ಮೈಸೂರು

ಕಡಿಮೆಯಾದ ಮಳೆಯ ಆರ್ಭಟ

Published On :

ಪಿರಿಯಾಪಟ್ಟಣ: ತಾಲೂಕಿನಾದ್ಯಂತ ಮಳೆಯ ಆರ್ಭಟ ಅಲ್ಪಮಟ್ಟಿಗೆ ಕಡಿಮೆಯಾಗಿದ್ದು, ವಿವಿಧ ಕಡೆ ಅಲ್ಪಪ್ರಮಾಣದ ಮಳೆಯಾಗಿದ್ದು, ಕೆಲವು ಕಡೆಗಳಲ್ಲಿ ಮಳೆಯಿಂದಾಗಿ ಗೋಡೆ ಮತ್ತು ಮನೆ ಕುಸಿದಿದೆ. ತಾಲೂಕಿನ ಕೂಣಸೂರು ಗ್ರಾಮದ ವೀರಶೆಟ್ಟಿ ಎಂಬವರ ಮನೆ ಬಿದ್ದು ಹೋಗಿದೆ. ನವಿಲೂರು ಗ್ರಾಮದ ವೀರಭದ್ರಾಚಾರಿ ಎಂಬವರಿಗೆ ಸೇರಿದ ವಾಸದ ಮನೆಯ ಗೋಡೆ ಕುಸಿದಿದೆ.

ಅಂಗನವಾಡಿ: ಅರ್ಜಿ ಆಹ್ವಾನ
ಎಚ್.ಡಿ. ಕೋಟೆ:
ತಾಲೂಕಿನ ಸಮಗ್ರ ಶಿಶು ಅಭಿವೃದ್ಧಿ ಯೋಜನಾ ಕಚೇರಿಯ ವ್ಯಾಪ್ತಿಯಲ್ಲಿ ಖಾಲಿಯಿರುವ ನಾಲ್ಕು ಅಂಗನವಾಡಿ ಕಾರ್ಯಕರ್ತೆ ಹಾಗೂ ಒಂದು ಮಿನಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು 18 ಅಂಗನವಾಡಿ ಸಹಾಯಕಿಯರ ಹುದ್ದೆಗಳನ್ನು ಗೌರವಧನದ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಸ್ಥಳೀಯ ಗ್ರಾಮಗಳಲ್ಲಿ ವಾಸಿಸುವ 18 ರಿಂದ 44 ವರ್ಷದ ಅರ್ಹ ಮಹಿಳೆಯರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆ.5. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಅಂಚೆ ಕಚೇರಿ ಹಿಂಭಾಗ, ಮೇಟಿಕುಪ್ಪೆ ರಸ್ತೆ, ಎಚ್.ಡಿ. ಕೋಟೆ ಟೌನ್, ದೂ. 255320 ಸಂಪರ್ಕಿಸಿ.

