ವಿಶ್ವಶಾಂತಿಗೆ ಎಲ್ಲರೂ ಕೈಜೋಡಿಸಿ
ಕ.ಪ್ರ.ವಾರ್ತೆ , ಮೈಸೂರು , ಜು. 6
ಪ್ರಸ್ತುತ ವಿಶ್ವಶಾಂತಿ ಅತಿ ಮುಖ್ಯವಾಗಿದ್ದು, ಅದಕ್ಕಾಗಿ ಎಲ್ಲರೂ ಕೈಜೋಡಿಸಬೇಕು ಎಂದು 14ನೇ ಬೌದ್ಧ ಧರ್ಮಗುರು ದಲೈಲಾಮಾ ಕರೆ ನೀಡಿದರು.
ತಾಲೂಕಿನ ಬೈಲುಕುಪ್ಪೆಯ ಟಿಬೆಟಿಯನ್ ನಿರಾಶ್ರಿತರ ಶಿಬಿರದ ಸೆರಾಜೆ ಬೌದ್ಧ ಧರ್ಮ ವಿಹಾರ ಕೇಂದ್ರದಲ್ಲಿ ಶನಿವಾರ ಏರ್ಪಡಿಸಿದ್ದ ತಮ್ಮ 78ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರೀತಿ, ಶಾಂತಿ ಸರ್ವಧರ್ಮದ ಬೋಧನೆಯಾಗಿದ್ದು, ಎಲ್ಲರೂ ಅದನ್ನು ಪಾಲಿಸುವಂತಾಗಬೇಕು. ಜಾತಿಗಿಂತ ಮಾನವೀಯತೆ ದೊಡ್ಡದು. ಮಾನವರಲ್ಲಿ ಭಾಷೆ ಬೇರೆ ಬೇರೆ ಆದರೂ ಭಾವನೆಗಳೆಲ್ಲವೂ ಒಂದೇ ಆಗಿರುತ್ತದೆ. ಪರಸ್ಪರರಲ್ಲಿ ಹಗೆತನ ದ್ವೇಷ ಮನೆ ಮಾಡಿದಲ್ಲಿ ಶಾಂತಿ ಕೆಡಲಿದೆ. ಪರಸ್ಪರ ಗೌರವಿಸುವುದನ್ನು ಎಲ್ಲರೂ ಕಲಿಯಬೇಕು. ನಾವು ಯಾವುದೆ ಧರ್ಮಿಯರಾಗಲಿ ಅನ್ಯ ಧರ್ಮಿಯರನ್ನೂ ಗೌರವಿಸುವುದನ್ನು ಕಲಿಯಬೇಕು ಎಂದು ಹೇಳಿದರು. ಉಡುಗೊರೆಗಳನ್ನು ನೀಡುವುದರಿಂದ ಪ್ರೀತಿ ಸಂಪಾದಿಸಲು ಸಾಧ್ಯವಿಲ್ಲ. ಆಂತರಿಕವಾಗಿ ಪ್ರೀತಿಸಿದಲ್ಲಿ ಅದೇ ದೊಡ್ಡ ಉಡುಗೊರೆಯಾಗುತ್ತದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪರಸ್ಪರರನ್ನು ಪ್ರೀತಿಸುವ ಮೂಲಕ ಗೌರವಿಸಬೇಕು ಎಂದವರು ತಿಳಿಸಿದರು.
ಬೌದ್ಧ ಧರ್ಮವು ಭಾರತದಿಂದ ಬಂದದ್ದಾಗಿದ್ದು, ನಾವು ಅದನ್ನು ಅನುಸರಿಸುತ್ತಿದ್ದು, ಭಾರತದಲ್ಲಿಯೆ ನೆಲೆ ಕಂಡುಕೊಂಡಿದ್ದೇವೆ. ದಿವಂಗತ ಮಾಜಿ ಪ್ರಧಾನಿ ನೆಹರು ಅವರ ಉದಾರತೆ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ ಅವರು ಟಿಬೆಟಿಯನ್ನರಿಗೆ ಜಾಗ ನೀಡಿದ್ದು, ಅವರನ್ನು ಎಂದಿಗೂ ಮರೆಯುವಂತಿಲ್ಲ ಎಂದು ಹೇಳಿದರು.
ಶಾಂತಿ ಸಂಕೇತ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಸಹೋದರತ್ವ ಹಾಗೂ ಮಾನವೀಯ ಮೌಲ್ಯಗಳು ಶಾಂತಿಯ ಸಂಕೇತವಾಗಿದೆ. ಬೌದ್ಧ ಧರ್ಮಗುರು ದಲೈಲಾಮಾ ಅವರು ಶಾಂತಿ ಪ್ರಿಯರಾಗಿದ್ದು, ಅವರ ಹುಟ್ಟುಹಬ್ಬ ಮುಂದುವರಿಯಲಿ ಎಂದು ಶುಭ ಹಾರೈಸಿದರು.
