ಮೈಸೂರು

ಸ್ವಾಮಿ, ಸಹಜ ಸಾಗುವಳಿಯಲ್ಲೇ ಆನಂದ!

Published On :

ಕ.ಪ್ರ.ವಾರ್ತೆ ,  ಮೈಸೂರು ,  ಜು. 30
ರಾಜ್ಯದ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಜಿಲ್ಲೆಯ ಹೆಗ್ಗಡದೇವನಕೋಟೆಯೂ ಒಂದು. ಇಲ್ಲಿ ಕಬಿನಿ, ತಾರಕಾ ಹಾಗೂ ನುಗು ಜಲಾಶಯಗಳಿದ್ದರೂ ತಾಲೂಕಿನ ರೈತರಿಗೆ ಹೇಳಿಕೊಳ್ಳುವ ಮಟ್ಟಿಗೆ ನೀರಾವರಿ ಸೌಲಭ್ಯವಾಗಿಲ್ಲ. ಸುಮಾರು ನಾಲ್ಕು ದಶಕಗಳ ಹಿಂದೆ ತಾರಕಾ ನಾಲೆ ನಿರ್ಮಿಸಿದ್ದರೂ ಯಾವ ವರ್ಷ ನೀರು ಬರುತ್ತದೋ ಎಂಬುದು ಯಾರಿಗೂ ಗೊತ್ತಿಲ್ಲ. ತಾರಕ ಏತ ನೀರಾವರಿ ಯೋಜನೆಗೂ ಕಾವೇರಿ ವಿವಾದದ ಗುಮ್ಮ.
ಇಷ್ಟೆಲ್ಲಾ ಇಲ್ಲಗಳ ನಡುವೆಯೂ ಎಚ್.ಡಿ. ಕೋಟೆ ತಾಲೂಕು ಕೆ.ಜಿ. ಹುಂಡಿಯ ರೈತ ಆರ್. ಸ್ವಾಮಿಆನಂದ್ ಅವರ 6 ಎಕರೆಯ ತೋಟ ವೈವಿಧ್ಯಮಯ ಬೆಳೆಗಳಿಂದ ನಿತ್ಯ ಹರಿದ್ವರ್ಣ ಕಾಡಿನಂತೆ ಕಂಗೊಳಿಸುತ್ತಿದೆ. ಇಲ್ಲಿಗೇನು ತಾರಕಾ ನಾಲೆಯಿಂದ ನೀರು ಹರಿದುಬಂದಿಲ್ಲ. ಮಳೆಯಾಶ್ರಯದಲ್ಲೇ ಈ ತೋಟ ಅಭಿವೃದ್ಧಿಪಡಿಸಿರುವುದು ವಿಶೇಷ. ಬೇಸಿಗೆಯಲ್ಲಿ ಈ ತೋಟ ಪ್ರವೇಶಿಸಿದರೆ ಕೂಲ್ ಕೂಲ್. ಏಕೆಂದರೆ 5 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ಉಷ್ಣಾಂಶ. ಸೂರ್ಯನ ಕಿರಣಗಳು ನೆಲಕ್ಕೆ ಬೀಳದಂತೆ ವೈವಿಧ್ಯಮ ಬೆಳೆ ಬೆಳೆದಿರುವುದು ಇದಕ್ಕೆ ಕಾರಣ.
ಇವರು ತಾತ- ಮುತ್ತಾತಂದಿರ ಕಾಲದಿಂದಲೂ ಜಮೀನಿಗೆ ರಾಸಾಯನಿಕ ಗೊಬ್ಬರ ಹಾಕುವುದಿಲ್ಲ. ಆದರೂ ಸ್ವಾಮಿಆನಂದ್ ಅವರ ತಂದೆ ರಾಮೇಗೌಡ ಒಮ್ಮೆ ಮನೆಗೆ ರಾಸಾಯನಿಕ ಗೊಬ್ಬರ ತಂದು ಜಮೀನಿನಲ್ಲಿದ್ದ ಮುಸುಕಿನ ಜೋಳ ಬೆಳೆಗೆ ಹಾಕಿದರು. ಕಾಳುಗಳೆಂದು ಭಾವಿಸಿ ಕೋಳಿಗಳು ತಿಂದು ಸಾವಿಗೀಡಾದವು. ಆಗ ಸ್ವಾಮಿಆನಂದ್ ಅವರ ತಾಯಿ ಚನ್ನಮ್ಮ, 'ಆಯ್ಕಂಡ ತಿನ್ನೋ ಕೋಳಿಗಳೇ ಉಳಿಲಿಲ್ಲ. ಇನ್ ಈ ಗೊಬ್ರ ಹಾಕಿರೋ ಬೆಳೆ ತಿಂದ್ರೆ ಓಡೋಡ ಮನ್ಸ್ರುಬದ್ಕಾರ' ಅಂತ ತಕರಾರು ತೆಗೆದರು. ಅದೇ ಮೊದಲು, ಅದೇ ಕೊನೆ. ಮತ್ತೆ ಇವರ ಜಮೀನಿನಲ್ಲಿ ಇವತ್ತಿನ ತನಕ ರಾಸಾಯನಿಕ ಗೊಬ್ಬರ ಹಾಕಿಲ್ಲ.
