ಕಲಾಮಂದಿರ ನೌಕರರ ಬದುಕು ಅತಂತ್ರ
-ಮಾ. ವೆಂಕಟೇಶ್
ಕ.ಪ್ರ.ವಾರ್ತೆ ಮೈಸೂರು ಜು. 29
ಸಾಂಸ್ಕೃತಿಕ ರಾಜಧಾನಿ ಮೈಸೂರಿನ ವಿನೋಬಾ ರಸ್ತೆಯಲ್ಲಿರುವ ಭವ್ಯ ಕಲಾಮಂದಿರದಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ ನೌಕರರ ಬದುಕು ಬವಣೆಯಿಂದ ಕೂಡಿದ್ದು, ಯಾವುದೇ ಭದ್ರತೆಯಿಲ್ಲದೆ ಅತಂತ್ರವಾಗಿದೆ.
ಅಂದಿನ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರು ಅಡಿಗಲ್ಲು ಹಾಕಿದ ಈ ಕಲಾಮಂದಿರವನ್ನು 1985ರಲ್ಲಿ ಆಗಿನ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಉದ್ಘಾಟಿಸಿದ್ದರು.
ಈ ಕಲಾಮಂದಿರದ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಇಲ್ಲಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯು ಇದೇ ಅಂಗಳದಲ್ಲಿದೆ. ಇಲ್ಲಿನ ಕೆಲಸ ಕಾರ್ಯಗಳಿಗೆ ದಿನಗೂಲಿ ನೌಕರರನ್ನು ನೇಮಿಸಿಕೊಳ್ಳಲಾಗಿದೆ.
1985 ರಲ್ಲಿ ಇಲ್ಲಿನ ವಿವಿಧ ಹುದ್ದೆಗಳಿಗೆ 11 ಮಂದಿ ದಿನಗೂಲಿ ನೌಕರರನ್ನು ನೇಮಿಸಿಕೊಳ್ಳಲಾಯಿತು. ಪ್ರಾರಂಭದಲ್ಲಿ ಕೇವಲ ತಿಂಗಳಿಗೆ 280 ಗೌರವಧನ. ಹಂತ ಹಂತವಾಗಿ ಏರಿಕೆಯಾಗಿದ್ದು, ಇದೀಗ 7,700 ಪಡೆಯುತ್ತಿದ್ದಾರೆ. ಆದರೆ ಇವರಿಗೆ ಪಿಎಫ್ ಆಗಲಿ, ಆರೋಗ್ಯ ವ್ಯವಸ್ಥೆಯಾಗಲಿ, ನಿವೃತ್ತ ವೇತನವಾಗಲಿ ಅಥವಾ ಸರ್ಕಾರದ ಇನ್ನಿತರ ಯಾವುದೇ ಸವಲತ್ತು ಲಭ್ಯವಿಲ್ಲ.
ಕಳೆದ 28 ವರ್ಷಗಳಿಂದ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ದೇವೇಂದ್ರರಾವ್ ಎಂಬವರು ಎರಡು ವಾರಗಳ ಹಿಂದೆ ನಿಧರಾದರು. ಇವರಿಗೆ ಯಾವುದೇ ಸವಲತ್ತು ದೊರಕದ ಹಿನ್ನೆಲೆಯಲ್ಲಿ ಅವರ ಕುಟುಂಬದ ಸದಸ್ಯರು ಈಗ ಬದುಕಿನ ನಿರ್ವಹಣೆಗಾಗಿ ಬೀದಿಗೆ ಬೀಳುವಂತಾಗಿದೆ. ಇದೇ ರೀತಿ ಸುದೀರ್ಘ ಸೇವೆ ಸಲ್ಲಿಸಿದ್ದ ಕಾವಲುಗಾರ ವೆಂಕಟಪ್ಪ, ಸ್ವಚ್ಛತೆ ಕೆಲಸ ನಿರ್ವಹಿಸುತ್ತಿದ್ದ ಕಣ್ಣಮ್ಮ ಹಾಗೂ ವಲ್ಲಿಯಮ್ಮ ಅವರು ಸಹ ಮೃತಪಟ್ಟಿದ್ದಾರೆ. ಈಗ ಉಳಿದರುವವರು ಕೇವಲ 8 ಮಂದಿ ಮಾತ್ರ. ಇವರು ಇಲ್ಲಿ ಸ್ವಚ್ಛತೆಗಾಗಿ, ವೇದಿಕೆ ಸಹಾಯಕರಾಗಿ, ಎಲೆಕ್ಟ್ರಿಕಲ್ ಸಹಾಯಕರಾಗಿ, ಮಾಲಿಯಾಗಿ ಹಾಗೂ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮೂರು ಹುದ್ದೆಗಳು ಮಾತ್ರ ಕಾಯಂ: ಇಲ್ಲಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರ ಹುದ್ದೆ, ಬೆರಳಚ್ಚುಗಾರ ಹಾಗೂ ಡಿ ಗ್ರೂಪ್ ಹುದ್ದೆ ಸೇರಿದಂತೆ 3 ಹುದ್ದೆಗಳಿಗೆ ಮಾತ್ರ ಕಾಯಂ ಉದ್ಯೋಗಿಗಳಿದ್ದಾರೆ. ಅಲ್ಲದೆ ಹೊರ ಗುತ್ತಿಗೆಯಿಂದ 6 ಮಂದಿ ನೇಮಿಸಿಕೊಳ್ಳಲಾಗಿದೆ. ಅಲ್ಲದೆ ಈ ಇಲಾಖೆಯ ಕೇಂದ್ರ ಕಚೇರಿಯಿಂದ ಇಬ್ಬರು ಡಿ ಗ್ರೂಪ್ ನೌಕರರ ಎರವಲು ಸೇವೆ ಪಡೆಯಲಾಗಿದೆ.
