ಮೈಸೂರು

ವೃದ್ಧನ ಹತ್ಯೆ ಮಾಡಿ ಚಿನ್ನಾಭರಣ ಅಪಹರಣ

Published On :

ಕ.ಪ್ರ.ವಾರ್ತೆ , ಮೈಸೂರು , ಆ. 30
ಹಾಡಹಗಲೆ ವೃದ್ಧರೊಬ್ಬರನ್ನು ಹತ್ಯೆ ಮಾಡಿದ ದುಷ್ಕರ್ಮಿಗಳು ಚಿನ್ನಾಭರಣ ಅಪಹರಿಸಿ ಪರಾರಿಯಾಗಿರುವ ಘಟನೆ ಗೋಕುಲಂನಲ್ಲಿ ಶುಕ್ರವಾರ ನಡೆದಿದೆ. ಗೋಕುಲಂ, 3ನೇ ಹಂತ, 6ನೇ ಕ್ರಾಸ್‌ನ ನಿವಾಸಿ ಲಿಂಗಪ್ಪ (75) ಕೊಲೆಯಾದವರು. ಶುಕ್ರವಾರ ಮಧ್ಯಾಹ್ನ ಮನೆಯಲ್ಲಿ ಲಿಂಗಪ್ಪ ಒಬ್ಬರೆ ಇದ್ದರು. ದುಷ್ಕರ್ಮಿಗಳು ಮನೆಗೆ ನುಗ್ಗಿ ಲಿಂಗಪ್ಪ ಅವರ ಕುತ್ತಿಗೆಯನ್ನು ವೈರ್‌ನಿಂದ ಬಿಗಿದು ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮನೆಯ ಬೀರುವನ್ನು ಒಡೆದು ಸುಮಾರು 1.5 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಮೃತರಿಗೆ ನಾಲ್ವರು ಪುತ್ರಿಯರು ಮತ್ತು ಓರ್ವ ಪುತ್ರ ಇದ್ದಾರೆ. ಈ ಪೈಕಿ ಇಬ್ಬರು ಪುತ್ರಿಯರು ಮತ್ತು ಮಗನಿಗೆ ಮದುವೆಯಾಗಿದ್ದು, ಅವರೆಲ್ಲ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಲಿಂಗಪ್ಪ ಉಳಿದಿಬ್ಬರ ಹೆಣ್ಣು ಮಕ್ಕಳ ಜತೆ ವಾಸವಿದ್ದು, ಅವರಿಬ್ಬರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಪ್ರತಿ ದಿನ ಮಧ್ಯಾಹ್ನ ತಂದೆಯ ಊಟದ ಬಗ್ಗೆ ಇಬ್ಬರೂ ಫೋನ್ ಮಾಡಿ ವಿಚಾರಿಸುತ್ತಿದ್ದರು. ಇಂದು ಮಧ್ಯಾಹ್ನ ಎಷ್ಟು ಹೊತ್ತಾದರೂ ಫೋನ್ ಸ್ವೀಕರಿಸದಿದ್ದಾಗ ಮಕ್ಕಳಿಬ್ಬರೂ ಅನುಮಾನಗೊಂಡು ಮನೆಗೆ ಬಂದಾಗ ಕೊಲೆ ಆಗಿರುವುದು ಗೊತ್ತಾಗಿದೆ. ಯಾರೋ ಪರಿಚಯಸ್ಥರೆ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಅಪರಿಚಿತ ವ್ಯಕ್ತಿ ಶವ ಪತ್ತೆ
ಮೈಸೂರು: ಉದಯಗಿರಿ ಸಮೀಪದ ಮಹದೇವಪುರ ರಸ್ತೆಯ ಹಿಲ್‌ಟಾಪ್ ಬಳಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಸುಮಾರು 45 ರಿಂದ 50 ವರ್ಷ ವಯಸ್ಸು, ಕೋಲುಮುಖ, ತೆಳ್ಳನೆ ಶರೀರ, ಎಣ್ಣೆಗೆಂಪು ಮೈಬಣ್ಣ, 5.6 ಅಡಿ ಎತ್ತರ, ಬಿಳಿ ಜುಬ್ಬ, ಬಿಳಿ ಪೈಜಾಮ, ಬೂದು ಬಣ್ಣದ ಕೋಟು, ಕೆಂಪು ಹೂ ಆಕಾರದ ಬೆಡ್‌ಶೀಟ್ ಹೊಂದಿರುವ ವಾರಸುದಾರರು ಇದ್ದಲ್ಲಿ ಉದಯಗಿರಿ ಠಾಣೆ ಸಂಖ್ಯೆ 2418309 ಸಂಪರ್ಕಿಸಿ.
ಸಿಡಿಲು ಬಡಿದು ಎತ್ತು ಸಾವು
ಹುಣಸೂರು: ಸಿಡಿಲು ಬಡಿದು ಎತ್ತೊಂದು ಮೃತಪಟ್ಟ ಘಟನೆ ತಾಲೂಕಿನ ಹನಗೋಡಿನಲ್ಲಿ ಗುರುವಾರ ಸಂಜೆ ಜರುಗಿದೆ. ಹನಗೋಡು ಗ್ರಾಮದ ನಿವಾಸಿ ಮಹದೇವ ಅವರು ತಮ್ಮ ಜಮೀನಿನಲ್ಲಿ ಎತ್ತುಗಳನ್ನು ಮೇಯಿಸುತ್ತಿದ್ದ ವೇಳೆ, ದಿಢೀರ್ ಸುರಿದ ಮಳೆಗೆ ಹಾಗೂ ಸಿಡಿಲ ಹೊಡೆತಕ್ಕೆ ಮೇಯುತ್ತಿದ್ದ ಎತ್ತೊಂದು ಸ್ಥಳದಲ್ಲೆ ಅಸುನೀಗಿದೆ. ವಾರದ ಹಿಂದೆಯಷ್ಟೆ 70 ಸಾವಿರ ಕೊಟ್ಟು ಪಕ್ಕದ ಗ್ರಾಮದಿಂದ ಒಂದು ಜತೆ ಎತ್ತುಗಳನ್ನು ಖರೀದಿಸಿ ತಂದಿದ್ದರು. ಮತ್ತೊಂದು ಎತ್ತು ಪಾರಾಗಿದೆ. ಸುಮಾರು 35 ಸಾವಿರ ನಷ್ಟ ಸಂಭವಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.