ವಿಚಾರಣೆ ನಡೆಸದೇ ಆರೋಪಿ ಬಂಧಿಸದಿರಿ
ಕ.ಪ್ರ.ವಾರ್ತೆ ಕೆ.ಆರ್. ನಗರ ಜು. 13
ಸಾರ್ವಜನಿಕರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದರೆ, ಎಫ್ಐಆರ್ ದಾಖಲಿಸುವುದು ಇಲಾಖೆಯ ಆದ್ಯ ಕರ್ತವ್ಯ. ಆದರೆ, ಎಫ್ಐಆರ್ ದಾಖಲಾದ ನಂತರ ವಿಚಾರಣೆ ಮಾಡದೆ ಆರೋಪಿಯನ್ನು ಬಂಧಿಸಬೇಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಹೇಳಿದರು.
ವಾಲ್ಮೀಕಿ ಸಮುದಾಯ ಭವನದಲ್ಲಿ ಶುಕ್ರವಾರ ಸಂಜೆ ನಡೆದ ಪೊಲೀಸ್ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಪೊಲೀಸ್ ಸಿಬ್ಬಂದಿಯ ಕೊರತೆ ಇರುವುದು ಗಮನಕ್ಕೆ ಬಂದಿದ್ದು, ಸರ್ಕಾರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿದ ನಂತರ ಅಗತ್ಯ ಸಿಬ್ಬಂದಿ ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಅನಗತ್ಯವಾಗಿ ಸುಳ್ಳು ಕೇಸು ನೀಡಿ ಎಫ್ಐಆರ್ ದಾಖಲಿಸುವ ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ಹೆದರಬೇಡಿ. ಇಲಾಖೆ ಸದಾ ನ್ಯಾಯದ ಪರವಾಗಿ ಕೆಲಸ ಮಾಡಲಿದ್ದು, ಪ್ರಕರಣದ ಸತ್ಯಾಸತ್ಯತೆ ತಿಳಿದ ನಂತರ ಆ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತದೆ ಎಂದು ಭರವಸೆ ನೀಡಿದರು. ದಲಿತರ ಮೇಲೆ ನಡೆಯುವ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಗಳನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ಗ್ರಾಮಾಂತರ ಠಾಣೆ ಸ್ಥಾಪಿಸುವುದರ ಜೊತೆಗೆ ಪಟ್ಟಣಕ್ಕೆ ಪ್ರತ್ಯೇಕ ಸಂಚಾರ ಠಾಣೆ ಆರಂಭಿಸಬೇಕು. ಸಂಚಾರ ಒತ್ತಡ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು, ಅನಗತ್ಯವಾಗಿ ಸುಳ್ಳು ಪ್ರಕರಣ ದಾಖಲಿಸುವವರಿಗೆ ಶಿಸ್ತು ಕ್ರಮ ಜರುಗಿಸಬೇಕು.
ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ ನಡೆಸಬೇಕು ಮತ್ತು ಪಟ್ಟಣದಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಅಹವಾಲು ಸಾರ್ವಜನಿಕರಿಂದ ಕೇಳಿ ಬಂದವು.
ಡಿವೈಎಸ್ಪಿ ಸಿದ್ದಪ್ಪ, ತಹಸೀಲ್ದಾರ್ ಬಿ.ಎನ್. ವೀಣಾಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಪ್ರಸನ್ನಕುಮಾರ್, ಎಸ್ಐಗಳಾದ ವನರಾಜು, ಹರೀಶ್, ಜಿಪಂ ಸದಸ್ಯ ರಾಜಯ್ಯ, ಮೂಳೆತಜ್ಞ ಡಾ. ಮೆಹಬೂಬ್ ಖಾನ್, ಪುರಸಭಾ ಸದಸ್ಯ ರಿಜ್ವಾನ್, ಉಮೇಶ್, ಕೆ.ಎಲ್. ಜಗದೀಶ್, ಕೆ.ಎಲ್. ಕುಮಾರ್, ದಲಿತ ಮುಖಂಡರಾದ ಹನಸೊಗೆ ನಾಗರಾಜು, ಶ್ರೀನಿವಾಸಪ್ರಸಾದ್, ಚೆಲುವರಾಜು, ರಾಜಯ್ಯ, ತಾಲೂಕು ಆದಿಜಾಂಬವ ಸಂಘದ ಅಧ್ಯಕ್ಷ ಎಂ. ಲೋಕೇಶ್, ಪುರಸಭಾ ಮಾಜಿ ಉಪಾಧ್ಯಕ್ಷೆ ನಾಗರತ್ನಮ್ಮ, ಕಗ್ಗುಂಡಿ ಕುಮಾರ್, ಕುಪ್ಪಳಿ ಸೋಮ, ದಿವಾಕರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

