಸೂಚಿಸಿದ್ದರು. ಇದಾದ ಬಳಿಕ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಆಡಳಿತ ನಡೆಸಿದಾಗ ಐಎಎಸ್ ಅಧಿಕಾರಿ ಎಂ.ಬಿ. ಪ್ರಕಾಶ್ ಸರ್ಕಾರಕ್ಕೆ ತಮ್ಮ ವರದಿ ಸಲ್ಲಿಸಿದ್ದು, ಅದರಲ್ಲಿಯೂ ಸರಗೂರು ತಾಲೂಕು ಕೇಂದ್ರ ಮಾಡಬಹುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆದರೂ ಸಹ ಸರ್ಕಾರವು ಇದರ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.
ಶಾಲಾ ಮುಖ್ಯ ಶಿಕ್ಷಕ ಬದಲಿಸಿ
ಎಚ್.ಡಿ. ಕೋಟೆ: ಶಾಲಾ ಮುಖ್ಯ ಶಿಕ್ಷಕ ಹಾಗೂ ಅಡುಗೆಯವರನ್ನು ಬದಲಾಯಿಸುವಂತೆ ಇಲ್ಲಿನ ಸಿದ್ದಪ್ಪಾಜಿ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ತಾಲೂಕು, ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕ ನಂಜರಾಜು ಶಾಲೆಗೆ ಸರಿಯಾಗಿ ಬರುತ್ತಿಲ್ಲ ಹಾಗೂ ಬಂದ ನಂತರ ಕೆಲವು ನಿಮಿಷವಿದ್ದು ಹೊರಟರೆ ಸಂಜೆ 4ಕ್ಕೆ ಶಾಲೆಗೆ ಹಾಜರಾಗುತ್ತಾರೆ. ಇವರು ಆಂಗ್ಲ ಭಾಷೆ ಹಾಗೂ ವಿಜ್ಞಾನ ವಿಷಯದ ಬಗ್ಗೆ ಬೋಧಿಸುತ್ತಿದ್ದು, ಇವರು ಮಾಡುವ ಪಾಠ ಅರ್ಥವಾಗುವುದಿಲ್ಲ. ಜತೆಗೆ ಬಿಸಿ ಊಟವನ್ನು ಸರಿಯಾಗಿ ನೀಡುತ್ತಿಲ್ಲ ಎಂದು ಅವರು ದೂರಿದ್ದಾರೆ.
ವಿಧಾನಸೌಧ ಚಲೋಗೆ ಬೆಂಬಲ
ಎಚ್.ಡಿ. ಕೋಟೆ: ರಾಜ್ಯದ ಶ್ರಮಿಕ ಶಕ್ತಿ ಸಂಘಟನೆಯವರು ಆ.30 ರಲ್ಲಿ ಕರೆದಿರುವ ವಿಧಾನಸೌಧ ಚಲೋಗೆ ತಾಲೂಕು ಶ್ರೀ ಮಂಜುನಾಥ ಲೋಡರ್ಸ್ ಅಸೋಸಿಯೇಷನ್ ಬೆಂಬಲ ವ್ಯಕ್ತಪಡಿಸಿರುವುದಾಗಿ ಅಧ್ಯಕ್ಷ ಚಿಕ್ಕಣ್ಣ ಹೇಳಿದ್ದಾರೆ. ಅಕ್ಕಿ ಮೂಟೆ ಹೊರುವ ಹಮಾಲಿ ಕಾರ್ಮಿಕರಿಗೆ ನ್ಯಾಯಬದ್ಧ ಹಕ್ಕುಗಳಿಗಾಗಿ ಈ ಹೋರಾಟ ನಡೆಸಲಾಗುತ್ತಿದ್ದು, ಸರ್ಕಾರವು ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕಾರ್ಮಿಕರ ಒಕ್ಕೂಟದವರು ಕರೆದಿರುವ ವಿಧಾನಸೌಧ ಚಲೋದಲ್ಲಿ ತಾವು ಭಾಗವಹಿಸುತ್ತಿರುವುದಾಗಿ ತಿಳಿಸಿದ್ದಾರೆ.
