ಅಪರಾಧಿ ಗಣ್ಯರಿಗೆ ವಿಶೇಷ ಸವಲತ್ತು ಸಲ್ಲ
ಕ.ಪ್ರ.ವಾರ್ತೆ , ಮೈಸೂರು , ಜು. 30
ಅಪರಾಧ ಪ್ರಕರಣದಲ್ಲಿ ಭಾಗಿಯಾದ ಗಣ್ಯರಿಗೆ ಜೈಲಿನಲ್ಲಿ ವಿಶೇಷ ಸವಲತ್ತು ನೀಡುವುದು ಭ್ರಷ್ಟಾಚಾರದ ಒಂದು ಭಾಗವೇ ಆಗಿದೆ ಎಂದು ಒಂದನೆ ಹೆಚ್ಚುವರಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎನ್. ರುದ್ರಮುನಿ ಹೇಳಿದರು.
ನಗರದ ಮರಿಮಲ್ಲಪ್ಪ ಪ್ರೌಢಶಾಲೆಯ ಸಮಾಜ ವಿಜ್ಞಾನ ಸಂಘವು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಜೊತೆಗೂಡಿ ಮಂಗಳವಾರ ಏರ್ಪಡಿಸಿದ್ದ ಸಮಾಜ ವಿಜ್ಞಾನ ಸಂಘದ ಉದ್ಘಾಟನೆ ಮತ್ತು ಕಾನೂನು ನೆರವು ಮತ್ತು ಅರಿವು ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದರು.
ಕಾನೂನು ಎಲ್ಲರಿಗೂ ಒಂದೇ ಆದ ಮೇಲೆ ಅಪರಾಧ ಮಾಡಿದ ಗಣ್ಯರಿಗೇಕೆ ವಿಶೇಷ ಭದ್ರತೆ ಮತ್ತು ವಿಶೇಷ ಸವಲತ್ತು ನೀಡಲಾಗುತ್ತದೆ ಎಂದು ವಿದ್ಯಾರ್ಥಿನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಳ್ಳಾರಿಯ ಗಣಿ ಮಾಲೀಕರೊಬ್ಬರಿಗೆ ಹೈದರಾಬಾದ್ ಜೈಲಿನಲ್ಲಿ ಸಾಮಾನ್ಯರಿಗೆ ನೀಡುವ ಸವಲತ್ತು ನೀಡಲಾಗಿದೆ. ಅಲ್ಲದೆ, ಕೆಲವೆ ಕೆಲವು ಪ್ರಕರಣದಲ್ಲಿ ಅತಿ ಗಣ್ಯರಿಗೆ ಕೆಲವು ಸವಲತ್ತು ನೀಡಲಾಗುತ್ತದೆ. ಆದರೆ, ಬಹಳಷ್ಟು ಪ್ರಕರಣದಲ್ಲಿ ಎಲ್ಲ ಗಣ್ಯರಿಗೂ ವಿಶೇಷ ಸವಲತ್ತು ನೀಡಲಾಗುತ್ತಿದೆ. ಇದು ಭ್ರಷ್ಟಾಚಾರದ ಒಂದು ಭಾಗ. ಈ ಬಗ್ಗೆ ಸಾರ್ವಜನಿಕರು ನ್ಯಾಯಾಲಯಕ್ಕೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುತ್ತದೆ. ಅಪರಾಧಿಗಳಿಗೆ ಆರೋಗ್ಯ ಸರಿ ಇಲ್ಲದಿದ್ದಾಗ ಹೊರಗಿನ ಊಟ ನೀಡಲು ಅವಕಾಶ ಇದೆ. ಅಂತೆಯೆ ಜೈಲಿನಲ್ಲಿ ಟಿವಿಯೂ ಇರುತ್ತದೆ. ಅದು ಎಲ್ಲರೂ ನೋಡಬಹುದು ಎಂದರು.
