ಮೈಸೂರು

ಕಂದಕಕ್ಕೆ ಬಿದ್ದು ಗಾಯಗೊಂಡಿದ್ದ ಆನೆ ಸಾವು

Published On :

ಕ.ಪ್ರ.ವಾರ್ತೆ ಹುಣಸೂರು ಜು. 27
ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಸಲಗವೊಂದು ಕಂದಕಕ್ಕೆ ಬಿದ್ದು, ತೀವ್ರ ಅಸ್ವಸ್ಥಗೊಂಡು ಮೇಲೇಳಲಾಗದೆ ಶನಿವಾರ ಸಂಜೆ ಮೃತಪಟ್ಟಿದೆ.
ನಾಗರಹೊಳೆ ವಲಯದಲ್ಲಿ ಗಂಡಾನೆಗೆ ಸುಮಾರು 55 ವರ್ಷವಾಗಿದ್ದು, ಕಣ್ಣು ಕಾಣಿಸುತ್ತಿರಲಿಲ್ಲ. ಮೇಯುವ ವೇಳೆ ಆಕಸ್ಮಿಕವಾಗಿ ಕಿರಿದಾದ ಕಂದಕಕ್ಕೆ ಗುರುವಾರ ಬಿದ್ದಿದ್ದು, ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ಗಮನಿಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು. ವಿವಿಧ ಆನೆ ಶಿಬಿರಗಳಿಂದ ಸಾಕಾನೆಗಳ ಸಹಾಯದೊಂದಿಗೆ ಮೇಲೆತ್ತಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಕಂದಕಕ್ಕೆ ಬಿದ್ದ ವೇಳೆ ಒಂದು ಕಾಲು ಮುರಿದಿದ್ದರಿಂದ ಆನೆ ಮತ್ತಷ್ಟು ಅಸ್ವಸ್ಥಗೊಂಡು ಶನಿವಾರ ಸಂಜೆ ಮೃತಪಟ್ಟಿತು.
ಸ್ಥಳಕ್ಕೆ ಹುಲಿ ಯೋಜನೆ ಸಿಸಿಎಫ್ ಹೊಸಮಠ್, ನಾಗರಹೊಳೆ ಹುಲಿ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿ ಗೋಕುಲ್, ಆರ್‌ಎಫ್‌ಒ ಲೋಕೇಶ್ ಮೂರ್ತಿ ಭೇಟಿ ನೀಡಿದ್ದರು. ವನ್ಯಜೀವಿ ವಿಭಾಗದ ವೈದ್ಯ ಡಾ.ಉಮಾಶಂಕರ್ ಚಿಕಿತ್ಸೆ ನೀಡಿದ್ದರು.
ಕಾರ್ಯಾಚರಣೆ: ಮತ್ತಿಗೋಡು ವಲಯದ ತಿತಿಮತಿ ಭಾಗದಲ್ಲಿ ಹಲವಾರು ದಿನಗಳಿಂದ ಬೀಡು ಬಿಟ್ಟು ಉಪಟಳ ನೀಡುತ್ತಿದ್ದ ಕಾಡಾನೆಗಳನ್ನು ಹುಣಸೂರು ಮತ್ತು ಮಡಿಕೇರಿ ವಿಭಾಗದ 170 ಮಂದಿ ಸಿಬ್ಬಂದಿ ಹಾಗೂ 20ಕ್ಕೂ ಹೆಚ್ಚು ಸಾಕಾನೆಗಳು ಸೇರಿ ಎರಡು ದಿನ ಕಾರ್ಯಾಚರಣೆ ನಡೆಸಿ, 14 ಕಾಡಾನೆಗಳನ್ನು ಕಾಡಿಗಟ್ಟಿದ್ದೇವೆ. ಕಾರ್ಯಾಚರಣೆ ವೇಳೆ ತಿತಿಮತಿ-ಬಾಳೆಲೆ ರಸ್ತೆಯನ್ನು ಹಲವು ಗಂಟೆಗಳ ಕಾಲ ಬಂದ್ ಮಾಡಲಾಗಿತ್ತೆಂದು ಅರಣ್ಯ ಸಂರಕ್ಷಣಾಧಿಕಾರಿ ಗೋಕುಲ್ ತಿಳಿಸಿದರು.

