ಮೈಸೂರು

ಜೋಡಿ ರಸ್ತೆ ವಿಸ್ತರಣೆಗೆ ಮುನ್ನ ಪರಿಹಾರ ಘೋಷಿಸಿ

Published On :

ಕ.ಪ್ರ.ವಾರ್ತೆ ಮೈಸೂರು ಜು. 4
ನಗರದ ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯ ಅಜೀಜ್ ಸೇಠ್ ಜೋಡಿ ರಸ್ತೆ ವಿಸ್ತರಣೆ ವೇಳೆ ತೆರವುಗೊಳಿಸುವ ನಿವಾಸಿಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಒತ್ತಾಯಿಸಿದರು.
ಕಳೆದ ಹಲವು ವರ್ಷಗಳಿಂದ ರಸ್ತೆ ವಿಸ್ತರಣೆ ಕೆಲಸವನ್ನು ಬಾಕಿ ಉಳಿಸಿದ್ದಾರೆ. ಅಧಿಕಾರಿಗಳಿಗೆ ಹಣದ ಅಗತ್ಯವಿದ್ದಾಗ ಆ ಯೋಜನೆ ಜಾರಿಗೊಳಿಸಲು ಮುಂದಾಗುತ್ತಾರೆ. ಈಗ ಅಜೀಜ್ ಸೇಠ್ ರಸ್ತೆ ವಿಸ್ತರಣೆಗೆ ಮುಂದಾಗಿದ್ದು, ರಸ್ತೆ ಬದಿಯಲ್ಲಿ ವಾಸವಿರುವ ನಿವಾಸಿಗಳನ್ನು ತೆರವುಗೊಳಿಸಲಾಗುತ್ತಿದೆ. ಆದರೆ, ಅವರಿಗೆ ಪರಿಹಾರ ನೀಡಿ ತೆರವುಗೊಳಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಈ ವ್ಯಾಪ್ತಿಯಲ್ಲಿ ಶಾಸಕ ತನ್ವೀರ್‌ಸೇಠ್ ಅವರಿಗೆ ಹೆಚ್ಚು ಮತ ಬಂದಿಲ್ಲ. ಅಲ್ಲದೆ, ಆ ಭಾಗದಲ್ಲಿ ವಿಧಾನಸಭಾ ಚುನಾವಣೆ ವೇಳೆ ತಮಗೆ ಮತ್ತು ಎಸ್‌ಡಿಪಿಐಗೆ ಹೆಚ್ಚು ಬೆಂಬಲ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ತೆರವುಗೊಳ್ಳುವ ನಿವಾಸಿಗಳಿಗೆ ಪರಿಹಾರ ಘೋಷಣೆ ಮಾಡದಿರುವುದು ಸರಿಯಲ್ಲ ಎಂದರು.
ಶಾಸಕ ತನ್ವೀರ್‌ಸೇಠ್ ಅವರ ಕೆಲ ಬೆಂಬಲಿಗರು ಅಧಿಕಾರಿಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುತ್ತಿದ್ದಾರೆ. ಓರ್ವ ಮಧ್ಯವರ್ತಿ ತನ್ವೀರ್‌ಸೇಠ್ ಅವರ ಹೆಸರು ಬಳಿಸಿಕೊಂಡು ಕೋಟ್ಯಂತರ ರು. ಸಂಪಾದನೆ ಮಾಡಿದ್ದಾರೆ. ಇದಕ್ಕೆ ಶಾಸಕರು ಅವಕಾಶ ನೀಡಬಾರದು. ಚಾಮುಂಡಿ ಬೆಟ್ಟ ಸಮೀಪದ ಸರ್ವೇ ನಂ. 4ರಲ್ಲಿನ ಸರ್ಕಾರಿ ನಿವೇಶನವನ್ನು ಸರ್ಕಾರ ತನ್ನ ವಶಕ್ಕೆ ಪಡೆಯಬೇಕು. ಅಲ್ಲದೆ, ಈ ಹಿಂದಿನ ಜಿಲ್ಲಾಧಿಕಾರಿ ಹರ್ಷಗುಪ್ತ ಅವರು ಸರ್ವೇ ನಡೆಸಿರುವ 8 ಸಾವಿರ ಎಕರೆಗೂ ಹೆಚ್ಚು ಸರ್ಕಾರಿ ಜಮೀನನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ಅವರನ್ನು ಒತ್ತಾಯಿಸುವುದಾಗಿ ಸಂದೇಶ್ ಸ್ವಾಮಿ ತಿಳಿಸಿದರು.
ಎನ್.ಆರ್. ಕ್ಷೇತ್ರದ 32 ಬಡಾವಣೆಯಲ್ಲಿ ರಾಜೀವ್ ಆವಾಸ್ ಯೋಜನೆಯಡಿ ಮನೆ ನಿರ್ಮಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಹಣ ನೀಡುತ್ತಿದೆ. ಆದರೆ ತನ್ವೀರ್‌ಸೇಠ್ ಅವರು ಮೊದಲ ಹಂತದಲ್ಲಿ ಕೈಗೊಳ್ಳುವ 2 ಸಾವಿರ ಮನೆಗಳನ್ನೂ ಕೆ.ಎನ್. ಪುರ ಮತ್ತು ಯರಗನಹಳ್ಳಿಯಲ್ಲಿ ಮಾತ್ರ ನಿರ್ಮಿಸಲು ಮುಂದಾಗಿರುವುದು ಸರಿಯಲ್ಲ. ಅದು 32 ಬಡಾವಣೆಗೂ ಹಂಚಿಕೆ ಆಗಬೇಕು ಎಂದು ಆಗ್ರಹಿಸಿದರು. ಪಾಲಿಕೆ ಸದಸ್ಯರಾದ ರಾಮು,  ಬಿ.ಎಂ. ನಟರಾಜು, ಫೈರೋಜ್ ಖಾನ್ ಇದ್ದರು.