ಮೊದಲೆಲ್ಲಾ ಈ ಜಮೀನಿನಲ್ಲಿ ನೆಲಗಡಲೆ, ಜೋಳ, ರಾಗಿ, ಹೆಸರು, ಉದ್ದು, ಬತ್ತ ಬೆಳೆಯುತ್ತಿದ್ದರು. ಕಾಡಂಚಿನ ಗ್ರಾಮವಾದ್ದರಿಂದ ಆನೆಗಳ ಜೊತೆಗೆ ಹಂದಿಗಳ ಕಾಟ. ರಾತ್ರಿಪೂರ ಎಚ್ಚರವಾಗಿದ್ದು, ಡಬ್ಬ ಬಡಿಯುತ್ತಾ, ಬೆಂಕಿ ಹಾಕುತ್ತಾ ಕಾಡು ಪ್ರಾಣಿ ಓಡಿಸಬೇಕಿತ್ತು. ಇದರಿಂದ ಪಾರಾಗಲು ನಂತರ ಸೂರ್ಯಕಾಂತಿ ಹಾಕಿದರು. ಆದರೆ, ಮಳೆಯಿಂದ ಫಸಲು ಹಾಳಾಯಿತು. ಹಿಪ್ಪು ನೇರಳೆ, ಮುಸುಕಿನ ಜೋಳ ಬೆಳೆಯುತ್ತಿದ್ದರು.
ಇದಾದ ನಂತರ ಅಂದರೆ ಕಳೆದ ಆರು ವರ್ಷಗಳಿಂದ ತೋಟಗಾರಿಕೆ ಬೆಳೆಗಳತ್ತ ಗಮನಹರಿಸಿದರು. ತೆಂಗು, ಅಡಕೆ, ಬಾಳೆ, ಮಾವು, ಸೀಬೆ, ಸಪೋಟ, ನಿಂಬೆ, ಕಾಫಿ, ಪಪ್ಪಾಯಿ, ಕೋಕ್, ಮೆಣಸು, ವಿಳ್ಯದೆಲೆ ಬೆಳೆಯತೊಡಗಿದರು. ಅಲ್ಲದೆ, 350 ತೇಗದ ಮರ ಬೆಳೆಸಿದ್ದಾರೆ. ಇವು ಮುಂಬರುವ ವರ್ಷಗಳಲ್ಲಿ ಕೋಟ್ಯಂತರ ರು. ಬೆಲೆ ಬಾಳಲಿವೆ.
ಬತ್ತ ಬೆಳೆಯಲು ಮಾತ್ರ ಜಮೀನು ಉಳುಮೆ ಮಾಡಲಾಗುತ್ತದೆ. ನಾಟಿ, ಕಳೆ, ಕೊಯ್ಲು ಮಾಡಲಾಗುತ್ತದೆ. ಉಳಿದಂತೆ ಯಾವುದೇ ಬೆಳೆಗಳಿಗೆ ಯಾವ ಆರೈಕೆ ಮಾಡುತ್ತಿಲ್ಲ. ಸುಭಾಷ್ ಪಾಳೇಕರರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಅನುಸರಿಸಲಾಗುತ್ತಿದ್ದರೂ ಜೀವಾಮೃತ ಕೂಡ ನೀಡುತ್ತಿಲ್ಲ. ಏಕೆಂದರೆ ಅವರದ್ದು ಅಗ್ರೋ ಫಾರೆಸ್ಟ್ರಿ. ಅಲ್ಲಿ ಅಲ್ಪಾವಧಿ, ಮಧ್ಯಮಾವಧಿ ತಳಿಗಳಿಗೆ ಅವಕಾಶವಿಲ್ಲ. ಗಿಡಗಳಿಗೆ ಹೆಚ್ಚು ಅವಕಾಶ.  ನೈಸರ್ಗಿಕ ಕೃಷಿ. ಜಮೀನು ಫಲವತ್ತಾಗಿದೆ. ಅದರಲ್ಲಿಯೇ ಜೀವಾಣುಗಳು, ಎರೆಹುಳುಗಳು ಇರುತ್ತದೆ. ಇದೊಂದು 300 ವೈವಿಧ್ಯಮಯ ಗಿಡಗಳಿರುವ ಪ್ರಾಕೃತಿಕ ಮರಗಳ ಪ್ರದೇಶ (ನ್ಯಾಚುರಲ್ ವುಡ್ ಏರಿಯಾ). ಈ ರೀತಿ ಇರುವುದರಿಂದಲೇ ಸಾಮಾನ್ಯವಾಗಿ ಕಾಡಿನಲ್ಲಿ ಮಾತ್ರ ಕಾಣಸಿಗುವ ಏಷ್ಯನ್ ಬರ್ಡ್ ಫ್ಲೈ ಕ್ಯಾಚರ್ ಎಂಬ ಪಕ್ಷಿಯೂ ಈ ಜಮೀನಿಗೆ ಬರುತ್ತದೆ. ಕಾಡಿನಲ್ಲಿ ಕಾಣಸಿಗುವ ಹಕ್ಕಿಪಕ್ಷಿಗಳು, ಚಿಟ್ಟೆಗಳು ನೂರಾರು ಸಂಖ್ಯೆಯಲ್ಲಿ ಬರುತ್ತವೆ.