ಶೀಘ್ರಗತಿ ನ್ಯಾಯಾಲಯ: ಮತ್ತೋರ್ವ ವಿದ್ಯಾರ್ಥಿನಿ ಮಾತನಾಡಿ, ಪ್ರಕರಣದ ವಿಲೇವಾರಿ ನಿಧಾನವಾಗಿ ನಡೆಯುವುದರಿಂದ ನೊಂದವರಿಗೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ರಾಜ್ಯದ ಜನಸಂಖ್ಯೆ 6 ಕೋಟಿ ಇದೆ. ಆದರೆ ರಾಜ್ಯದಲ್ಲಿ 1200 ಮಂದಿ ನ್ಯಾಯಾಧೀಶರು ಮಾತ್ರ ಇದ್ದೇವೆ. ಪ್ರತಿದಿನ ಹೆಚ್ಚೆಂದರೆ ಒಬ್ಬ ನ್ಯಾಯಾಧೀಶರು 4 ಪ್ರಕರಣ ವಿಲೇವಾರಿ ಮಾಡಬಹುದು. ಆದರೆ ಪ್ರತಿದಿನ ನ್ಯಾಯಾಲಯಕ್ಕೆ 10 ಪ್ರಕರಣ ದಾಖಲಾಗುತ್ತವೆ. ಈಗ ಹೆಚ್ಚುವರಿಯಾಗಿ 6 ಪ್ರಕರಣ ಸೇರ್ಪಡೆಯಾಗುತ್ತದೆ. ಅಲ್ಲದೆ, ಹಲವು ಪ್ರಕರಣಗಳಲ್ಲಿ ಸಾಕ್ಷಿ ಸಿಗುವುದಿಲ್ಲ. ಇದಲ್ಲದೆ ಕಾನೂನಿನಲ್ಲಿಯೂ ಕೆಲವೊಂದು ತೊಡಕು ಇದೆ. ಇತ್ತೀಚೆಗೆ ಶೀಘ್ರಗತಿ ನ್ಯಾಯಾಲಯ ಬಂದಿರುವುದರಿಂದ ಪ್ರಕರಣ ವಿಲೇವಾರಿ ಬೇಗನೆ ನಡೆಯುತ್ತಿದೆ ಎಂದರು. ನಕ್ಸಲರಿಗೆ ಸಾಹಿತಿಗಳ ಬೆಂಬಲ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ನ್ಯಾಯಾಧೀಶರು, ಸಂವಿಧಾನದ ವಾಕ್ ಸ್ವಾತಂತ್ರ್ಯದ ಅನುಸಾರ ಅವರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ. ಆದ್ದರಿಂದ ಕ್ರಮ ಕೈಗೊಳ್ಳಲು ಆಗದು. ಆದರೆ ನಕ್ಸಲಿಸಂ ಹೆಸರಿನಲ್ಲಿ ಬಡವರು, ಪೊಲೀಸರನ್ನು ಹತ್ಯೆ ಮಾಡುವುದು ಅಪರಾಧ. ಕಾನೂನನ್ನು ಕೈಗೆತ್ತಿಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದ ಅವರು ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಉತ್ತರಿಸುತ್ತ, ರಾಜ್ಯ ಸಾರಿಗೆ ಬಸ್ನಲ್ಲಿ ಟಿಕೆಟ್ ನೀಡದ ಕಂಡಕ್ಟರ್ ವಿರುದ್ಧ ಕೆಎಸ್ಸಾರ್ಟಿಸಿ ಡಿಸಿಗೆ ದೂರು ನೀಡುವಂತೆ ಸಲಹೆ ನೀಡಿದರು. ಬಳಿಕ ಮಾತನಾಡಿದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಬಿ. ನಂದಕುಮಾರ್ ಅವರು, ಮಕ್ಕಳು ತಂದೆ- ತಾಯಿಯ ಕಷ್ಟ ಅರಿತುಕೊಳ್ಳಬೇಕು. ಸ್ಕೂಟರ್ ತೆಗೆದುಕೊಟ್ಟರೆ ಓದುವುದಾಗಿ ಪಟ್ಟು ಹಿಡಿಯಬಾರದು. ಆರ್ಥಿಕವಾಗಿ ತೀರ ಹಿಂದುಳಿದ ಪೋಷಕರು ಲಂಚಕ್ಕೆ ಕೈ ಒಡ್ಡುವ ಪರಿಸ್ಥಿತಿ ತರಬೇಡಿ. ನಮ್ಮ ಆರ್ಥಿಕ ಶಕ್ತಿ ಮೀರಿ ಆಸೆ ಪಡಬಾರದು ಎಂದು ಹೇಳಿದರು. ಮರಿಮಲ್ಲಪ್ಪನವರ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಪ್ರೊ. ಕೆ.ಎನ್. ಪಂಚಾಕ್ಷರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯಿನಿ ಮಂಗಳ ಮುದ್ದುಮಾದಪ್ಪ, ಶೈಕ್ಷಣಿಕಾಧಿಕಾರಿ ಎಸ್. ಕಲ್ಮರಡಪ್ಪ, ವಕೀಲೆ ಬಿ. ರಾಜರಾಜೇಶ್ವರಿ ಇದ್ದರು.
ಭ್ರಷ್ಟಾಚಾರದ ಬಗ್ಗೆ ನಾವು ಮಾತನಾಡುತ್ತೇವೆ. ಆದರೆ, ನಾವೆ ಹಲವು ಸಂದರ್ಭದಲ್ಲಿ ಭ್ರಷ್ಟಾಚಾರಕ್ಕೆ ಉತ್ತೇಜನ ನೀಡುತ್ತೇವೆ. ನಾವು ವ್ಯವಸ್ಥೆಯನ್ನು ದೂರುವ ಬದಲು ಲಂಚ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು.
ನ್ಯಾ. ಎನ್. ರುದ್ರಮುನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

