'ಸಮಾಜ ಅಭಿವೃದ್ಧಿಗೆ ಆರೋಗ್ಯ ಮುಖ್ಯ'
ಕ.ಪ್ರ.ವಾರ್ತೆ , ಮೈಸೂರು , ಜು. 7
ಸಮಾಜದ ಒಟ್ಟಾರೆ ಅಭಿವೃದ್ಧಿಯಲ್ಲಿ ಆರೋಗ್ಯ ಮತ್ತು ಆರ್ಥಿಕತೆ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಬೆಂಗಳೂರು ವಿವಿ ಕುಲಸಚಿವೆ ಪ್ರೊ. ಕೆ.ಕೆ. ಸೀತಮ್ಮ ಅಭಿಪ್ರಾಯಪಟ್ಟರು.
ಮೈಸೂರು ವಿವಿ- ಯುಜಿಸಿ ಶೈಕ್ಷಣಿಕ ಮಹಾವಿದ್ಯಾಲಯದಲ್ಲಿ ಭಾನುವಾರ ನಡೆದ 25ನೇ ಅರ್ಥಶಾಸ್ತ್ರ ಪುನಶ್ಚೇತನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಅಭಿವೃದ್ಧಿ ಪಥ ಎಂಬುದು ಎಲ್ಲಾ ದೇಶಗಳಿಗೂ ಮುಖ್ಯ. ಸಮಾಜದ ಪ್ರಗತಿಯಾದರೆ ದೇಶ ಸದೃಢವಾಗಿರುತ್ತದೆ ಎಂದರು.
ಇಂದು ಪ್ರತಿಯೊಂದು ಕ್ಷೇತ್ರವು ತಾಂತ್ರಿಕವಾಗಿ, ಶೈಕ್ಷಣಿಕವಾಗಿ ಪ್ರಾಬಲ್ಯ ಮೆರೆಯುತ್ತಿದೆ. ಇದರ ಜತೆಗೆ ಆರ್ಥಿಕತೆ ಸಂಯೋಜನೆಗೊಂಡರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ಆರ್ಥಿಕತೆ ಮುಖ್ಯವಾಗುತ್ತದೆ. ಅಭಿವೃದ್ಧಿ ಪಥದಲ್ಲಿ ಸಾಗಿರುವ ದೇಶದಲ್ಲಿ ಪೈಪೋಟಿ ಮತ್ತು ಸಂಪಾದನೆ ಪ್ರಾಧ್ಯಾನ್ಯತೆ ಪಡೆದುಕೊಂಡಿರುತ್ತದೆ. ಇಂದು ಸಣ್ಣ ವಯಸ್ಸಿನ ಮಕ್ಕಳಲ್ಲೇ ಬದಲಾದ ಜೀವನ ಶೈಲಿಯಿಂದ ಹಲವು ರೋಗಗಳು ಕಾಣಿಸಿಕೊಳ್ಳುತ್ತಿವೆ. ಏತನ್ಮಧ್ಯೆ ಆರ್ಥಿಕ ಸ್ಥಿತಿ ಹದಗೆಟ್ಟರೆ ಮಕ್ಕಳು ನ್ಯೂನತೆ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದರು.
ನಮ್ಮ ದೇಶದಲ್ಲಿ 1960ರಲ್ಲಿ 10 ಮಿಲಿಯನ್ ಟನ್ ಆಹಾರೋತ್ಪಾದನೆಯಾಗುತ್ತಿತ್ತು. ಪ್ರಸ್ತುತ 60 ಮಿಲಿಯನ್ ಟನ್ ಆಹಾರೋತ್ಪಾದನೆಯಾಗುತ್ತಿದೆ. ಜಾಗತಿಕರಣದ ಫಲವಾಗಿ 2745 ವಿಧದ ಟಿವಿ ಮಾದರಿಗಳು, 120 ವಿಧದ ಕಾರುಗಳು, 700 ಉಪಗ್ರಹ ಚಾನಲ್ಗಳು ಹಾಗೂ 160 ಮಿಲಿಯನ್ನಷ್ಟು ಇಂಟರ್ನೆಟ್ ಬಳಕೆದಾರರು ಇದ್ದಾರೆ. ಇಷ್ಟೆಲ್ಲಾ ಪ್ರಗತಿ ಕಂಡರೆ ಮತ್ತೊಂದೆಡೆ ಶೇ. 40 ರಷ್ಟು ಗ್ರಾಮೀಣ ಭಾಗದ ರಸ್ತೆಗಳ ಸಂಪರ್ಕವೇ ಸರಿಯಿಲ್ಲ ಎಂಬುದು ಆತಂಕ ಸೃಷ್ಟಿಸಿದೆ ಎಂದು ವಿವರಿಸಿದರು.
ಮೈಸೂರು ವಿವಿ ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗದ ಅಧ್ಯಕ್ಷೆ ಪ್ರೊ. ಡಿ.ಎಸ್. ಲೀಲಾವತಿ ಮಾತನಾಡಿ, ಮುಂದಿನ ದಿನಗಳಲ್ಲಿ ಶಿಕ್ಷಣ ಪಡೆಯುವುದು ಕಷ್ಟದ ಕೆಲಸವಾಗಿದೆ. ಆರ್ಥಿಕ ಬಿಕ್ಕಟ್ಟು, ಶಿಕ್ಷಣ ವ್ಯಾಪಾರಿಕರಣವಾಗಿರುವುದು ಮುಖ್ಯ ಕಾರಣಗಳಾಗಿವೆ. ಹೀಗಾಗಿ ನಾವು ಮೊದಲು ಆರ್ಥಿಕವಾಗಿ ಸದೃಢರಾಗಬೇಕು. ನಂತರ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು. ಯುಜಿಸಿ ಶೈಕ್ಷಣಿಕ ಸಿಬ್ಬಂದಿ ಮಹಾವಿದ್ಯಾಲಯದ ನಿರ್ದೇಶಕ ಪ್ರೊ. ಲಿಂಗರಾಜ ಗಾಂಧಿ ಅಧ್ಯಕ್ಷತೆ ವಹಿಸಿದ್ದರು. ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಹಾಗೂ ಶಿಬಿರ ಸಂಯೋಜಕ ಪ್ರೊ. ಎಸ್. ಮಹೇಂದ್ರ ಕುಮಾರ್, ನಂಜುಂಡಸ್ವಾಮಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