ಐಟಿ ದಾಳಿಗೆ ಖಂಡನೆ
ಭೇರ್ಯ:
ಧಾರ್ಮಿಕ ಕೇಂದ್ರಗಳ ಮೇಲೆ ಸರ್ಕಾರ ಐಟಿ ಅಧಿಕಾರಿಗಳಿಂದ ದಾಳಿ ಮಾಡಿಸಿರುವುದು ಖಂಡನೀಯ ಎಂದು ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳೇ ಮಿರ್ಲೆ ಸುನಯ್‌ಗೌಡ ಖಂಡಿಸಿದರು. ಧಾರ್ಮಿಕ ಕೇಂದ್ರಗಳು ಧರ್ಮ ಪ್ರಚಾರದೊಂದಿಗೆ ಸಾರ್ವಜನಿಕವಾಗಿ ಎಲ್ಲಾ ಸಮುದಾಯದವರಿಗೆ ಶಿಕ್ಷಣ, ಆರೋಗ್ಯ, ಸಮಗ್ರ ಅಭಿವೃದ್ಧಿ ಕೆಲಸ ಮಾಡುತ್ತಿವೆ. ಧಾರ್ಮಿಕ ಕೇಂದ್ರಗಳ ಮೇಲೆ ಐಟಿ ದಾಳಿ ಮಾಡುವುದು ನಾಗರಿಕ ಸಮಾಜದ ಧಾರ್ಮಿಕ ಭಾವನೆಯನ್ನು ಕೆಣಕಿದಂತಾಗಿದೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮುಖ್ಯಮಂತ್ರಿಯವರ ಕಾರ್ಯದಕ್ಷತೆ ಜನಪರ ಕಾರ್ಯಗಳಿಂದ ಪ್ರತಿಬಿಂಬವಾಗಬೇಕೆ ವಿನಃ, ಈ ರೀತಿ ಸಮಾಜದ ಶಾಂತಿ ಕದಡುವ ಕೆಲಸಕ್ಕೆ ದಕ್ಷತೆ ಬಳಸಬಾರದು. ತಮ್ಮ ಸ್ವಂತ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರದ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿದೆ. ಇದನ್ನು ಪುನರ್ ಆರಂಭಿಸುವ ಮೂಲಕ ಕಾರ್ಖಾನೆಯ ಕಾರ್ಮಿಕರು, ಕಬ್ಬು ಬೆಳೆಗಾರರ ಹಿತ ಕಾಪಾಡಲು ಮುಖ್ಯಮಂತ್ರಿಗಳು ತಮ್ಮ ದಕ್ಷತೆ ಪ್ರದರ್ಶಿಸಲಿ ಎಂದರು. ಮುಖಂಡರಾದ ವಿಶ್ವಾಸ್, ರುದ್ರೇಶ್, ರಮೇಶ್, ಚಂದ್ರೇಗೌಡ, ಉಮೇಶ್‌ಗೌಡ ಇದ್ದರು.

ಬಂಜೆತನ ತಪಾಸಣೆ ಶಿಬಿರ
ಕೆ.ಆರ್. ನಗರ:
ಇಲ್ಲಿನ ಮಮತ-ಗಂಗಾ ಮೆಟರ್ನಿಟಿ ಸೆಂಟರ್ ಮತ್ತು ಬಂಜೆತನ ಸಂಶೋಧನಾ ಕೇಂದ್ರದ ವತಿಯಿಂದ ಜು.30ರ ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ಕೇಂದ್ರದಲ್ಲಿ ಬಂಜೆತನ ಉಚಿತ ತಪಾಸಣೆ ಶಿಬಿರ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 08223-262809 ಸಂಪರ್ಕಿಸಬಹುದು.