ಇಲ್ಲಿನ ದಿನಗೂಲಿ ನೌಕರರು ದಿನದ 8 ಗಂಟೆ ಮಾತ್ರ ಕೆಲಸ ನಿರ್ವಹಿಸುತ್ತಿಲ್ಲ. ಅವರು ಕೊಡುವ ವೇತನಕ್ಕೆ ಬೆಳಗ್ಗೆ 9 ರಿಂದ 2 ಹಾಗೂ ಮಧ್ಯಾಹ್ನ 4 ರಿಂದ 9 ಗಂಟೆಯ ಎರಡು ಪಾಳಿಯಲ್ಲಿ ಕೆಲಸ ಮಾಡಬೇಕಿದೆ. ಕಡಿಮೆ ಸಂಬಳ ಹಾಗೂ ಅಧಿಕ ಸಮಯದ ಕೆಲಸದ ಒತ್ತಡದಿಂದ ಹೆಣಗಾಡುತ್ತಾ, ಬದುಕಿನ ಭತೆಗಾಗಿ ಇಲ್ಲಿನ ದಿನಗೂಲಿ ನೌಕರರು ಭವಿಷ್ಯಕ್ಕಾಗಿ ಪರಿತಪಿಸುತ್ತಿದ್ದಾರೆ. ಸರ್ಕಾರ ಈಗಲಾದರೂ ಕಾಯಂಗೊಳಿಸಿ ತಮ್ಮ ಹಾಗೂ ತಮ್ಮನ್ನು ನಂಬಿರುವ ಕುಟುಂಬದ ಹಿತವನ್ನು ಕಾಪಾಡಲಿ ಎಂಬುದು ಇವರೆಲ್ಲರ ಮನವಿ.
1985 ರಿಂದಲೂ 11 ಮಂದಿ ದಿನಗೂಲಿಯಾಗಿ ಕೆಲಸ ಮಾಡುತ್ತಿದ್ದೆವು. ತಿಂಗಳಿಗೆ 280 ನಿಂದ ಆರಂಭವಾದ ನಮ್ಮ ಸಂಬಳ ಈಗ 7,700 ಆಗಿದೆ. ಯಾವುದೇ ಸರ್ಕಾರದ ಸವಲತ್ತಿಲ್ಲ. ಸೇವೆಯಲ್ಲಿ ಇರುವಾಗ ಸತ್ತರೆ ನಯಾಪೈಸೆ ಸಹಾಯವಿಲ್ಲ. ಈಗಾಗಲೇ ಸತ್ತವರ ಕುಟುಂಬಗಳ ಕಥೆ ಚಿಂತಾಜನಕವಾಗಿದೆ. ಇಬ್ಬರು ಕಾಯಿಲೆಯಿಂದ ನರಳುತ್ತಿದ್ದಾರೆ. ಅವರಿಗೆ ಯಾವುದೇ ಆರೋಗ್ಯ ನೆರವಿಲ್ಲ. ಮೂರು ಮಂದಿ ಮುಂದಿನ ವರ್ಷ ನಿವೃತ್ತಿಯಾಗಲಿದ್ದಾರೆ. ಬರಿಗೈಯಲ್ಲಿ ಮನೆಗೆ ತೆರಳಬೇಕು. ಸರ್ಕಾರ ಕಾಯಂ ಮಾಡುತ್ತದೆ ಎಂಬ ನಿರೀಕ್ಷೆಯಲ್ಲಿಯೇ ಬದುಕು ದೂಡಿದೆವು. ಈಗ ಮೈಸೂರಿನವರೇ ಆದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದು ನಮ್ಮನ್ನು ಕಾಯಂ ಮಾಡುವ ಮೂಲಕ ನಮ್ಮೆಲ್ಲರ ಕುಟುಂಬಕ್ಕೆ ನೆರವಾಗಲಿ.
-ರಮೇಶ್, ವೇದಿಕೆ ಸಹಾಯಕ, ಕಲಾಮಂದಿರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

