ಮಠದ ಮೇಲಿನ ದಾಳಿ ರಾಜಕೀಯ ಸಂಚು: ಆರೋಪ
ಕ.ಪ್ರ.ವಾರ್ತೆ ಮೈಸೂರು ಜು. 18
ಆದಿಚುಂಚನಗಿರಿ ಶಾಖಾ ಮಠದ ಮೇಲೆ ನಡೆದಿರುವ ಐಟಿ ದಾಳಿಯ ಹಿಂದೆ ರಾಜಕೀಯು ಸಂಚು ಇದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಎಂ. ಬಸವೇಗೌಡ ಆರೋಪಿಸಿದರು.
ದೇಶದ ಇತಿಹಾಸದಲ್ಲಿ ಈವರೆಗೆ ಯಾವುದೇ ಒಂದು ಸಣ್ಣ ಮಠದ ಮೇಲೂ ಇಂತಹ ದಾಳಿ ಮಾಡಿರುವುದು ಕಂಡುಬಂದಿಲ್ಲ. ಹೀಗಿರುವಾಗ ಬೆಂಗಳೂರಿನ ಶ್ರೀ ಮಠದ ಮೇಲೆ ದಾಳಿ ನಡೆಸಿರುವುದು ಕೇವಲ ಆದಿಚುಂಚನಗಿರಿ ಮಠದ ಮೇಲೆ ನಡೆಸಿರುವ ದಾಳಿಯಲ್ಲ. ಇದು ಒಕ್ಕಲಿಗರ ಸಮುದಾಯದ ಮನಸ್ಸುಗಳ ಮೇಲೆ ನಡೆದಿರುವ ದಾಳಿ. ಇದು ಈ ಜನಾಂಗಕ್ಕೆ ಮಾಡಿರುವ ಅಪಮಾನ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಯಾವುದೇ ಮಠದ ಮೇಲೆ ಐಟಿ ದಾಳಿ ಮಾಡಿದರೆ ನಮ್ಮ ಅಭ್ಯಂತರವಿಲ್ಲ. ಆದರೆ ಆ ಶಾಖಾ ಮಠದಲ್ಲಿ ಕೇವಲ ಧಾರ್ಮಿಕ ಕಾರ್ಯಕ್ರಮಗಳು ಮಾತ್ರವೇ ನಡೆಯುತ್ತಿದ್ದು, ಶಿಕ್ಷಣ ಸಂಸ್ಥೆಯ ಮತ್ತಿತರ ವ್ಯವಹಾರಿಕ ಪತ್ರಗಳು ಅಲ್ಲಿ ಇರಲಿಲ್ಲ. ಹಾಗೂ ಯಾವುದೇ ವ್ಯವಹಾರಿಕ ಕಚೇರಿಯೂ ಇರಲಿಲ್ಲ. ಅಲ್ಲಿನ ಶಾಖಾ ಮಠದ ಸೌಮ್ಯಾನಂದನಾಥ ಸ್ವಾಮೀಜಿಯನ್ನು ಗೃಹ ಬಂಧನದಲ್ಲಿರಿಸಿ ದಾಳಿ ಮಾಡಿದ್ದನ್ನು ಸಂಘವು ತೀವ್ರವಾಗಿ ಖಂಡಿಸುತ್ತದೆ ಎಂದು ಆಕ್ಷೇಪಿಸಿದರು.
ಕಣ್ಣೊರೆಸುವ ತಂತ್ರ: ದಾಳಿ ನಂತರ ಕೇವಲ ದಾಖಲೆಗಳನ್ನು ಪರಿಶೀಲಿಸಲು ಹೋಗಿದ್ದಾಗಿ ಅಧಿಕಾರಿಗಳು ಹೇಳಿಕೆ ನೀಡಿರುವುದು ಕೇವಲ ಕಣ್ಣೊರೆಸುವ ತಂತ್ರ. ಆದರೆ ಯಾವ ಕಾರಣಕ್ಕಾಗಿ ದಾಳಿ ಮಾಡಲಾಯಿತು ಎಂಬುದನ್ನು ಅಧಿಕಾರಿಗಳು ಸ್ಪಷ್ಟನೆ ನೀಡಬೇಕು. ಜತೆಗೆ ಸಂಬಂಧಿಸಿದವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಸುರೇಶ್ ಬಾಬು ಮಾತನಾಡಿ, ಆದಿಚುಂಚನಗಿರಿ ಮಠವು 1 ಲಕ್ಷ ವಿದ್ಯಾರ್ಥಿಗಳಿಗೆ ಅಕ್ಷರ ಹಾಗೂ ಅನ್ನ ದಾಸೋಹ ನೀಡುತ್ತಿರುವ ಮಹಾಸಂಸ್ಥೆ. ಇಂತಹ ಸಂಸ್ಥೆ ಮೇಲೆ ದಾಳಿ ನಡೆಸಿರುವುದು ಪೂರ್ವ ನಿಯೋಜಿತ ಸಂಚು. ಇದರ ವಿರುದ್ಧ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ, ಕೆ.ಆರ್. ನಗರದ ಚುಂಚನಕಟ್ಟೆ ಶಾಖಾ ಮಠದ ಶಿವಾನಂದನಾಥ ಸ್ವಾಮೀಜಿ, ಒಕ್ಕಲಿಗರ ಯುವ ವೇದಿಕೆಯ ಗೌರವಾಧ್ಯಕ್ಷ ಎಸ್ಬಿಎಂ ಮಂಜು, ನಗರ ಪಾಲಿಕೆ ಸದಸ್ಯ ಪ್ರಶಾಂತ್ ಗೌಡ, ಮಾಜಿ ಉಪಮೇಯರ್ ಪುಷ್ಪಲತಾ ಜಗನ್ನಾಥ್, ಗ್ರಾಮೀಣ ಸಂಸ್ಥೆ ಅಧ್ಯಕ್ಷ ಪಿ. ಪ್ರಸನ್ನ, ಮುಖ್ಯಪ್ರಾಣ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಎಂ.ಎನ್. ವಿಜಯ ವೆಂಕಟೇಶ್, ಮೈಸೂರು ನಗರ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೆ.ಎಸ್. ನಾಗರಾಜ್, ಮುಖಂಡರಾದ ಡಾ.ವೈ.ಡಿ. ರಾಜಣ್ಣ, ಕೆ.ಎನ್. ಅಣ್ಣೇಗೌಡ, ಪರಮೇಶ್ಗೌಡ, ರಾಜಶೇಖರಗೌಡ, ದೇವರಾಜೇಗೌಡ, ಬೆಳಗೊಳ ಸುಬ್ರಹ್ಮಣ್ಯ, ನಾಗಣ್ಣ, ಅನುಸೂಯ ಇದ್ದರು. ಇದಕ್ಕೂ ಮುನ್ನ ಒಕ್ಕಲಿಗರ ವಿಕಾಸ ವೇದಿಕೆ, ನೇಗಿಲ ಯೋಗಿ ಸೇವಾ ಸಂಸ್ಥೆ, ಕಲ್ಪವೃಕ್ಷ ಟ್ರಸ್ಟ್, ಕೆ.ಜಿ. ಕೊಪ್ಪಲು ಒಕ್ಕಲಿಗರ ಹಿತರಕ್ಷಣಾ ವೇದಿಕೆ ಮುಂತಾದ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಎಂ. ಬಸವೇಗೌಡ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