ಉತ್ತರಾಖಂಡ ಸಂತ್ರಸ್ತರಿಗೆ ಚಿಕಿತ್ಸಾ ಸೌಲಭ್ಯ
ಮೈಸೂರು:
ಉತ್ತರಾಖಂಡದ ನೆರೆ ಸಂತ್ರಸ್ತರಿಗೆ ಎಸ್‌ಯುಸಿಐ ತನ್ನ ಮೆಡಿಕಲ್ ಯುನಿಟ್‌ನಿಂದ ಒಂದು ತಿಂಗಳಿಂದ ಚಿಕಿತ್ಸಾ ಸೌಲಭ್ಯ ವ್ಯವಸ್ಥೆ ಮಾಡಿದೆ ಎಂದು ಜಿಲ್ಲಾ ಕಾರ್ಯದರ್ಶಿ ಎಂ.ಶಶಿಧರ ಹೇಳಿದ್ದಾರೆ.  ಎಸ್‌ಯುಸಿಐನ ನಾಲ್ವರು ಸಂಘಟನಾಕಾರರು ಉತ್ತರಾಖಂಡದ ನೆರೆಪೀಡಿತ ಗುಡ್ಡಗಾಡು ಪ್ರದೇಶಗಳಿಗೆ ಸಮೀಕ್ಷೆ  ಮಾಡಿದ್ದರು. ನಂತರ ಡಾ.ಅನ್ಷುಮನ್ ಮಿತ್ರ ಅವರ ನೇತೃತ್ವದಲ್ಲಿ ರುದ್ರಪ್ರಯಾಗದ ಪ್ರಮುಖ ಮಾರುಕಟ್ಟೆ ಸಂಕೀರ್ಣದಲ್ಲಿ ರುದ್ರಪ್ರಯಾಗ ಪ್ರಧಾನ ಕ್ಯಾಂಪ್ ಅನ್ನು ವ್ಯವಸ್ಥೆ ಮಾಡಿಕೊಂಡು ಚಿಕಿತ್ಸೆ ಪ್ರಾರಂಭಿಸಿದರು. ಅಲ್ಲದೆ ಸಂತ್ರಸ್ತ ಹಳ್ಳಿಗಳಲ್ಲಿ ಚಿಕಿತ್ಸೆ ನೀಡಲು ಮೊಬೈಲ್ ಸಂಚಾರಿ ತಂಡವನ್ನು ಗುಡ್ಡಗಾಡಿನ ಹಳ್ಳಿಗಳಿಗೆ ಕಳುಹಿಸಿದ್ದರು. ಇದುವರೆಗೂ 37 ಕ್ಯಾಂಪ್ ಅನ್ನು ವ್ಯವಸ್ಥೆ ಮಾಡಿದ್ದು, ಸುಮಾರು 250 ಹಳ್ಳಿಗಳಲ್ಲಿ ಚಿಕಿತ್ಸೆ ನೀಡಲಾಗಿದೆ. ಸುಮಾರು 5 ಸಾವಿರ ರೋಗಿಗಳಿಗೆ ಚಿಕಿತ್ಸೆ ನೀಡಿದೆ. ಸುಮಾರು 7.5 ಲಕ್ಷ ಔಷಧ ವಿತರಿಸಿದೆ ಎಂದು ಅವರು ತಿಳಿಸಿದ್ದಾರೆ.

ಹಿಂದೂಸ್ತಾನಿ ಸಂಗೀತ
ಮೈಸೂರು:
ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜು.24ರ ಸಂಜೆ 6ಕ್ಕೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಡಾ.ಅಶ್ವಿನಿ ಭಿಡೆ, ದೇಶಪಾಂಡೆ ಅವರಿಂದ ಆಯೋಜಿಸಿದೆ.

ವೆಬಿನಾರ್ ಇ ಹ್ಯಾಕಿಂಗ್
ರೋಟರಿ ಮೈಸೂರು ಮಿಡ್‌ಟೌನ್ ಜು.27ರ ಬೆಳಗ್ಗೆ 9ಕ್ಕೆ ಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ವೆಬಿನಾರ್ ಇ ಹ್ಯಾಕಿಂಗ್ ಕುರಿತು ಕಾರ್ಯಾಗಾರ ಏರ್ಪಡಿಸಿದೆ. ಆಸಕ್ತರು ಜು.24 ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ರಾಜು ಬಳಿಗ ಅವರ ಮೊ. 9845514833 ಸಂಪರ್ಕಿಸಬಹುದು.

ಕಣ್ಣಿನ ಪೊರೆ ತಪಾಸಣೆ
ಜೆಎಸ್‌ಎಸ್ ಹಿರಿಯ ನಾಗರಿಕರ ಸಹಾಯವಾಣಿಯು ಜು.24ರ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ಹಿರಿಯ ನಾಗರಿಕರಿಗೆ ಉಚಿತ ಕಣ್ಣಿನ ಪೊರೆ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಿದೆ. ಹೆಚ್ಚಿನ ವಿವರಕ್ಕೆ ದೂ.0821- 2448138 ಸಂಪರ್ಕಿಸಬಹುದು.

