ಟಿ. ನರಸೀಪುರದಲ್ಲಿ ಸಾಧುಸಂತರ ಭವ್ಯ ಮೆರವಣಿಗೆ
ಟಿ. ನರಸೀಪುರ: ದಕ್ಷಿಣ ಭಾರತದ ಕುಂಭಮೇಳದ ಹಿನ್ನೆಲೆಯಲ್ಲಿ ಪಟ್ಟಣದ ರಾಜಬೀದಿಗಳಲ್ಲಿ ಭಾನುವಾರ ಸಾಂಸ್ಕೃತಿಕ ಉತ್ಸವ ಹಾಗೂ ಸಾಧು ಸಂತರ ಭವ್ಯ ಮೆರವಣಿಗೆ ನಡೆಯಿತು.
ತಿರುಮಕೂಡಲು ಶ್ರೀಕ್ಷೇತ್ರದ ತ್ರಿವೇಣಿ ಸಂಗಮದಲ್ಲಿ ಕುಂಭಮೇಳದ 2ನೇ ದಿನವನ್ನು ಯಶಸ್ವಿಯಾಗಿ ಪೂರೈಸಿದ್ದು, ಸಂಜೆ ನಡೆದ ಸಾಂಸ್ಕೃತಿಕ ಉತ್ಸವ ಹಾಗೂ ಸಾಧು ಸಂತರ ಭವ್ಯ ಮೆರವಣಿಗೆ ಕಂಡು ಪುಳಕಿದರಾದ ಸಹಸ್ರಾರು ಜನರು ಕಣ್ತುಂಬಿಕೊಂಡರು. ಮೆರವಣಿಗೆ ಮಾರ್ಗದಲ್ಲಿ ಕೊಂಬು, ಕಹಳೆಯ ಮೋರ್ಗರೆತ, ಕಂಸಾಳೆ ಹಾಗೂ ಮಂಗಳವಾದ್ಯಗಳು ಮೇಳೈಸಿದವು. ಪಟ್ಟಣದ ಲಿಂಕ್ ರಸ್ತೆಯಲ್ಲಿ ಕಂಡುಬಂದ ಮೆರವಣಿಗೆ ಮಿನಿ ದಸರಾದ ವೈಭವವನ್ನು ನೆನಪು ಮಾಡುವಂತಿತ್ತು. ತ್ರಿವೇಣಿ ಸಂಗಮದ ದಡದಲ್ಲಿರುವ ಶ್ರೀ ಗುಂಜಾನರಸಿಂಹಸ್ವಾಮಿಯ ದೇವಾಲಯದಲ್ಲಿ ಸುತ್ತೂರು ಮಠದ ಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮೀಜಿ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನದಂತೆ ನಂದಿಕಂಬಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ವಿಶ್ವಕರ್ಮರ ಬೀದಿ ಸೇರಿದಂತೆ ಲಿಂಕ್ ರಸ್ತೆ, ಬಸ್ ನಿಲ್ದಾಣದ ವೃತ್ತ ಹಾಗೂ ಮೈಸೂರು ಮುಖ್ಯ ರಸ್ತೆಯ ಮೂಲಕ ತ್ರಿವೇಣಿ ಸಂಗಮಕ್ಕೆ ಉತ್ಸವ ತಲುಪಿತು. ಮಲೇ ಮಹದೇಶ್ವರ, ವೆಂಕಟೇಶ್ವರ, ಈಶ್ವರ, ಚುಂಚನಗಿರಿಯ ಕಾಲಭೈರವೇಶ್ವರ, ಸುತ್ತೂರಿನ ಶಿವರಾತ್ರೀಶ್ವರ ಉತ್ಸವದ ಮೂರ್ತಿಗಳಾಗಿ ಮೆರವಣಿಯಲ್ಲಿ ಮುಂದೆ ಸಾಗಿದರೆ, ಮಂಗಳವಾದ್ಯ, ವೀರಗಾಸೆ, ಭಜನಾ ತಂಡಗಳು, ಕೊಂಬು-ಕಹಳೆ, ಕಳಶ ಹೊತ್ತ ಸುಮಂಗಲಿಯರು, ಕಂಸಾಳೆ, ಪೂಜಾ ಕುಣಿತ, ವೀರಭದ್ರ ಕುಣಿತ, ಗಾರುಡಿ ಕುಣಿತ, ಕೋಲಾಟ, ವೀರಮಕ್ಕಳ ಕುಣಿತ, ತಮಟೆ, ಡೊಳ್ಳು ಕುಣಿತ, ಸುತ್ತೂರಿನ ಜೆಎಸ್ಎಸ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಹಿಮಾಚಲ್ ಪ್ರದೇಶದ ವಿದ್ಯಾರ್ಥಿಗಳ ಬ್ಯಾಂಡ್ಸೆಟ್ ಮನರಂಜನೆಯನ್ನು ನೋಡುಗರಿಗೆ ನೀಡಿದವು.
ಸಂಚಾರಿ ವಾಹನದ ವೇದಿಕೆಯನ್ನೇರಿದ್ದ ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ, ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕಾಗಿನೆಲೆ ಪೀಠದ ಶಿವಾನಂದಪುರಿ ಸ್ವಾಮೀಜಿ, ಭಾಷ್ಯಂ, ಅನೇಕ ಹರಗುರು ಚರಮೂರ್ತಿಗಳು ಪುರದ ಜನರನ್ನು ಆಶೀರ್ವದಿಸಿದರು.
ಪೇಜಾವರ ಶ್ರೀಗಳ ಆಗಮನ: ತಿರುಮಕೂಡಲು ಕ್ಷೇತ್ರದ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಒಂಬತ್ತನೇ ಮಹಾಕುಂಭಮೇಳದ ಧಾರ್ಮಿಕ ಉತ್ಸವದಲ್ಲಿ ಉಡುಪಿಯ ಪೇಜಾವರ ವಿಶ್ವೇಶ್ವತೀರ್ಥ ಶ್ರೀಪಾದಂಗಳವರು ಭಾನುವಾರ ಭಾಗವಹಿಸಿದ್ದರು. ಶ್ರೀ ವ್ಯಾಸರಾಜ ಮಠ ಸೇರಿದಂತೆ ಅಗಸ್ತೇಶ್ವರ ಸನ್ನಿಧಿಗೆ ತೆರಳಿ ಪೂಜೆ ಸಲ್ಲಿಸಿದ ನಂತರ ತ್ರಿವೇಣಿ ಸಂಗಮಕ್ಕೆ ತೆರಳಿ ಕುಂಭಮೇಳ ಉತ್ಸವ ವೀಕ್ಷಿಸಿದರು. ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ, ಶಾಖಾಮಠದ ಸೋಮನಾಥ ಸ್ವಾಮೀಜಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