ಹಸಿರು ಆರ್ಗಾನಿಕ್ ಶಾಪ್
ಸ್ವಾಮಿ ಆನಂದ್ ಅವರು ರೈತರಿಂದ ಗ್ರಾಹಕನವರೆಗೆ ಕೃಷಿ ಉತ್ಸನ್ನಗಳನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೇ ನೇರವಾಗಿ ತಲುಪಿಸಬೇಕು ಎಂಬ ಸದುದ್ದೇಶದಿಂದ ಜಯಲಕ್ಷ್ಮೀಪುರಂನಲ್ಲಿ ಹಸಿರು ಆರ್ಗಾನಿಕ್ ಶಾಪ್- ಬೆಳೆಗಾರರಿಂದ ಬಳಕೆದಾರರವರೆಗೆ ನಡೆಸುತ್ತಾರೆ. ಇಲ್ಲಿ ಈಗಾಗಲೇ ಮಾವು ಹಾಗೂ ದ್ರಾಕ್ಷಿ ಮೇಳ ನಡೆಸಿದ್ದಾರೆ. ಗ್ರಾಹಕರಿಗೆ ಬೇಕಾದ ಎಲ್ಲಾ ಸಾವಯವ ಕೃಷಿ ಉತ್ಪನ್ನಗಳು ಇಲ್ಲಿ ಲಭ್ಯ.
ನೈಸರ್ಗಿಕ ಕೃಷಿ ಕೃತಿಯ ಲೇಖಕ
ಪತ್ರಕರ್ತರಾಗಿಯೂ ದಶಕಗಳ ಕಾಲ ದುಡಿದಿರುವ ಸ್ವಾಮಿಆನಂದ್ ಸುಭಾಷ್ ಪಾಳೇಕಾರರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಕೃತಿಯ ಲೇಖಕ. ಈ ಕೃತಿ 16 ಮುದ್ರಣಗಳನ್ನು ಕಂಡಿದೆ. ಈವರೆಗೆ 65,000 ಪ್ರತಿಗಳು ಮಾರಾಟವಾಗಿವೆ. ಅಲ್ಲದೆ, ಲೇಖಕನ ಮೊದಲ ಕೃತಿಗೆ ನೀಡುವ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯು 2005 ರಲ್ಲಿ ಸಂದಿದೆ.
ರೈತರು ಒಂದನ್ನು ಬೆಳೆದು ಉಳಿದಿದ್ದನ್ನು ಮಾರುಕಟ್ಟೆಯಿಂದ ತರುವುದನ್ನು ಕೈಬಿಡಬೇಕು. ಬದಲಿಗೆ ತಮಗೆ ಬೇಕಾದ್ದನ್ನು ಕಡಿಮೆ ಪ್ರಮಾಣದಲ್ಲಿ ಬೆಳೆಯಬೇಕು. ಅಕ್ಕಪಕ್ಕದವರನ್ನು ನೋಡಿಕೊಂಡು ಒಂದೇ ಬೆಳೆ ಹಾಕಿ, ಉತ್ಪಾದನೆ ಹೆಚ್ಚಿ, ದರ ಕುಸಿತಾಗ ಕಣ್ಣೀರು ಹಾಕುವುದರಕ್ಕಿಂತ ