ಮೈಸೂರು

ಕಬಿನಿಗೆ ಬಾಗಿನ ಅರ್ಪಿಸಲು ಸಿದ್ದರಾಮಯ್ಯ ಸಿದ್ಧ

Published On :

-ಅಂಶಿ ಪ್ರಸನ್ನಕುಮಾರ್
ಕ.ಪ್ರ.ವಾರ್ತೆ ಮೈಸೂರು ಜು. 3

ಹೆಗ್ಗಡದೇವನಕೋಟೆ ತಾಲೂಕು ಬೀಚನಹಳ್ಳಿ ಬಳಿ ಇರುವ ಕಬಿನಿ ಜಲಾಶಯ ಭರ್ತಿಯಾದಾಗ ಬಾಗಿನ ಅರ್ಪಿಸುವ ಸಂಪ್ರದಾಯವನ್ನು ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಆರಂಭಿಸುತ್ತಿದ್ದಾರೆ.
ಜು.6 ರಂದು ಅವರು ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದು, ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್, ಎಚ್.ಡಿ. ಕೋಟೆ ಶಾಸಕ ಎಸ್. ಚಿಕ್ಕಮಾದು ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸುವರು.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರದಲ್ಲಿ ಕೆಆರ್‌ಎಸ್ ಜಲಾಶಯ ಭರ್ತಿಯಾದಾಗ ಕಾವೇರಿ ಮಾತೆಗೆ ಬಾಗಿನ ಅರ್ಪಿಸುವ ದಿನದಂದೇ ಕಬಿನಿ ಜಲಾಶಯಕ್ಕೂ ಬಾಗಿನ ಅರ್ಪಿಸುವ ಸಂಪ್ರದಾಯವನ್ನು 2004 ರಲ್ಲಿ ಧರಂಸಿಂಗ್, ಸಿದ್ದರಾಮಯ್ಯ ಅವರು ಕ್ರಮವಾಗಿ ಸಿಎಂ- ಡಿಸಿಎಂ ಆಗಿದ್ದಾಗ ಆರಂಭಿಸಲಾಗಿತ್ತು.
ಕೆಆರ್‌ಎಸ್ ಜಲಾಶಯ ಭರ್ತಿಯಾದಾಗ ಕಾವೇರಿ ಮಾತೆಗೆ ಬಾಗಿನ ಅರ್ಪಿಸುವ ಸಂಪ್ರದಾಯವನ್ನು ಆರ್. ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದಾಗ ಆರಂಭಿಸಿದ್ದರು. ಇದು ಅಂದಿನಿಂದಲೂ ಮುಂದುವರಿದಿದೆ.
ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಬಾಗಿನ ಅರ್ಪಿಸುವ ಸಂಪ್ರದಾಯ ಇರಲಿಲ್ಲ. 1999 ರಿಂದ 2004ರ ಅವಧಿಯಲ್ಲಿ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಭೀಕರ ಬರಗಾಲ. ಅವರಿಗೆ ಮೊದಲೆರಡು ವರ್ಷ ಮಾತ್ರ ಕಾವೇರಿಗೆ ಬಾಗಿನ ಅರ್ಪಿಸುವ ಅವಕಾಶ ಸಿಕ್ಕಿತ್ತು. ನಂತರದ ಎರಡು ವರ್ಷಗಳು ಈ ಸೌಭಾಗ್ಯವೇ ಸಿಗಲಿಲ್ಲ.
ಆದರೆ  2004 ರಲ್ಲಿ ವಿಧಾನಸಭಾ ಚುನಾವಣೆ ನಡೆದು, ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅಧಿಕಾರಕ್ಕೆ ಬಂದಾಗ ಮಳೆಯೋ ಮಳೆ. ರಾಜ್ಯದ ಜಲಾಶಯಗಳೆಲ್ಲಾ ಉಕ್ಕಿ ಹರಿದವು. ಕಬಿನಿ ಜಲಾಶಯ ಭರ್ತಿಯಾಗಿ, ತಮಿಳುನಾಡಿಗೆ ನೀರು ಹರಿಯತೊಡಗಿದ್ದರಿಂದ ಕಾವೇರಿ ಸಮಸ್ಯೆ ತಣ್ಣಗಾಯಿತು. ಇದರಿಂದ ಸಂತೃಪ್ತರಾದ ಅಂದಿನ ಮುಖ್ಯಮಂತ್ರಿ ಎನ್. ಧರಂಸಿಂಗ್ ಅವರು ಕಬಿನಿ ಜಲಾಶಯಕ್ಕೂ ಬಾಗಿನ ಅರ್ಪಿಸುವ ಸಂಪ್ರದಾಯ ಆರಂಭಿಸಿದ್ದರು.
ಎಚ್ಡಿಕೆಯಿಂದ ಮುಂದುವರಿಕೆ: ನಂತರ ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರೂ ಈ ಸಂಪ್ರದಾಯವನ್ನು ಮುಂದುವರಿಸಿದ್ದರು. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಎರಡು ವರ್ಷ ಕೆಆರ್‌ಎಸ್‌ನಲ್ಲಿ ಕಾವೇರಿ ಮಾತೆಗೆ ಬಾಗಿನ ಅರ್ಪಿಸುವ ದಿನದಂದೇ ಕಬಿನಿ ಜಲಾಶಯಕ್ಕೂ ಬಾಗಿನ ಅರ್ಪಿಸಿದ್ದರು. ಆದರೆ ಮೂರನೇ ವರ್ಷ ಈ ಸಂಪ್ರದಾಯಕ್ಕೆ ತಿಲಾಂಜಲಿ ನೀಡಿದರು. ಯಡಿಯೂರಪ್ಪ ನಂತರ ಬಿಜೆಪಿ ಸರ್ಕಾರದ 2ನೇ ಮುಖ್ಯಮಂತ್ರಿಯಾದ ಡಿ.ವಿ. ಸದಾನಂದಗೌಡರು 2011ರ ಆ.17 ರಂದು ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದರೇ ಹೊರತು, ಕಬಿನಿಗೆ ಅರ್ಪಿಸಲಿಲ್ಲ. 2012ರಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗಲೂ, ವರುಣನ ಅವಕೃಪೆಯಿಂದ ಕಬಿನಿಗಿರಲಿ, ಕೆಆರ್‌ಎಸ್‌ಗೂ ಬಾಗಿನ ಅರ್ಪಿಸುವ ಅವಕಾಶ ಸಿಗಲಿಲ್ಲ.