ಮಕ್ಕಳ ಕಾರ್ಯಕ್ರಮ
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ವತಿಯಿಂದ ಟೊಯೊಟಾ ಸುರಕ್ಷಾ ಶಿಕ್ಷಣ ಕಾರ್ಯಕ್ರಮವನ್ನು (ಟಿಎಸ್‌ಇಪಿ) ನಗರದ ಎಕ್ಸೆಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಆರಂಭಿಸಲಾಯಿತು. ಈ ಕಾರ್ಯಕ್ರಮವನ್ನು ರಸ್ತೆ ಸುರಕ್ಷತೆ ಹಾಗೂ 10 ರಿಂದ 15 ವರ್ಷದೊಳಗಿನ ವಿದ್ಯಾರ್ಥಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಡಾ.ರಾಮೇಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಶಾಲಾ ಮುಖ್ಯಸ್ಥ ಮ್ಯಾಥ್ಯೂ, ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಇಎ ಮತ್ತು ಸಿಎಸ್‌ಆರ್ ಉಪಾಧ್ಯಕ್ಷ ಕೆ. ಶ್ರೀಕಾಂತ್ ಅತಿಥಿಗಳಾಗಿ ಭಾಗವಹಿಸಿದ್ದರು.

ಅಧಿಕಾರ ಸ್ವೀಕಾರ
ರೌಂಡ್ ಟೇಬಲ್ ಇಂಡಿಯಾ (ಆರ್‌ಟಿಐ) ಸಂಸ್ಥೆಗೆ 2013-14ನೇ ಸಾಲಿಗೆ ಆಯ್ಕೆಯಾದ ಪದಾಧಿಕಾರಿಗಳು ಇತ್ತೀಚೆಗೆ ಅಧಿಕಾರ ಸ್ವೀಕರಿಸಿದರು. ನೂತನ ಅಧ್ಯಕ್ಷ ಹರೀಶ್ ಶೆಣೈ ಅವರಿಗೆ ನಿರ್ಗಮಿತ ಅಧ್ಯಕ್ಷ ವಿನೀತ್ ಪ್ರಕಾಶ್ ಅಧಿಕಾರ ಹಸ್ತಾಂತರಿಸಿದರು. ಹರೀಶ್ ಶೆಣೈ ಮಾತನಾಡಿ, ಆರ್‌ಟಿಐ ನೀಡುತ್ತಿರುವ ಸೇವೆಯನ್ನು ಮತ್ತಷ್ಟು ವಿಸ್ತರಿಸುವುದೇ ನನ್ನ ಗುರಿಯಾಗಿದೆ ಎಂದರು. ಉತ್ತರಾಖಂಡ್ ನೆರೆ ಸಂತ್ರಸ್ತರಿಗೆ 40 ಲಕ್ಷ ದೇಣಿಗೆ ನೀಡಲಾಯಿತು.


ನ್ಯಾಯಕ್ಕೆ ಮನವಿ
ಮೈಸೂರು:
ಮೈಸೂರು ವಿವಿ ನೌಕರರ ಸಹಕಾರಿ ಪತ್ತಿನ ಸಂಘದ ಸದಸ್ಯತ್ವದಿಂದ ತಮ್ಮನ್ನು ತೆಗೆದು ಹಾಕಲಾಗಿದೆ. ಇದರ ಜತೆಗೆ ತಮ್ಮ ಸಂಬಳದಲ್ಲಿ 6 ಸಾವಿರ ಅನ್ನು ಕಡಿತಗೊಳಿಸಿಕೊಳ್ಳಲಾಗಿದೆ ಎಂದು ಯುವರಾಜ ಕಾಲೇಜಿನ ಪರಿಚಾರಕ ಸಿ. ರೇವಣ್ಣ ದೂರಿದ್ದಾರೆ.
ಸಹಕಾರಿ ಸಂಘಕ್ಕೂ ಕಾಲೇಜಿಗೂ ಯಾವುದೇ ಸಂಬಂಧವಿಲ್ಲ. ನನ್ನ ಸಾಲದ ಮರುಪಾವತಿಗಾಗಿ ಹೋಂ ಟೇಕ್ ಸ್ಯಾಲರಿ ಬಗ್ಗೆ ಹಾಗೂ ನನ್ನ ವೇತನದಲ್ಲಿ ಕಟಾಯಿಸುವ ಬಗ್ಗೆ ಸಂಬಂಧಪಟ್ಟ ಸಹಕಾರ ಸಂಘದ ಆಡಳಿತಕ್ಕೆ ಒಳಪಟ್ಟಿದ್ದು ಈ ಬಗ್ಗೆ ಇನ್ನು ಮುಂದೆ ಪತ್ರ ವ್ಯವಹಾರ ಮಾಡದಂತೆ ಎಚ್ಚರಿಸಿದ್ದಾರೆ. ಇದರಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ತುಂಬಾ ತೊಂದರೆ ಉಂಟಾಗಿದ್ದು ಸಂಬಂಧಪಟ್ಟವರು ನ್ಯಾಯ ಕೊಡಿಸುವಂತೆ ಅವರು ಕೋರಿದ್ದಾರೆ.

