ಮೈಸೂರು

ಅಕ್ರಮ ಮರಳು ಸಾಗಣೆಗೆ ಬೇಕು ಅಂಕುಶ

Published On :

ಕ.ಪ್ರ.ವಾರ್ತೆ  ಕೆ.ಆರ್. ನಗರ  ಜು. 8
ತಾಲೂಕಿನ ಕಾವೇರಿ ನದಿ ಪಾತ್ರದಲ್ಲಿ ಮರಳು ತೆಗೆದು ಲೋಕೋಪಯೋಗಿ ಇಲಾಖೆಗೆ ಸೇರಿದ ಯಾರ್ಡ್‌ನಲ್ಲಿ ಸಂಗ್ರಹಿಸುವ ಗುತ್ತಿಗೆ ಪಡೆದಿರುವ ಮರಳು ಗುತ್ತಿಗೆದಾರರು ತಮಗೆ ಇಷ್ಟ ಬಂದಂತೆ ಮರಳನ್ನು ಸಾಗಿಸಿ ಆಕ್ರಮವಾಗಿ ಖಾಸಗಿಯವರಿಗೆ ಮರಳು ಮಾರಾಟ ಮಾಡಿಕೊಳ್ಳುತ್ತಿದ್ದು, ಇವರಿಗೆ ಹೇಳುವವರು, ಕೇಳುವವರೇ ಇಲ್ಲವಾಗಿದೆ.
2013ನೇ ಸಾಲಿನ ಏಪ್ರಿಲ್‌ನಿಂದ ಅನ್ವಯವಾಗುವಂತೆ 1 ವರ್ಷದವರೆಗೆ ಮರಳು ಸಾಗಿಸುವ ಗುತ್ತಿಗೆ ಪಡೆದಿರುವ ಕೆ.ಆರ್. ಪೇಟೆ ತಾಲೂಕಿನ ಗುತ್ತಿಗೆದಾರರು 3 ತಿಂಗಳ ಅವಧಿಯಲ್ಲಿ ಕೇವಲ 1142 ಟಿಪ್ಪರ್ ಲೋಡ್ ಮರಳನ್ನು ಯಾರ್ಡ್‌ಗೆ ಸಾಗಿಸಿದ್ದು, ಇದಕ್ಕಿಂತ ದುಪ್ಪಟ್ಟು ಮರಳನ್ನು ಖಾಸಗಿಯವರಿಗೆ ಮಾರಿಕೊಂಡಿರುವ ಆರೋಪಗಳು ಕೇಳಿ ಬರುತ್ತಿವೆ.
ನದಿ ಪಾತ್ರದ ಒಟ್ಟು 12 ಸ್ಥಳಗಳಲ್ಲಿ ಮರಳು ತೆಗೆದು ಸಾಗಿಸುವ ಗುತ್ತಿಗೆ ಪಡೆದಿದ್ದು, ಇಷ್ಟು ಸ್ಥಳಗಳಿಂದ 3 ತಿಂಗಳಿಗೆ ಕೇವಲ 1142 ಟಿಪ್ಪರ್ ಲೋಡ್ ಮರಳು ಸಾಗಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ತಾಲೂಕಿನಾದ್ಯಂತ ನಡೆಯುತ್ತಿರುವ ನಾಲಾ ಕಾಮಗಾರಿಗೆ ಸಾವಿರಾರು ಲೋಡ್ ಮರಳು ಎಲ್ಲಿಂದ ಬಂತು ಎಂಬುವುದು ಯಕ್ಷಪ್ರಶ್ನೆಯಾಗಿದೆ.
ನಿಯಮಾನುಸಾರ ಇಲಾಖೆಗೆ ಹಣ ಪಾವತಿಸಿ ಡಿಡಿ ಪಡೆದು ಮರಳು ಪಡೆಯಲು ಕಾಯುತ್ತಿರುವ ಸಾರ್ವಜನಿಕರಿಗೆ ತಿಂಗಳಾದರೂ ಮರಳು ಸರಬರಾಜು ಆಗುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ಮರಳು ನದಿಯಿಂದ ಸರಬರಾಜಾಗಿಲ್ಲ ಎಂಬ ಹಾರಿಕೆಯ ಉತ್ತರ ನೀಡುತ್ತಿದ್ದು, ಈ ಬಗ್ಗೆ ಯಾರನ್ನು ಪ್ರಶ್ನಿಸಿದರೂ ಸ್ಪಷ್ಟ ಮಾಹಿತಿಯಾಗಲಿ, ಉತ್ತರವಾಗಲಿ ಸಿಗುತ್ತಿಲ್ಲ.
ಲೋಕೋಪಯೋಗಿ ಇಲಾಖೆಯ ಮಾಹಿತಿ ಪ್ರಕಾರ ಆಕ್ರಮವಾಗಿ ಸಾಗಿಸುತ್ತಿದ್ದ 100ಕ್ಕೂ ಅಧಿಕ ಲೋಡ್ ಮರಳನ್ನು ಜಪ್ತಿ ಮಾಡಿ ದಂಡ ವಿಧಿಸಲಾಗಿದೆ. ಇದರ ಜತೆಗೆ ಮರಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಪೊಲೀಸ್ ಇಲಾಖೆಯವರು ಲಾರಿ ಮತ್ತು ಟ್ರ್ಯಾಕ್ಟರ್‌ಗಳಲ್ಲಿ ಸಾಗಿಸುತ್ತಿದ್ದ ಆಕ್ರಮ ಮರಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಆದರೂ ನಿತ್ಯ ಅಕ್ರಮ ಮರಳು ಸಾಗಣೆ ಎಗ್ಗಿಲ್ಲದೆ ನಡೆಯುತ್ತಿದೆ. ಆದ್ದರಿಂದ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.