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ನಂಜನಗೂಡು: ಪಟ್ಟಣ ಹಾಗೂ ತಾಲೂಕಿನಲ್ಲಿರುವ ಸರ್ಕಾರಿ, ಅರೆಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ 5ನೇ ತರಗತಿಯಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕಾಗಿ ಅರ್ಹ ವಿದ್ಯಾರ್ಥಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳಿಗೆ ಸೇರಿದ ಪ್ರವರ್ಗ-1, 2ಎ, 3ಎ ಮತ್ತು ಪ್ರವರ್ಗ- 3ಬಿಗೆ ಸೇರಿದವರಾಗಿರಬೇಕು. ಅಕೌಂಟ್ ಮತ್ತು ಆಧಾರ್ ನಂಬರ್ ಹೊಂದಿರಬೇಕು. ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 5 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ 250 ಮಂಜೂರು ಮಾಡಲಾಗುವುದು ಹಾಗೂ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಬಾಲಕರಿಗೆ 500, ಬಾಲಕಿಯರಿಗೆ 600 ಮಂಜೂರು ಮಾಡಲಾಗುತ್ತದೆ. ಪ್ರಸ್ತುತ 5ನೇ ತರಗತಿಯಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರಬೇಕು. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಸೆ. 30 ರೊಳಗೆ ಸಲ್ಲಿಸುವಂತೆ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
ಕಾರ್ಯಾಗಾರ
ಮೈಸೂರು: ರಾಮಕೃಷ್ಣನಗರದ ಇ ಮತ್ತು ಎಫ್ ಬ್ಲಾಕ್ ವತಿಯಿಂದ ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಆ.31ರ ಬೆಳಗ್ಗೆ 10ಕ್ಕೆ ಲಿಂಗಾಂಬುಧಿ ಪಾಳ್ಯದಲ್ಲಿರುವ ಅರಿವು ಶಾಲೆಯಲ್ಲಿ ಪರಿಸರಸ್ನೇಹಿ ಜೇಡಿಮಣ್ಣಿನ ಗಣೇಶ ತಯಾರಿಕೆ ಕಾರ್ಯಗಾರ ಆಯೋಜಿಸಿದೆ. ಆಸಕ್ತರು ಆ.30ರೊಳಗೆ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮಹೇಶ್ವರಿ, ಮೊ. 9482277872 ಸಂಪರ್ಕಿಸಬಹುದು.
ರೈತರಿಗೆ ಜಮೀನು ನೀಡಲು ದಸಂಸ ಮನವಿ
ಹುಣಸೂರು: ತಾಲೂಕಿನ ಉದ್ದೂರು ಕಾವಲು ಸೊಸೈಟಿ ಜಮೀನನ್ನು ಮಾಡಿಕೊಂಡು ಬಂದಿರುವ ರೈತರಿಗೆ ಸರ್ಕಾರದ ಸಾಲ ಸೌಲಭ್ಯಗಳು ಹಾಗೂ ಸರ್ಕಾರದ ಸಹಾಯಧನ ಈವರೆಗೆ ಸಿಕ್ಕಿಲ್ಲ. ಈಗಾಗಲೇ 3,500 ಎಕರೆ ಜಮೀನಿನಲ್ಲಿ 2,800 ಎಕರೆ ರೈತರಿಗೆ ಮಂಜೂರಾಗಿದೆ. ಉಳಿದ 600 ರಿಂದ 700 ಎಕರೆ ಜಮೀನುಗಳಿಗೆ ಈ ವರ್ಷದಲ್ಲಿ ಮಂಜೂರಾತಿ ದೊರೆತಿದ್ದರೂ ತರಿ ಜಮೀನಿಗೆ ಎಕರೆಗೆ 2 ಲಕ್ಷ ಮತ್ತು ಖುಷ್ಕಿಗೆ 1 ಲಕ್ಷ ನಿಗದಿಪಡಿಸಲಾಗಿದೆ. ಈ ಲೋಪವನ್ನು ಸರಿಪಡಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಆಗ್ರಹಿಸಿದರು.
ಬಸವರಾಜು ನೇಮಕ
ಟಿ. ನರಸೀಪುರ: ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷರನ್ನಾಗಿ ತೋಟದಪ್ಪ ಬಸವರಾಜು ಅವರನ್ನು ನೇಮಕ ಮಾಡಲಾಗಿದೆ.
ತಾಲೂಕು ಕ್ರೀಡಾಕೂಟಕ್ಕೆ ಚಾಲನೆ
ಎಚ್.ಡಿ. ಕೋಟೆ: ತಾಲೂಕಿನ ಶಾಲಾ, ಕಾಲೇಜು ವಿದ್ಯಾರ್ಥಿಗಳು ಬಹುತೇಕ ರೈತ ಮಕ್ಕಳಾದ್ದರಿಂದ ಅವರು ಕ್ರೀಡೆಯಲ್ಲಿ ಭಾಗವಹಿಸಿ ನೀರು ಕುಡಿದಂತೆ ಬಹುಮಾನವನ್ನು ಬಾಚಿಕೊಳ್ಳುತ್ತಿದ್ದಾರೆ ಎಂದು ಶಾಸಕ ಚಿಕ್ಕಣ್ಣ ಹೇಳಿದರು. ತಾಲೂಕು ಕಾಲೇಜು ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ತೀರ್ಪುಗಾರರ ತೀರ್ಪಿಗೆ ತಲೆ ಬಾಕಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ತಾಪಂ ಉಪಾಧ್ಯಕ್ಷ ಬಿ.ಜಿ. ಮಹೇಂದ್ರ ಮಾತನಾಡಿದರು. ತಾಲೂಕು ದೈಹಿಕ ಶಿಕ್ಷಣದ ಪರಿವೀಕ್ಷಕ ಕಲೀಮುಲ್ಲ, ಸುರೇಶ್, ದೈಹಿಕ ಶಿಕ್ಷಕ ಅಂತೋಣಿ, ನರಸಿಂಹ, ರಾಮಚಂದ್ರ, ನಂಜಯ್ಯ, ರಂಗಸ್ವಾಮಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

