ಹುಣಸೂರು ಆರ್ಟಿಒ ಕಚೇರಿಗೆ ಸ್ವಂತ ಜಾಗವಿಲ್ಲ!
ಕ.ಪ್ರ.ವಾರ್ತೆ , ಹುಣಸೂರು , ಜು. 1
ಇಲ್ಲಿನ ಹೊರ ಮತ್ತು ಒಳ ವಲಯದಲ್ಲಿ ಸಾಕಷ್ಟು ಸರ್ಕಾರಿ ಜಮೀನಿದ್ದರೂ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಸ್ವಂತ ಜಾಗವಿಲ್ಲದೆ ಅತಂತ್ರ ಸ್ಥಿತಿಯಲ್ಲಿದೆ.
ಆರ್ಟಿಒ ಕಚೇರಿಗೆ ಜಾಗ ಮಂಜೂರು ಮಾಡಿಸುವಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಪ್ರತಿನಿಧಿಸಿದ್ದ ಹುಣಸೂರು ಕ್ಷೇತ್ರದಲ್ಲಿ ಸರ್ಕಾರಿ ಜಾಗವಿದ್ದರೂ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಗೆ ಸ್ವಂತ ಜಾಗ ಕೊಡಿಸಲು ಆಗಿಲ್ಲ. ಇದರಿಂದ ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಹುಣಸೂರು, ಕೆ.ಆರ್. ನಗರ ಹಾಗೂ ಪಿರಿಯಾಪಟ್ಟಣ, ಎಚ್.ಡಿ. ಕೋಟೆ ತಾಲೂಕು ಕೇಂದ್ರಗಳನ್ನೊಳಗೊಂಡ ಹುಣಸೂರು ಉಪ ವಿಭಾಗ ಕೇಂದ್ರದಲ್ಲಿ 2004ರಲ್ಲಿ ಪ್ರಾರಂಭವಾದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಇಂದಿನ ತನಕ ಸ್ವಂತ ಜಾಗವಿಲ್ಲದೆ, ಹಾರಂಗಿ ಇಲಾಖೆಗೆ ಸೇರಿದ್ದ ಹಳೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲ ವಿಭಾಗಗಳ ಕಡತ ಇಟ್ಟುಕೊಂಡು ಒಂದಡೆ ಕೊಠಡಿಗಳ ಕೊರತೆಯಾದರೆ, ಇನ್ನೊಂದೆಡೆ ಕೆಲವು ಕೊಠಡಿಗಳು ಮಳೆಗಾಲದಲ್ಲಿ ಸೋರುತ್ತಿವೆ. ಇತ್ತೀಚೆಗೆ ಬಿದ್ದ ಮಳೆಗೆ ವಿದ್ಯುತ್ ವೈರ್ ಮತ್ತು ಕಂಪ್ಯೂಟರ್ಗಳು ಸುಟ್ಟು ಹೋಗಿವೆ.
ಇಲ್ಲಿನ ಸಾರಿಗೆ ಕಚೇರಿಗೆ ಸರ್ಕಾರ 2012- 13ನೇ ಸಾಲಿನಲ್ಲಿ 12.80 ಕೋಟಿ ತೆರಿಗೆ ನಿಗದಿ ಮಾಡಿತ್ತು. ಆದರೆ, 14.73 ಕೋಟಿ ರಾಜಸ್ವ ವಸೂಲಾತಿ ಮಾಡುವ ಮೂಲಕ 1.93 ಕೋಟಿ ಹೆಚ್ಚುವರಿಯಾಗಿ ವಸೂಲಿ ಮಾಡಿ ಶೇ. 115.10 ಗುರಿ ಸಾಧಿಸಲಾಗಿದೆ. ಮೇ ತಿಂಗಳಿನಲ್ಲಿ 293.7 ಲಕ್ಷ ವಸೂಲಿ ಮಾಡಿ ಶೇ. 112 ಗುರಿ ಸಾಧಿಸಿದ್ದಾರೆ.
ಸಾರಿಗೆ ಕಚೇರಿಗೆ ಬರುವ ಸಾರ್ವಜನಿಕರಿಗೆ ಮೂಲ ಸೌಲಭ್ಯಗಳಿಲ್ಲ. ಅಧಿಕಾರಿಗಳಿಗೆ ಸಮರ್ಪಕವಾದ ಕೊಠಡಿಗಳಿಲ್ಲ, ವಾಹನ ನಿಲ್ಲಿಸಲು ಮೈದಾನವಿಲ್ಲದೆ ಬೈಪಾಸ್ ರಸ್ತೆ ಬದಿಯಲ್ಲಿ ಕೆಲವೊಮ್ಮೆ ಹೆದ್ದಾರಿಯಲ್ಲಿ ಸಂಚಾರಕ್ಕೆ ತೊಂದರೆಯಾಗಿರುವುದು ಉಂಟು. ಡಿಎಲ್, ಎಲ್ಎಲ್ಆರ್ ಮತ್ತು ಸಿಸಿ ವರ್ಗಾವಣೆ, ಹಳೆ ವಾಹನಗಳ ಎಫ್ಸಿ ಮತ್ತು ಹೊಸ ವಾಹನಗಳ ನೋಂದಣಿಗೆ ತಪಾಸಣೆ ಮಾಡಲು, ಚಾಲನಾ ತರಬೇತಿ ನೀಡಲೂ ಸ್ಥಳಾವಕಾಶದ ಕೊರತೆ ಇದೆ.