ಮತ್ತೊಂದು ಆನೆ ಪಾರು
ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ಮೇವನ್ನರಸಿ ಬಂದಿದ್ದ ಕಾಡಾನೆಯೊಂದು ನಾಡಿನಲ್ಲಿ ಸಾಕಷ್ಟು ದಾಂಧಲೆ ಮಾಡಿ ವಾಪಸ್ ತೆರಳುವ ವೇಳೆ ಆನೆ ಕಂದಕಕ್ಕೆ ಸಿಲುಕಿಕೊಂಡು ಆತಂಕ ಹುಟ್ಟಿಸಿತ್ತು. ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ಹೊರಬಂದ ಕಾಡಾನೆ ಹನಗೋಡಿಗೆ ಸಮೀಪದ ಉಡುವೆಪುರದ ಹೊರವಲಯದಲ್ಲಿ ಕಂದಕದಿಂದ ದಾರಿ ಮಾಡಿಕೊಟ್ಟ ನಂತರ ಕಾಡು ಸೇರಿಕೊಂಡಿತು.
ಅರಣ್ಯದಂಚಿನಲ್ಲಿದ್ದ ಆನೆ ಕಂದಕ ದಾಟುವ ವೇಳೆ ಕೆಸರಿನಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದನ್ನು ಬೆಳಗಿನ ಜಾವ ಗಮನಿಸಿದ ರೈತರು ಅರಣ್ಯ ಇಲಾಖೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯವರು ಸಾಕಷ್ಟು ಪ್ರಯತ್ನಪಟ್ಟರೂ ಕಂದಕದಿಂದ ಆನೆಯನ್ನು ಮೇಲೆತ್ತಲು ಸಾಧ್ಯವಾಗದೆ ಕೊನೆಗೆ ಜೆಸಿಬಿ ಯಂತ್ರ ಬಳಸಿ ಮೇಲೆತ್ತುವ ಪ್ರಯತ್ನವು ವಿಫಲವಾಯಿತು.
ಬೆಳೆ ಹಾನಿ: ಮತ್ತೊಂದು ಪ್ರಕರಣದಲ್ಲಿ ನಾಗರಹೊಳೆ ಉದ್ಯಾನದಿಂದ ಎರಡು ಆನೆಗಳು ಹೊರಬಂದು, ಗ್ರಾಮದ ಮಾದಪ್ಪ ಕಾರಿಯಪುರ ಜಮೀನಿಗೆ ಇಟ್ಟು ಮುಸುಕಿನ ಜೋಳ ತಿಂದು ಹಾಕುತ್ತಿದ್ದನ್ನು ಕಂಡ ರೈತರು, ಕಾಡಾನೆಯನ್ನು ಕಾಡಿಗಟ್ಟುವ ವೇಳೆ ಎದುರಿಗೆ ಸಿಕ್ಕ ಕಾರ್ಯಪ್ಪನ ಮನೆ ಹಾಗೂ ಚಂಗಪ್ಪರ ಮನೆಗೆ ನುಗ್ಗಿ ಸಾಕಷ್ಟು ಹಾನಿ ಮಾಡಿದೆ. ಅಲ್ಲದೆ ಚಂಗಪ್ಪನವರ ಶುಂಠಿ ಬೆಳೆಗೆ ಸಿಂಪಡಿಸಲು ಡ್ರಂನಲ್ಲಿದ್ದ ನೀರು ಮಿಶ್ರಿತ ಕಳೆ ನಾಶಕವನ್ನು ತುಂಬಿದ್ದ ಡ್ರಂನ್ನು ಕೆಳಕ್ಕೆ ಕೆಡವಿ, ಮಾದಪ್ಪರ ಜೋಳ ಜವರಪ್ಪನವರ ಶುಂಠಿ ಬೆಳೆ ನಾಶಪಡಿಸಿ ಕಾಡಿನತ್ತ ಹೊರಟಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.