ಮೈಸೂರು

ನಾಳೆ ವಿವಿಧೆಡೆ ಸ್ವರ್ಣ ಪ್ರಾಶನ

Published On :

ಮೈಸೂರು: ನಗರದ ವಿವಿಧ ಆಸ್ಪತ್ರೆಗಳು, ಸಂಘ ಸಂಸ್ಥೆಗಳಲ್ಲಿ ಸೆ.2 ರಂದು ಸ್ವರ್ಣ ಪ್ರಾಶನ ಅಭಿಯಾನ ಹಮ್ಮಿಕೊಳ್ಳಲಾಗಿದೆ. 16 ವರ್ಷದೊಳಗಿನ ಮಕ್ಕಳಿಗೆ ಸ್ವರ್ಣಪ್ರಾಶನ ಕಾರ್ಯಕ್ರಮವನ್ನು ಜೆಎಸ್‌ಎಸ್ ಮಹಾವಿದ್ಯಾಪೀಠದ ಅಂಗ ಸಂಸ್ಥೆಗಳಾದ ಆಯುರ್ವೇದ ಆಸ್ಪತ್ರೆ, ಪ್ರೌಢಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಪಬ್ಲಿಕ್ ಶಾಲೆಗಳಲ್ಲಿ (0821- 2548231), ಅಗ್ರಹಾರದ ಎಸ್.ಎನ್. ಪಂಡಿತ್ ಅಂಡ್ ಸನ್ಸ್ (ಮೊ.98863 50575), ತ್ಯಾಗರಾಜ ರಸ್ತೆಯ ಸೌಖ್ಯ ಹೆಲ್ತ್‌ಕೇರ್ ಮತ್ತು ಪಂಚಕರ್ಮ ಕೇಂದ್ರ (94491 46980), ಜಯಲಕ್ಷ್ಮೀಪುರಂನ ಜಿಲ್ಲಾ ಕನ್ನಡ ಸಾಹಿತ್ಯ ಭವನ (98867 28745)ದಲ್ಲಿ ಬೆಳಗ್ಗೆ 8 ರಿಂದ ಸಂಜೆ 5 ರವರೆಗೆ ಹಮ್ಮಿಕೊಳ್ಳಲಾಗಿದೆ.

ಬಾಲಕ ಸೇರಿ ನಾಲ್ವರ ನಾಪತ್ತೆ
ಮೈಸೂರು:
ಪ್ರತ್ಯೇಕ ಪ್ರಕರಣದಲ್ಲಿ ಬಾಲಕ ಸೇರಿ ನಾಲ್ವರು ನಾಪತ್ತೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ. ಮಹರ್ಷಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಡಿ.ಪಿ. ಸೃಜನ್ ಮನೆಯಿಂದ ಹೊರ ಹೋದವನು ಕಾಣೆಯಾಗಿದ್ದಾನೆ. 4.4 ಅಡಿ ಎತ್ತರ, ಬಿಳಿ ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲು ಮುಖ ಇರುವ ಈತ ಕನ್ನಡ ಮತ್ತು ಇಂಗ್ಲಿಷ್ ಮಾತನಾಡುತ್ತಾನೆ. ಸಾಲ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ. 52 ವರ್ಷದ ಬಿ. ಪ್ರಕಾಶ್ 5 ಅಡಿ ಎತ್ತರ, ಗೋಧಿ ಮೈಬಣ್ಣ, ದೃಢಕಾಯ ಶರೀರ, ದುಂಡು ಮುಖ ಇರುವ ಪ್ರಕಾಶ ಕನ್ನಡ ಮಾತನಾಡುತ್ತಾರೆ. ಎನ್ ಸೌಮ್ಯಾ ಎಂಬ ಯುವತಿ ನಾಪತ್ತೆಯಾಗಿದ್ದಾರೆ. 5.5 ಅಡಿ ಎತ್ತರ, ಬಿಳಿ ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲುಮುಖ ಇದ್ದಾಳೆ. ಇವರ ಬಗ್ಗೆ ಮಾಹಿತಿ ಲಭ್ಯವಾದಲ್ಲಿ ವಿದ್ಯಾರಣ್ಯಪುರಂ ಪೊಲೀಸ್ ಠಾಣೆ ದೂ. 2418122, 2418322  ಸಂಪರ್ಕಿಸಬಹುದು. ಮತ್ತೊಂದು ಪ್ರಕರಣದಲ್ಲಿ ಮನೆಯಿಂದ ಹೊರ ಹೋದ ಯುವಕನೊಬ್ಬ ನಾಪತ್ತೆಯಾಗಿದ್ದಾರೆ. ಎಸ್.ಆರ್. ಸುದರ್ಶನ್ 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು. ದೂ. 2418323 ಸಂಪರ್ಕಿಸಿ.

