ನಾಳೆಯಿಂದ ವಿಶ್ವ ಸ್ತನ್ಯಪಾನ ಸಪ್ತಾಹ
ಕ.ಪ್ರ.ವಾರ್ತೆ , ಮೈಸೂರು , ಜು. 30
ಜೆಎಸ್ಎಸ್ ಆಸ್ಪತ್ರೆ, ಮೈಸೂರು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ರೋಟರಿ ಇನ್ನರ್ ವ್ಹೀಲ್ ಮೈಸೂರು ಸೆಂಟ್ರಲ್ ಸಂಯುಕ್ತಾಶ್ರಯದಲ್ಲಿ ಆ. 1 ರಿಂದ 7 ರವರೆಗೆ ಮೈಸೂರಿನಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಹಮ್ಮಿಕೊಳ್ಳಲಾಗಿದೆ.
ಸ್ತನ್ಯಪಾನಕ್ಕೆ ಸೂಕ್ತವಾದ ಬೆಂಬಲ ತಾಯಂದಿರ ಸಮೀಪಕ್ಕೆ ಎಂಬ ಸಂದೇಶದೊಂದಿಗೆ ಈ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಆ. 1ರ ಮಧ್ಯಾಹ್ನ 2.30ಕ್ಕೆ ಜೆಎಸ್ಎಸ್ ಆಸ್ಪತ್ರೆಯ ರಾಜೇಂದ್ರ ಭವನದಲ್ಲಿ ಸಪ್ತಾಹಕ್ಕೆ ಚಾಲನೆ ನೀಡಲಾಗುವುದು. ಮುಖ್ಯ ಅತಿಥಿಯಾಗಿ ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಅತಿಥಿಗಳಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಂ. ಮಾಲೇಗೌಡ, ಜೆಎಸ್ಎಸ್ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಎಚ್. ಬಸವನಗೌಡಪ್ಪ, ಜೆಎಸ್ಎಸ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಎಂ. ಗುರುಸ್ವಾಮಿ, ಡಾ.ಎಚ್.ಆರ್. ಭಕ್ತವತ್ಸಲ ಭಾಗವಹಿಸುವರು ಎಂದು ಮಕ್ಕಳ ತಜ್ಞ ಡಾ.ಡಿ. ನಾರಾಯಣಪ್ಪ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಒಂದು ವಾರ ನಗರದ ವಿವಿಧ ಆಸ್ಪತ್ರೆಗಳಲ್ಲಿ ಸ್ತನ್ಯಪಾನದ ಬಗೆಗೆ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ. ಆ. 2ರ ಬೆಳಗ್ಗೆ 11ಕ್ಕೆ ತುಳಸಿದಾಸ ಆಸ್ಪತ್ರೆಯಲ್ಲಿ ಡಾ.ಎಸ್.ಎನ್. ಪ್ರಶಾಂತ್, ಡಾ. ಗಣಪತಿ ಉಪ್ಪಿನಾಳ್, ಆ. 3ರ ಬೆಳಗ್ಗೆ 11ಕ್ಕೆ ಬನ್ನಿಮಂಟಪದ ಜೆಎಸ್ಎಸ್ ಅರ್ಬನ್ ಹೆಲ್ತ್ ಸೆಂಟರ್ನಲ್ಲಿ ಡಾ. ರಮಾ, ಆ. 4ರ ಬೆಳಗ್ಗೆ 11ಕ್ಕೆ ಜಯನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಾ.ಸಿ. ಚಂದ್ರಶೇಖರ್, ಆ. 5ರ ಬೆಳಗ್ಗೆ 11ಕ್ಕೆ ವಿವಿ ಪುರಂ ಮೆಟರ್ನಿಟಿ ಆಸ್ಪತ್ರೆಯಲ್ಲಿ ಡಾ. ಸಾರಿಕಾ ಪ್ರಸಾದ್, ಆ. 6ರ ಬೆಳಗ್ಗೆ 11ಕ್ಕೆ ಮಿಷನ್ ಆಸ್ಪತ್ರೆಯಲ್ಲಿ ಡಾ. ಪಂಚಾಕ್ಷರಿ, ಡಾ.ಕೆ.ಸಿ. ಕಾರಟ್ ಉಪನ್ಯಾಸ ನೀಡುವರು. ಮುಕ್ತಾಯ ಸಮಾರಂಭವು ಆ. 7ರ ಮಧ್ಯಾಹ್ನ 2ಕ್ಕೆ ಮೈಸೂರು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆಯಲಿದ್ದು, ಎಂಎಂಸಿ ಡೀನ್ ಡಾ. ಗೀತಾ ಕೆ. ಅವಧಾನಿ, ಡಾ.ಬಿ. ಕೃಷ್ಣಮೂರ್ತಿ, ಡಾ.ಎಂ.ಆರ್. ಸವಿತಾ, ಡಾ.ಬಿ.ಎಚ್. ಶ್ರೀನಿವಾಸ ಭಾಗವಹಿಸುವರು ಎಂದರು.