ಕ್ಯಾರಿ ಓವರ್‌ಗೆ ಆಗ್ರಹ
ಮೈಸೂರು
: ಡಿಪ್ಲೊಮಾ ಎಲ್ಲಾ ವಿಷಯಗಳಿಗೂ ಕ್ಯಾರಿ ಓವರ್ ಪದ್ಧತಿ ಮುಂದುವರಿಸಲು ಆಗ್ರಹಿಸಿ ನಗರದ ವಿವಿಧ ಡಿಪ್ಲೊಮಾ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟಿಸಿದರು.

ಕೆರೆ ಒತ್ತುವರಿ ತೆರವಿಗೆ ಮನವಿ
ಮೈಸೂರು:
ಕೆ.ಆರ್. ನಗರ ತಾಲೂಕು ಹೆಬ್ಬಾಳಿನ ಕೆರೆ ಒತ್ತುವರಿಯನ್ನು ಕೂಡಲೇ ತೆರವುಗೊಳಿಸಬೇಕು ಎಂದು ಶ್ರೀ ವಿನಾಯಕ ಯುವಕ ಸಂಘ ಒತ್ತಾಯಿಸಿದೆ. ಕಾಂಗ್ರೆಸ್ ಮುಖಂಡ ಹಾಗೂ ಎಪಿಎಂಸಿ ಮಾಜಿ ಸದಸ್ಯ ರಾಜಶೇಖರ್ ಮತ್ತು ಸಂಸದ ಎಚ್. ವಿಶ್ವನಾಥ್ ಅವರು ತಮ್ಮ ಬೆಂಬಲಿಗರನ್ನು ರಕ್ಷಿಸಲು ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹಾಕಿ, ಒತ್ತುವರಿ ತೆರವಿಗೆ ಅಡ್ಡಿಪಡಿಸಿದ್ದಾರೆ. ಅಲ್ಲದೆ ಶಾಸಕ ಸಾ.ರಾ. ಮಹೇಶ್ ಅವರು ಸಹ ಈ ಬಗ್ಗೆ ಹೆಚ್ಚು ಗಮನ ನೀಡಿಲ್ಲ. ಆದ್ದರಿಂದ ಕೂಡಲೇ ಕೆರೆ ಒತ್ತುವರಿ ತೆರವುಗೊಳಿಸಿ ಕೆರೆಯಲ್ಲಿನ ಹೂಳನ್ನು ತೆಗೆಸಬೇಕು ಎಂದು ಸಂಘದ ಆಧ್ಯಕ್ಷ ಎಚ್.ಎಸ್. ಜಲೇಂದ್ರ ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.ಗ್ರಾಮದ ಶೇಖರ್, ಕುಮಾರ್, ಕಮಲಮ್ಮ, ಸುನಂದಮ್ಮ, ಸಾವಿತ್ರಮ್ಮ, ಇಂದ್ರಮ್ಮ, ಲಕ್ಷ್ಮಮ್ಮ ಎಂಬವರು ಒತ್ತುವರಿ ಮಾಡಿಕೊಂಡಿದ್ದಾರೆ. ಅಲ್ಲದೆ ಕೆಲವರು ವಾಣಿಜ್ಯ ಮಳಿಗೆ ನಿರ್ಮಿಸಿಕೊಂಡಿದ್ದಾರೆ. ಆದ್ದರಿಂದ ಕೂಡಲೆ ಒತ್ತುವರಿ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಗ್ರಾಮಸ್ಥರಾದ ರಮೇಶ್, ಸ್ವಾಮಿಗೌಡ, ಮಾದಯ್ಯ ಇದ್ದರು.