ಪುರಸಭಾ ಉಪಾಧ್ಯಕ್ಷರಾಗಿ ರಾಜು ಆಯ್ಕೆಗೆ ಮನವಿ
ನಂಜನಗೂಡು:
ಇಲ್ಲಿನ ಪುರಸಭೆ ಸದಸ್ಯ ಡಿ.ಆರ್. ರಾಜು ಅವರನ್ನು ಪುರಸಭೆ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುವಂತೆ ಡಾ.ಬಿ.ಆರ್. ಅಂಬೇಡ್ಕರ್ ಆದಿದ್ರಾವಿಡ (ಪೌರಕಾರ್ಮಿಕ) ಯುವಕರ ಅಭಿವೃದ್ಧಿ ಮಹಾಸಂಘ ಒತ್ತಾಯಿಸಿದೆ. ಆದಿ ದ್ರಾವಿಡ ಸಮಾಜದ ರಾಜ್ಯಾಧ್ಯಕ್ಷ ಡಿ.ಆರ್. ರಾಜು ಅವರು ಮೂರನೇ ಬಾರಿಗೆ ಪುರಸಭೆಗೆ ಆಯ್ಕೆಯಾಗಿದ್ದಾರೆ. ಕಳೆದ 20 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದು, ಸರ್ವೋತೋಮುಖ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಆದ್ದರಿಂದ ಇವರನ್ನು ಪುರಸಭೆ ಉಪಾಧ್ಯಕ್ಷರಾಗಿ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಎನ್. ರಾಜು, ಜಿಲ್ಲಾಧ್ಯಕ್ಷ ಪಿ. ಮಂಜುನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಆರ್. ರಮೇಶ್, ನಗರಾಧ್ಯಕ್ಷ ಕೆ. ಆರ್ಮುಗಂ, ನಗರ ಪ್ರಧಾನ ಕಾರ್ಯದರ್ಶಿ ಬಿ. ಮಂಜುನಾಥ್, ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ. ಸೋಮ ಮನವಿ ಮಾಡಿದ್ದಾರೆ.

ಅಪರಿಚಿತ ಮೃತದೇಹ ಪತ್ತೆ
ಕ.ಪ್ರ.ವಾರ್ತೆ ಮೈಸೂರು ಆ. 31

ಕೊಳೆತ ಸ್ಥಿತಿಯಲ್ಲಿರುವ ಅಪರಿಚಿತ ವ್ಯಕ್ತಿಯ ಮೃತದೇಹವು ಕೆಆರ್‌ಎಸ್ ಹಿನ್ನೀರಿನಲ್ಲಿ ದೊರೆತಿದೆ. ತಾಲೂಕಿನ ಯಾತೆಗೌಡನಹಳ್ಳಿಯ ಸಮೀಪ ಸುಮಾರು 30 ರಿಂದ 35 ವರ್ಷ ವಯಸ್ಸಿನ ಈ ಅಪರಿಚಿತ ವ್ಯಕ್ತಿಯ ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತ ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಂಡಿದ್ದು, ನೀರಿನಲ್ಲಿ ತೇಲಿ ಬಂದಿರಬಹುದು ಎಂದು ಶಂಕಿಸಲಾಗಿದೆ. ಮೃತರು ಸಿಮೆಂಟ್ ಬಣ್ಣದ ಪ್ಯಾಂಟು, ನೀಲಿ ಬಣ್ಣದ ಶರ್ಟ್, ಕೆಂಪು ಬಣ್ಣದ ನಿಕ್ಕರ್, ಉಡದಾರ ಧರಿಸಿದ್ದಾರೆ. ಈ ಸಂಬಂಧ ಇಲವಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಕ್ಷಿಣೆ: ದೇಗುಲದ ನೌಕರನ ಬಂಧನ
ನಂಜನಗೂಡು:
ವರದಕ್ಷಿಣೆ ಕಿರುಕುಳದ ಆರೋಪದ ಹಿನ್ನೆಲೆಯಲ್ಲಿ ಶ್ರೀಕಂಠೇಶ್ವರ ಸ್ವಾಮಿ ದೇಗುಲದ ಕಾವಲುಗಾರನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪಟ್ಟಣದ ತಮ್ಮಡಗೇರಿ ಬೀದಿಯ ನಿವಾಸಿ ಉಮಾ ಮಹೇಶ್ ಬಂಧಿತ ವ್ಯಕ್ತಿ. ಈತನಿಗೆ ಮಂಡ್ಯ ಜಿಲ್ಲೆಯ ಹಳೇಬೂದನೂರು ಗ್ರಾಮದ ಎಚ್.ಲಕ್ಷ್ಮಿ ಎಂಬವರ ಜತೆ 6 ತಿಂಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಮದುವೆ ವೇಳೆ 5 ಲಕ್ಷ ನಗದು, 7 ಗ್ರಾಂ ಚಿನ್ನದ ಉಂಗುರ, 500 ಗ್ರಾಂ ಬೆಳ್ಳಿ ಪಧಾರ್ಥವನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಇದಕ್ಕೆ ತೃಪ್ತರಾಗದ ಉಮಾ ಮಹೇಶ್ ಮನೆಯವರು ಮತ್ತೆ 3 ಲಕ್ಷ ವರದಕ್ಷಿಣೆ ತರುವಂತೆ ಪತಿ, ಅತ್ತೆ ಪಾರ್ವತಮ್ಮ, ಮಾವ ಶ್ರೀಕಂಠಯ್ಯ ಕಿರುಕುಳ ನೀಡುತ್ತಿದ್ದರು ಎಂದು ಪಟ್ಟಣ ಠಾಣೆಯಲ್ಲಿ ಲಕ್ಷ್ಮೀ ದೂರು ದಾಖಲಿಸಿದ್ದಾರೆ. ಈ ದೂರಿನ ಅನ್ವಯ ಉಮಾಮಹೇಶ್‌ನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.