ಮೈಸೂರು

ಸವಿ ಸವಿ ನೆನಪು ಸಾವಿರ ನೆನಪು...

Published On :

ಕ.ಪ್ರ.ವಾರ್ತೆ ಮೈಸೂರು ಜು. 28
ತೊಂಬತ್ತು ವರ್ಷಗಳಷ್ಟು ಹಳೆಯದಾದ ಶಾರದಾ ವಿಲಾಸ ಬಾಲಕರ ಪ್ರೌಢಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಲ್ಲಿ ಸಂಭ್ರಮ ಮನೆ ಮಾಡಿದ್ದರೆ, ಅವರಿಗೆ ಪಾಠ- ಪ್ರವಚನ ಮಾಡಿದ ಗುರುಗಳ ಮನದಲ್ಲಿ ಸಾರ್ಥಕತೆ ಕಾಣಿಸಿದ ಸನ್ನಿವೇಶ ಭಾನುವಾರ ಕಂಡುಬಂದಿತು.
ಸದರಿ ಶಾಲೆಯಲ್ಲಿ 1975 ರಿಂದ 78ರ ಅವಧಿಯಲ್ಲಿ ಓದಿದ ಹಿರಿಯ ವಿದ್ಯಾರ್ಥಿಗಳ ಬಳಗವು ಭಾನುವಾರ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಗುರುವಂದನಾ ಕಾರ್ಯಕ್ರಮ ಆಯೋಜಿಸಿತ್ತು. 30 ವರ್ಷಗಳ ಹಿಂದೆ ಓದಿದ ಶಾಲೆಗೆ ಮತ್ತೆ ಬರುವ ಸಂತಸದಿಂದ ಮೈಸೂರು, ತುಮಕೂರು ಕಾರವಾರ, ಮಂಗಳೂರು ಕಡೆಗಳಲ್ಲಿರುವ ಹಿರಿಯ ವಿದ್ಯಾರ್ಥಿಗಳು ಕುಟುಂಬ ಸಮೇತ ಭಾಗವಹಿಸಿದ್ದರು.
ಕಾರ್ಯಕ್ರಮದ ಮೊದಲಿಗೆ ವಿದ್ಯಾರ್ಥಿಯಾಗಿದ್ದಾಗ ಹಾಡಿದ ಪ್ರಾರ್ಥನೆ ಗೀತೆಯನ್ನು ಹಿರಿಯ ವಿದ್ಯಾರ್ಥಿಗಳು ತಮ್ಮ ಗುರುಗಳ ಮುಂದೆ ಸುಶ್ರಾವ್ಯವಾಗಿ ಹಾಡಿದರು. ನಂತರ ತಮ್ಮ ಗುರುಗಳ ಬಗ್ಗೆ ಪರಿಚಯ ಮಾಡಿಕೊಡಲು ಬಂದ ರಾಜೇಂದ್ರ ಅವರು ವಿದ್ಯಾರ್ಥಿ ಜೀವನದ ಹಲವು ಸಂಗತಿ ತಿಳಿಸಿದರು. ತಾವು ಮಾಡುತ್ತಿದ್ದ ಕೀಟಲೆಗಳು, ಅದಕ್ಕೆ ಗುರುಗಳ ಪ್ರತಿಕ್ರಿಯೆ ಎಲ್ಲವನ್ನೂ ಎಳೆಎಳೆಯಾಗಿ ಬಿಚ್ಚಿಟ್ಟರು.