ಡೇರಿ ನಿವೇಶನ ಅತಿಕ್ರಮ ಪ್ರವೇಶ
ಹುಣಸೂರು:
ತಾಲೂಕಿನ ಹರಳಹಳ್ಳಿಯಲ್ಲಿ ಎಲ್ಲಾ ಸಮಾಜದವರು ಸೇರಿ ರಚಿಸಿಕೊಂಡಿರುವ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಸೇರಿದ ನಿವೇಶನವನ್ನು ಕೆಲವರು ಅತಿಕ್ರಮ ಪ್ರವೇಶ ಮಾಡಿ ತೊಂದರೆ ನೀಡುತ್ತಿದ್ದಾರೆ ಎಂದು ಸಂಘ ಆರೋಪಿಸಿದೆ. ಹಾಲಿ 180 ಸದಸ್ಯರಿದ್ದು, ಅವರಲ್ಲಿ 40 ಮಂದಿ ಗಿರಿಜನರಿದ್ದಾರೆ. ಸಂಘದ ಉದ್ದೇಶಕ್ಕೆ ಹನಗೋಡು ಗ್ರಾಪಂನಿಂದ 30್ಗ40 ನಿವೇಶನ ಪಡೆದುಕೊಂಡಿದ್ದೇವೆ. ಆದರೆ, ಗಿರಿಜನರ ತಿಮ್ಮಯ್ಯ, ಬಸವಯ್ಯ, ಬಸಪ್ಪ ಎಂಬವರು ತೊಂದರೆ ನೀಡುತ್ತಿದ್ದಾರೆ. ಅಧಿಕಾರಿಗಳ ಸಮಸ್ಯೆ ಹೇಳಿದರೂ ಇವರ ಉಪಟಳ ನಿಯಂತ್ರಿಸಲು ಆಗಿಲ್ಲ. ಇಷ್ಟೆಕ್ಕೆಲ್ಲಾ ಎಂ. ಕೃಷ್ಣಯ್ಯ ಅವರೇ ಕಾರಣರಾಗಿದ್ದಾರೆ. ಇವರೆಲ್ಲರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷೆ ಸುಕನ್ಯಾ ಕೋರಿದ್ದಾರೆ.

ಅಂಬೇಡ್ಕರ್ ಪುತ್ಥಳಿ ಸ್ಥಾಪಿಸಿ
ಟಿ. ನರಸೀಪುರ:
ತಾಲೂಕು ಕಚೇರಿ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌಧದ ಮುಂಭಾಗ ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪಿಸಿ, ಕಾಲೇಜು ಹೊಸ ತಿರುಮಕೂಡಲು ಜೋಡಿ ರಸ್ತೆಗೆ ಅವರ ಹೆಸರನ್ನೆ ನಾಮಕರಣ ಮಾಡುವಂತೆ ಲೋಕೋಪಯೋಗಿ ಇಲಾಖೆಯ ಸಚಿವರನ್ನು ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ. ತಾಪಂ ಸಭಾಂಣದಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಿದ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ದಸಂಸ ಸಂಘಟನೆಯ ಮುಖಂಡರು ಮನವಿ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.