ರಾಜ್ಯವು ಟಿಬೆಟಿಯನ್ನರನ್ನು ಅತಿಥಿಗಳಂತೆ ಸ್ವೀಕರಿಸಿದ್ದು, ರಾಜ್ಯದಲ್ಲಿ 40 ಸಾವಿರ ಟಿಬೆಟಿಯನ್ನರಿದ್ದಾರೆ ರಾಜ್ಯ ಸರ್ಕಾರ ತನ್ನ ಸಹಕಾರವನ್ನು ಟಿಬೆಟಿಯನ್ನರಿಗೆ ಮುಂದುವರಿಸಲಿದೆ. ಸರ್ವೇಜನ ಸುಖಿನೋಭವಂತು ಎಂಬಂತೆ ಟಿಬೆಟಿಯನ್ನರ ಕಷ್ಟ ಹಾಗೂ ಸುಖಗಳೆರಡರಲ್ಲೂ ಸರ್ಕಾರ ಜೊತೆಯಲ್ಲಿರುತ್ತದೆ ಎಂದು ತಿಳಿಸಿದರು. ಢಅರುಣಾಚಲ ಪ್ರದೇಶದ ಮುಖ್ಯಮಂತ್ರಿ ನಬಾಮ್ ತುಕಿ ಮಾತನಾಡಿ, ಬೌದ್ಧ ಧರ್ಮಗುರು ದಲೈಲಾಮಾ ಅವರು ಶಾಂತಿ ದೂತರಾಗಿದ್ದು, ಶಾಂತಿ ಮತ್ತು ಸಹೋದರತ್ವ ಕಾಣಬಹುದು. ಬೌದ್ಧ ಬಿಕ್ಷುಗಳು ಸತತವಾಗಿ ವಿಶ್ವಶಾಂತಿಗಾಗಿ ಪ್ರಾರ್ಥನೆ ಮಾಡುತ್ತಿರುವುದು ಶ್ಲಾಘನೀಯ. ಕರ್ನಾಟಕ ಸರ್ಕಾರ ಟಿಬೆಟಿಯನ್ನರ ಶಿಕ್ಷಣಕ್ಕೂ ಆದ್ಯತೆ ನೀಡಿರುವುದು ಸ್ವಾಗತಾರ್ಹ ಎಂದರು. ಕರ್ನಾಟಕ ಸರ್ಕಾರದೊಂದಿಗೆ ತಮ್ಮ ಅರುಣಾಚಲ ಪ್ರದೇಶದ ಸರ್ಕಾರ ಸಾಂಸ್ಕೃತಿಕ ಹಾಗೂ ಪಾರಂಪರಿಕ ಒಡಂಬಡಿಕೆಗೆ ಸಿದ್ಧವಿರುವುದಾಗಿ ಹೇಳಿದರು.
ಸುತ್ತೂರು ಮಠದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ, ಸಂಸದ ಎಚ್. ವಿಶ್ವನಾಥ್, ಬಿಷಪ್ ಡಾ. ಥಾಮಸ್ ಆಂತೋಣಿ ವಾಳಪಿಳ್ಳೈ, ಸರ್ಖಾಜಿ ಮೌಲಾನಾ ಮಹಮ್ಮದ್ ಉಸ್ಮಾನ್ ಶರೀಫ್, ಟಿಬೆಟಿಯನ್ ಆಂತರಿಕ ಸರ್ಕಾರದ ಪ್ರಧಾನಮಂತ್ರಿ ಡಾ. ಲೋಬ್ಸಾಂಗ್ಸೆಂಗಿ ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ರಾಜ್ಯದ ಕಲಾವಿದರಿಂದ ಕಂಸಾಳೆ ನೃತ್ಯ ಹಾಗೂ ಟಿಬೆಟಿಯನ್ನರ ಸಾಂಪ್ರದಾಯಕ ನೃತ್ಯಗಳನ್ನು ಪ್ರದರ್ಶಿಸಿತು.
ಸಚಿವರಾದ ಎಚ್.ಎಸ್. ಮಹದೇವಪ್ರಸಾದ್, ವಿ. ಶ್ರೀನಿವಾಸಪ್ರಸಾದ್, ಶಾಸಕರಾದ ಕೆ. ವೆಂಕಟೇಶ್, ಎಚ್.ಪಿ. ಮಂಜುನಾಥ್, ಜಿಪಂ ಸದಸ್ಯೆ ಮಂಜುಳಾರಾಜ್, ಟಿಬೆಟಿಯನ್ ಆಂತರಿಕ ಸರ್ಕಾರದ ಸಂಸದರಾದ ಜಿಶಿ ಲೋಬ್ಸಾಂಗ್, ಲೋಬ್ಸಾಂಗ್ಗಿಶೈ, ಪ್ರತಿನಿಧಿ ಕರ್ಮಸನ್ಗೈ, ಟಿಬೆಟಿಯನ್ ಮಹಿಳಾ ಸ್ವಸಹಾಯ ಗುಂಪುಗಳ ಅಧ್ಯಕ್ಷೆ ತೇಂಜಿನ್ ಡೋಲ್ಮಾ, ಇಂಡೋ ಟಿಬೆಟಿಯನ್ ಫ್ರೆಂಡ್ಶಿಪ್ ಸಂಸ್ಥೆಯ ಅಧ್ಯಕ್ಷ ಸಿ.ಸಿ. ಸದಾಶಿವಪ್ಪ, ದಕ್ಷಿಣ ವಲಯ ಐಜಿಪಿ ಡಾ. ರಾಮಚಂದ್ರರಾವ್, ಜಿಲ್ಲಾ ಎಸ್ಪಿ ಅಭಿನವ್ಖರೆ, ಎಸಿ ವಿನುತ ಪ್ರಿಯ, ತಹಸೀಲ್ದಾರ್ ಎಂ.ಕೆ. ಸವಿತಾ ಭಾಗವಹಿಸಿದ್ದರು.
ಮೈಸೂರು ಪೇಟ ಬಗ್ಗೆ ಮೆಚ್ಚುಗೆ
ಕಾರ್ಯಕ್ರಮದ ಪ್ರಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೊಡಿಸಿದ್ದ ಮೈಸೂರು ಪೇಟವನ್ನು ಮತ್ತೊಮ್ಮೆ ಹಿಡಿದುಕೊಂಡ ದಲೈಲಾಮಾ ಅವರು, ಪೇಟವು ಧರಿಸಲು ಚೆನ್ನಾಗಿದೆ ಎಂದರಲ್ಲದೆ ಪೇಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