ರಾಜ್ಯಕ್ಕೆ ಪ್ರಶಸ್ತಿ: ಮಗು ಹುಟ್ಟಿದ ಒಂದು ಗಂಟೆಯೊಳಗೆ ತಾಯಿ ಎದೆ ಹಾಲು ಕುಡಿಸುವುದು, ಆಸ್ಪತ್ರೆಗಳಲ್ಲೇ ಹೆರಿಗೆ ಆಗುವ ಪ್ರಕರಣ ಆಧರಿಸಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಪ್ರಶಸ್ತಿ ನೀಡಿದೆ. ಆದರೂ ನಾವು ಇನ್ನಷ್ಟು ದೂರ ಕ್ರಮಿಸಬೇಕಿದೆ. ಮಗು ಹುಟ್ಟಿದ ಅರ್ಧಗಂಟೆ ಅಥವಾ ಒಂದು ಗಂಟೆಯೊಳಗೆ ತಾಯಿ ಎದೆ ಹಾಲು ಕುಡಿಸುವುದು, ಆರು ತಿಂಗಳವರೆಗೆ ಎದೆ ಹಾಲನ್ನು ಯಥೇಚ್ಛವಾಗಿ ಕುಡಿಸುವುದು ಹಾಗೂ ಆರು ತಿಂಗಳ ನಂತರ ಮಗುವಿಗೆ ಘನ ಪದಾರ್ಥ ಆಹಾರದೊಂದಿಗೆ ಎರಡು ವರ್ಷಗಳವರೆಗೆ ಎದೆ ಹಾಲು ಕುಡಿಸುವ ಕಡೆಗೆ ತಾಯಂದಿರು ಹೆಚ್ಚಿನ ಗಮನ ನೀಡಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಮಗು ಹುಟ್ಟಿದ ತಕ್ಷಣ ಹಾಲು ಕುಡಿಸುವ ತಾಯಂದಿರ ಸಂಖ್ಯೆ ಶೇ. 88, ಆರು ತಿಂಗಳವರೆಗೆ ಮಗುವಿಗೆ ಯಥೇಚ್ಛವಾಗಿ ಎದೆ ಹಾಲು ಕುಡಿಸುವ ತಾಯಂದಿರ ಸಂಖ್ಯೆ ಶೇ. 42, ರಾಷ್ಟ್ರದಲ್ಲಿ ಶೇ. 42, ಎರಡು ವರ್ಷದವರೆಗೆ ಘನ ಪದಾರ್ಥದೊಂದಿಗೆ ಎದೆ ಹಾಲು ಕುಡಿಸುವವರ ತಾಯಂದಿರ ಸಂಖ್ಯೆ ಶೇ. 43, ದೇಶದಲ್ಲಿ ಶೇ. 33 ರಷ್ಟಿದೆ. ರಾಜ್ಯದಲ್ಲಿ ಶೇ. 99 ರಷ್ಟು ಹೆರಿಗೆಗಳು ಆಸ್ಪತ್ರೆಗಳಲ್ಲಿಯೇ ಆಗುತ್ತಿದೆ. ಒಂದು ವೇಳೆ ಮಗುವಿಗೆ ತಾಯಿ ಎದೆ ಹಾಲು ಕುಡಿಸದಿದ್ದರೆ ಚಿಕ್ಕ ವಯಸ್ಸಿನಲ್ಲಿ ಅಲರ್ಜಿ, ಅಸ್ತಮಾ, ವಾಂತಿಭೇದಿ ರೋಗಗಳು ಕಾಣಿಸಿಕೊಳ್ಳುತ್ತವೆ ಎಂದು ಎಚ್ಚರಿಸಿದರು. ಡಾ. ಕೆ. ಜಗದೀಶ್, ಡಾ.ಎಚ್.ಆರ್. ಭಕ್ತವತ್ಸಲ, ಡಾ.ಕೆ.ಬಿ. ಚೇತಕ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