ಸಂಕಟ ಬಂದಾಗ: ಕಬಿನಿ ಜಲಾಶಯಕ್ಕೆ ರಾಜ್ಯದಲ್ಲೇ ಮೊದಲು ಭರ್ತಿಯಾಗುವ ಹಾಗೂ ವರ್ಷಕ್ಕೆ ಎರಡು ಬಾರಿ ಭರ್ತಿಯಾಗುವ ಜಲಾಶಯ ಎಂಬ ಹೆಗ್ಗಳಿಕೆ ಇದೆ. ಕೇರಳದ ವಯನಾಡು ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುವುದು ಇದಕ್ಕೆ ಕಾರಣ. ಇಲ್ಲಿ ಕೇವಲ 84 ಅಡಿ ಮಾತ್ರ ನೀರು ಸಂಗ್ರಹಿಸಲು ಸಾಧ್ಯ. ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲಾಗುತ್ತದೆ. ಈ ರೀತಿ ಬಿಡುಗಡೆಯಾದ ನೀರು ಮಾರ್ಗ ಮಧ್ಯೆ ಬರುವ ನಂಜನಗೂಡು, ಗುಂಡ್ಲುಪೇಟೆ, ಚಾಮರಾಜನಗರ, ಮೈಸೂರು, ಟಿ. ನರಸೀಪುರ, ಕೊಳ್ಳೇಗಾಲ, ತೊರೆಕಾಡನಹಳ್ಳಿ ಬಳಿಯಿಂದ ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರಿನ ಯೋಜನೆಗೆ ಬಳಕೆಯಾಗುತ್ತದೆ. ಉಳಿದ ಹೆಚ್ಚುವರಿ ನೀರು ತಮಿಳುನಾಡಿಗೆ ಹರಿದು ಹೋಗುತ್ತದೆ. ಕೆಆರ್‌ಎಸ್ ಜಲಾಶಯ ಭರ್ತಿಯಾಗುವ ತನಕ ಅಲ್ಲಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವುದಿಲ್ಲ. ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳು ಭರ್ತಿಯಾಗಿ, ಅಲ್ಲಿನ ಹೆಚ್ಚುವರಿ ನೀರನ್ನು ಕೆಆರ್‌ಎಸ್ ಜಲಾಶಯಕ್ಕೆ ಹರಿಸಲಾಗುತ್ತದೆ. ಹೀಗಾಗಿ ಕೆಆರ್‌ಎಸ್ ಗರಿಷ್ಠ ಮಟ್ಟ ಅಂದರೆ 124.80 ಅಡಿ ತಲುಪುವ ತನಕ ಕಾವೇರಿ ನ್ಯಾಯಾಧಿಕರಣದ ತೀರ್ಪಿನಂತೆ ತಮಿಳುನಾಡಿಗೆ ನೀರನ್ನು ಪೂರೈಸುವುದು ಕಬಿನಿ ಜಲಾಶಯ.
ಈಗ ಜಿಲ್ಲೆಯವರೇ ಆದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾರೆ. ರಾಜ್ಯಾದ್ಯಂತ ಉತ್ತಮವಾಗಿ ಮಳೆಯಾಗುತ್ತಿದ್ದು, ಎಲ್ಲ ಜಲಾಶಯಗಳು ಭರ್ತಿಯಾಗುವ ಮುನ್ಸೂಚನೆ ಇದೆ. ಕಬಿನಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಇದೇ ರೀತಿ ಒಳಹರಿವು ಇದ್ದಲ್ಲಿ ಈ ಬಾರಿಯೂ ತಮಿಳುನಾಡಿಗೆ ಸಾಕಷ್ಟು ನೀರು ಹರಿದು, ಕಾವೇರಿ ವಿವಾದ ತಣ್ಣಗಾಗಬಹುದು. ಈ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದ ಮಹತ್ವ ಅರಿತು, ಸಿದ್ದರಾಮಯ್ಯ ಜಲಾಶಯಕ್ಕೆ ಬಾಗಿನ ಅರ್ಪಿಸುವ ಸಂಪ್ರದಾಯವನ್ನು ಮೂರು ವರ್ಷಗಳ ನಂತರ ಪುನಾರಂಭಿಸುತ್ತಿದ್ದಾರೆ.
ಈಡೇರದ ಭರವಸೆ: ಕಬಿನಿ ಜಲಾಶಯವನ್ನು ತಮಿಳುನಾಡಿಗೆ ನೀರು ಪೂರೈಸುವ ತೊಟ್ಟಿಯಂತೆ ಬಳಸಿಕೊಳ್ಳಲಾಗುತ್ತಿದೆಯೇ ಹೊರತು ಕೆಆರ್‌ಎಸ್ ಬೃಂದಾವನ ಮಾದರಿಯಲ್ಲಿ ಅದನ್ನು ಅಭಿವೃದ್ಧಿಪಡಿಸುವ ಸರ್ಕಾರದ ಘೋಷಣೆ ಪೊಳ್ಳು ಭರವಸೆಯಾಗಿಯೇ ಉಳಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.