ಸಾರಿಗೆ ಕಚೇರಿ ಪ್ರಾರಂಭವಾಗಿ 10 ವರ್ಷವಾಗಿದೆ. ಇಲ್ಲಿನ ಹೊರ ಮತ್ತು ಒಳ ಪ್ರದೇಶದ ಬೈಪಾಸ್ ರಸ್ತೆಯಲ್ಲಿ ಕನಿಷ್ಠ ಎರಡು ಎಕರೆ ಜಮೀನನ್ನು ನೀಡುವಂತೆ ಕಂದಾಯ ಇಲಾಖೆಗೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಸಾಕಷ್ಟು ಭಾರಿ ಮನವಿ ನೀಡಿ, ಭಗೀರಥ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ. ಈಗ ಹಾರಂಗಿ ಇಲಾಖೆಗೆ ಸೇರಿದ್ದ ಒಂದು ಎಕರೆ ಪ್ರದೇಶವನ್ನು ಮಂಜೂರಾತಿಗಾಗಿ ಪ್ರಸ್ತಾವನೆ ಸಲ್ಲಿಸಿ ಮನವಿ ಮಾಡಿದ್ದೇವೆ. ಏನಾಗುತ್ತೆ, ಕಾದು ನೋಡಣ. ಆದರೆ, ಇರುವ ಬಾಡಿಗೆ ಕಟ್ಟಡದಲ್ಲಿ ಸಾರ್ವಜನಿಕರಿಗೆ ಯಾವುದೆ ಸಮಸ್ಯೆಗಳು ತಲೆದೋರದಂತೆ ಸ್ಪಂದಿಸುತ್ತಿದ್ದೇವೆ ಎನ್ನುತ್ತಾರೆ. ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಡಿಸೋಜಾ.
ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಗೆ ಜಾಗದ ಮಂಜೂರಾತಿ ವಿಚಾರ ತಮಗೆ ಗೊತ್ತೆ ಇಲ್ಲ, ಪ್ರಸ್ತಾವನೆ ಸಲ್ಲಿಸಿದ್ದರೆ, ಪಟ್ಟಣದಲ್ಲಿರುವ ಸರ್ಕಾರಿ ಜಾಗವನ್ನು ಪತ್ತೆ ಮಾಡಿ ಮಂಜೂರಾತಿ ಮಾಡಲು ಹಿರಿಯ ಅಧಿಕಾರಿಗಳ ಗಮನ ಸೆಳೆಯಲಾಗುತ್ತದೆ ಎಂದು ತಹಸೀಲ್ದಾರ್ ಶಿವಾನಂದಮೂರ್ತಿ ಮಾಹಿತಿ ನೀಡಿದರು.
ಸಾರಿಗೆ ಕಚೇರಿ ಜಾಗದ ವಿಚಾರವಾಗಿ ತಮಗೆ ಮಾಹಿತಿ ಇದೆ. ಸಾರಿಗೆ ಇಲಾಖೆಗೆ ಅನುಕೂಲವಾಗುವ ಕಡೆ ಅಧಿಕಾರಿಗಳ ಜೊತೆಯಲ್ಲಿ ಚರ್ಚಿಸಿ ಸರ್ಕಾರಿ ಜಾಗವನ್ನು ಪತ್ತೆ ಮಾಡಿ, ಶೀಘ್ರವೆ ಕ್ರಮ ವಹಿಸಿ ಮಂಜೂರಾತಿ ಮಾಡಿಸುವೆ ಎನ್ನುತ್ತಾರೆ ಹುಣಸೂರು ಉಪ ವಿಭಾಗಾಧಿಕಾರಿ ವಿನೂತ ಪ್ರಿಯಾ.
ತಾವು ಕಳೆದ ನಾಲ್ಕು ವರ್ಷಗಳಿಂದ ಸತತ ಪ್ರಯತ್ನ ಮಾಡಿ ಅಧಿಕಾರಿಗಳಿಗೆ ಮತ್ತು ಸಚಿವರಿಗೆ ಮನವಿ ಮಾಡಿದ್ದರೂ ಯಾವುದೆ ಪ್ರಯೋಜನವಾಗಿಲ್ಲ. ಈಗ ತಮ್ಮದೆ ಸರ್ಕಾರ ಬಂದಿದೆ. ಕಂದಾಯ ಸಚಿವರ ಜೊತೆ ಚರ್ಚಿಸಿ, ಅಧಿಕಾರಿಗಳ ಮೂಲಕ ಸರ್ಕಾರದ ಜಾಗ ಪತ್ತೆ ಮಾಡಿ, ಶೀಘ್ರವೆ ಮಂಜೂರಾತಿ ಮಾಡಿಸುವುದಾಗಿ ಶಾಸಕ ಎಚ್.ಪಿ. ಮಂಜುನಾಥ್ ಭರವಸೆ ನೀಡಿದರು.
ಹುಣಸೂರು ಸಹಾಯಕ ಸಾರಿಗೆ ಕಚೇರಿ ಉಪವಿಭಾಗ ಕೇಂದ್ರವಾಗಿದ್ದು, ಹೊರ ಮತ್ತು ಒಳ ಪ್ರದೇಶದಲ್ಲಿ ಸಾಕಷ್ಟು ಸರ್ಕಾರಿ ಜಮೀನಿದ್ದರೂ ಜನಪ್ರತಿನಿಧಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಂಜೂರಾತಿ ಮಾಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸತ್ಯ ಎಂಎಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಆರೋಪಿಸಿದ್ದಾರೆ.
-ಧರ್ಮಾಪುರ ನಾರಾಯಣ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

