ಮಹಾರಾಜರು ಬಹುವಿಧ ದಾಸೋಹಿಗಳು: ಸಂಸದ ವಿಶ್ವನಾಥ್
ಕ.ಪ್ರ.ವಾರ್ತೆ ಮೈಸೂರು ಜು. 21
ಮಠ- ಮಾನ್ಯಗಳು ತ್ರಿವಿಧ ದಾಸೋಹಿಗಳಾದರೆ, ಮಹಾರಾಜರು ಬಹುವಿಧ ದಾಸೋಹಿಗಳು ಎಂದು ಸಂಸದ ಎಚ್. ವಿಶ್ವನಾಥ್ ಬಣ್ಣಿಸಿದರು.
ಮಾನಸ ಗಂಗೋತ್ರಿಯ ಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ಭಾನುವಾರ ಮಂಟೇಸ್ವಾಮಿ ಮಠ ಮತ್ತು ಕರ್ನಾಟಕ ರಾಜ್ಯ ಅರಸು ಮಹಾಸಭಾ ಆಯೋಜಿಸಿದ್ದ ಜಯಚಾಮರಾಜ ಒಡೆಯರ್ ವರ್ಧಂತಿ ಉದ್ಘಾಟಿಸಿ ಮತ್ತು ಅಲಮೇಲಮ್ಮನ ಶಾಪ- ಒಂದು ಶವಪರೀಕ್ಷೆ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಮಠಗಳು ಧಾರ್ಮಿಕ, ಅಕ್ಷರ ಮತ್ತು ಅನ್ನ ದಾಸೋಹ ನೀಡುತ್ತಿವೆ. ಆದರೆ, ಮಹಾರಾಜರು ಜನರ ಎಲ್ಲಾ ರೀತಿಯ ಸೇವೆ ಮಾಡಿದ್ದಾರೆ. ಆದ್ದರಿಂದ ಅವರು ಬಹುವಿಧ ದಾಸೋಹಿಗಳು. ನಮ್ಮ ತಾತ ಒಮ್ಮೆ ದಸರಾ ನೋಡಲು ಬಂದಾಗ ಅಂಬಾರಿಯಲ್ಲಿ ಹೋಗುತ್ತಿದ್ದ ಮಹಾರಾಜರನ್ನು ಕಂಡು ಅನ್ನ ಕೊಟ್ಟ ದೇವರು ಎಂದು ಕೈ ಮುಗಿದ್ದಿದ್ದರು ಎನ್ನುತ್ತ ವಿಶ್ವನಾಥ್ ಭಾವುಕರಾಗಿ ಕಣ್ಣೀರಿಟ್ಟರು.
ಕೃತಜ್ಞತೆ ಇಲ್ಲ: ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್ ಅವರು ಜನಮಾನಸದ ದೇವರುಗಳು. ಅವರ ದೂರದರ್ಶಿತ್ವ ಮತ್ತು ಚಿಂತನೆಯ ಆಡಳಿತ ದೊಡ್ಡದು. ಅವರ ಆಡಳಿತದ ಸವಿಯನ್ನು ಅನುಭವಿಸಿದ ಮೈಸೂರಿನ ಜನತೆ ಪುಣ್ಯವಂತರು. ಆದರೆ, ಅದನ್ನು ನೆನೆಯುವ ಕೃತಜ್ಞತೆ ಇಲ್ಲದಾಗಿದೆ. ಈ ವಿಷಯದಲ್ಲಿ ಜನತೆ ಮತ್ತು ಸರ್ಕಾರಗಳೂ ಎರಡೂ ಒಂದೆ ಆಗಿವೆ. ಯಾರನ್ನೊ ಹೊಗಳುವ ಬದಲಿಗೆ ಮತ್ತ್ಯಾರನ್ನೊ ಹೊಗಳಲಾಗುತ್ತಿದೆ ಎಂದು ವಿಷಾದಿಸಿದರು.