ಕಲಾವಿದರ ತಂಡದಿಂದ ನಾಳೆ ಇಳಯರಾಜ ಸಂಗೀತ ಸಂಜೆ
ಕ.ಪ್ರ.ವಾರ್ತೆ ಮೈಸೂರು ಜು. 4
ಸೌಂಡ್ ಆ್ಯಂಡ್ ರಿದಂ ವತಿಯಿಂದ ನಿರೀಕ್ಷೆ ಎಂಬ ವಿಶೇಷ ಮಕ್ಕಳ ದಿನವಸತಿ, ಕಲಿಕಾ ಹಾಗೂ ಚಟುವಟಿಕಾ ಕೇಂದ್ರಕ್ಕೆ ಆರ್ಥಿಕ ನೆರವು ನೀಡುವ ಸಂಬಂಧ ಜು. 6 ರಂದು ಜಗನ್ಮೋಹನ ಅರಮನೆಯಲ್ಲಿ ಸಂಗೀತ ನಿರ್ದೇಶಕ ಇಳಯರಾಜ ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಅಂದು ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ರಂಗಕರ್ಮಿ ಶ್ರೀಕಂಠ ಗುಂಡಪ್ಪ ಅಧ್ಯಕ್ಷತೆ ವಹಿಸಲಿದ್ದು, ಚರ್ಮರೋಗ ತಜ್ಞ ಡಾ.ಪಿ.ಎ. ಕುಶಾಲಪ್ಪ, ಮೃದಂಗ ಕಲಾವಿದ ಎಚ್.ಎಲ್. ಶಿವಶಂಕರಸ್ವಾಮಿ, ಬಿಎಐ ಮಾಜಿ ಅಧ್ಯಕ್ಷ ಕೆ. ಶ್ರೀರಾಮ್, ಕೆನರಾ ಬ್ಯಾಂಕ್ ಡಿಜಿಎಂ ಎಸ್.ಟಿ. ರಾಮಚಂದ್ರ ಅತಿಥಿಗಳಾಗಿ ಭಾಗವಹಿಸುವರು ಎಂದು ಸೌಂಡ್ ಆ್ಯಂಡ್ ರಿದಂ ಸಂಸ್ಥೆಯ ಎ.ಎಸ್. ಪ್ರಸನ್ನಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಟಿಕೆಟ್ ದರ 100 ನಿಗದಿಪಡಿಲಾಗಿದೆ. ಮೊ. 9845860528 ಸಂಪರ್ಕಿಸಬಹುದು ಎಂದರು.
ನಿರೀಕ್ಷೆ ಎಂಬ ವಿಶೇಷ ಮಕ್ಕಳ ದಿನವಸತಿ, ಕಲಿಕಾ ಹಾಗೂ ಚಟುವಟಿಕಾ ಕೇಂದ್ರದ ನಿರ್ದೇಶಕಿ ಹೇಮಾಮಾಲಿನಿ ಕೃಪಾಕರ್ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.