ನೂರಾರು ವಿದ್ಯಾರ್ಥಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಗುರುಗಳಾದ ಎನ್.ಎಸ್. ಸೀತಾರಾಮ ಅವರನ್ನು  ರಾಮಚಂದ್ರ, ಸಿ.ವಿ. ರಾಮಚಂದ್ರರಾವ್ ಅವರನ್ನು  ಸೀತಾರಾಮಯ್ಯ, ಡಿ.ವಿ. ನಾರಾಯಣ ಅಯ್ಯರ್ ಅವರನ್ನು  ಜಿ. ದ್ವಾರಕನಾಥ, ಪಿ. ವಿಠಲ್ ಅವರನ್ನು  ಎಸ್.ವಿ. ನಾಗರಾಜ್, ಎನ್.ಎಸ್. ವೆಂಕಟಾಚಲರಾವ್ ಅವರನ್ನು  ಕೆ.ಎಸ್. ಶ್ರೀನಿವಾಸನ್, ಕೆ.ಆರ್. ಕೃಷ್ಣಸ್ವಾಮಿ ಅವರನ್ನು ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ ಆತ್ಮೀಯವಾಗಿ ಸನ್ಮಾನಿಸಿದರು. ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಪಾರ್ಥಸಾರಥಿ, ಕಾರ್ಯದರ್ಶಿ ಎಸ್. ರವಿಶಂಕರ್ ಸಮ್ಮುಖ ವಹಿಸಿದ್ದರು.
ಮುಖ್ಯ ಅತಿಥಿಯಾಗಿದ್ದ ಸಂಸ್ಕೃತ ವಿದ್ವಾಂಸ ಡಾ.ಟಿ.ವಿ. ಸತ್ಯನಾರಾಯಣ ಮಾತನಾಡಿ, ಅನಭಿಷಕ್ತ ಸಾರ್ವಭೌಮರು ಎಂದರೆ ಅಧ್ಯಾಪಕರು. ಅಸಂಖ್ಯಾತ ಶಿಷ್ಯಂದಿರನ್ನು ಬೆಳೆಸಿ ಅವರಿಗೆ ಜ್ಞಾನಧಾರೆ ಎರೆದು ಅವರ ಬಾಳಿಗೆ ನಂದಾದೀಪವಾದವರು ಗುರುಗಳು. ಇಂತಹ ಗುರುಗಳ ಸೇವಾ ಕಾರ್ಯವನ್ನು ನೆನಪಿಸಿಕೊಂಡ ವಿದ್ಯಾರ್ಥಿಗಳು ಧನ್ಯರು. ಇಂದು ಶಿಕ್ಷಣ ವ್ಯಾಪಾರೀಕರಣವಾಗಿದ್ದು, ಯಾವ ದೃಷ್ಟಿಯಿಂದ ನೋಡಿದರೂ ಹಣವೇ ಪ್ರಧಾನ ಪಾತ್ರ ವಹಿಸುತ್ತಿದೆ ಎಂದು ವಿಷಾಧಿಸಿದರು.
ಭೂರಿ ಭೋಜನ: ಶಾರದಾ ವಿಲಾಸ ಬಾಲಕರ ಪ್ರೌಢಶಾಲೆಯ ಇತಿಹಾಸದಲ್ಲೆ ಇದೇ ಪ್ರಪ್ರಥಮ ಬಾರಿಗೆ ಗುರು- ಶಿಷ್ಯರ ಸಮಾಗಮ ಆಯೋಜಿಸಿದ್ದರಿಂದ ಭೂರಿ ಭೋಜನ ಏರ್ಪಡಿಸಲಾಗಿತ್ತು.
ಗುರುವಂದನಾ ಕಾರ್ಯಕ್ರಮವನ್ನು ಭಾರತ್ ಆಸ್ಪತ್ರೆಯ ಡಾ.ಎಂ.ಎಸ್. ವಿಶ್ವೇಶ್ವರ್, ಸಹಪಾಠಿಗಳಾದ ಲೋಕೇಶ್, ದಿವಾಕರ್, ಆರ್. ಅಶೋಕರಾವ್, ದಿವಾಕರ್, ಆರ್. ಅಶೋಕರಾವ್, ಶ್ರೀಧರಪ್ರಸಾದ್, ಶೇಷಪ್ರಕಾಶ್, ಅಶೋಕಾಂದ ಆಯೋಜಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.