ಜಯಚಾಮರಾಜ ಒಡೆಯರ್ ಅವರಿಗೆ ರಾಜ್ಯದಲ್ಲಿ ಪ್ರಜಾಪ್ರಭುತ್ವದ ಆಡಳಿತ ಬರುವ 10 ವರ್ಷ ಮುನ್ನವೆ ಪಂಚವಾರ್ಷಿಕ ಯೋಜನೆ ಜಾರಿಗೆ ತಂದ ಕೀರ್ತಿ ಸಲ್ಲುತ್ತದೆ ಎಂದ ಅವರು, ಈ ನಿಟ್ಟಿನಲ್ಲಿಯೆ ಡಿ. ದೇವರಾಜ ಅರಸು ಅವರು ಸಹ ಉತ್ತಮ ಆಡಳಿತ ನೀಡಿದ್ದಾಗಿ ಸ್ಮರಿಸಿದರು.
ಸತ್ಯದ ದರ್ಶನ: ಅಲಮೇಲಮ್ಮನ ಕುರಿತ ಗೊಂದಲವನ್ನು ಪ್ರೊ. ಪಿ.ವಿ. ನಂಜರಾಜ ಅರಸು ಅವರು ನಿವಾರಿಸಿದ್ದಾರೆ. ವಾಸ್ತವತೆ ಸಂಶೋಧಿಸಿ ಬರೆದಿದ್ದಾರೆ. ಸತ್ಯದ ದರ್ಶನ ಮಾಡಿಸಿದ್ದಾರೆ. ಇದು ಸಂಶೋಧಕರಿಗೆ ಮತ್ತು ಸಂಶೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕ ಆಗಬೇಕು ಎಂದ ಅವರು, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಮತ್ತೊಬ್ಬರ ಇತಿಹಾಸ ಕೆಡಿಸಬಾರದು ಎಂದರು.
ಇತ್ತೀಚಿಗೆ ಚಲನಚಿತ್ರಗಳು ಮತ್ತು ಸಾಹಿತ್ಯ ಪುಸ್ತಕಗಳು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕೊಡಲಿಪೆಟ್ಟು ನೀಡುತ್ತಿವೆ. ಬಸವಣ್ಣನ ಹೆಸರಿನಲ್ಲಿ ಚಿತ್ರ ನಿರ್ಮಿಸಲು ಹೋಗಿ ಇಂತಹ ಗೊಂದಲ ಉಂಟಾಗಿದೆ. ಆದ್ದರಿಂದ ಬ್ರಾಹ್ಮಣ ಎಂದು ಹೆಸರು ಬದಲಿಸುವುದು ಸರಿಯಲ್ಲ. ಚಿತ್ರ ನಿರ್ಮಿಸೋಣ. ಆ ಕಾಲದ ಕೆಲವು ನ್ಯೂನತೆ ಹೇಳೋಣ. ಆದರೆ, ಇತಿಹಾಸಕ್ಕೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಪುಸ್ತಕಗಳೂ ಧರ್ಮ, ವ್ಯಕ್ತಿಯನ್ನು ನಿಂದಿಸುವ ಪ್ರಯತ್ನ ಸಾಧುವಲ್ಲ ಎಂದರು.
ಪತ್ರಕರ್ತ ರವೀಂದ್ರ ಭಟ್ಟ ಪುಸ್ತಕ ಕುರಿತು ಮಾತನಾಡಿದರು. ಇದಕ್ಕೂ ಮುನ್ನ ವಾರ್ತಾ ಇಲಾಖೆಯಿಂದ ಹೊರತಂದಿರುವ ಮಹಾರಾಜ ಜಯಚಾಮರಾಜ ಒಡೆಯರ್ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಬೊಪ್ಪೇಗೌಡನಪುರ ಮಠದ ಬಿ.ಎಲ್. ಪ್ರಭುದೇವರಾಜ ಅರಸು, ತಜ್ಞ ರಾಜಚಂದ್ರ, ರಾಮ್ಸ್‌ಸನ್ಸ್ ಪ್ರತಿಷ್ಠಾನದ ಆರ್.ಜೆ. ಸಿಂಗ್, ಲೇಖಕ ಪ್ರೊ. ಪಿ.ವಿ. ನಂಜರಾಜ ಅರಸು, ಅಭಿರುಚಿನ ಪ್ರಕಾಶನದ ಪ್ರಕಾಶಕ ಗಣೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

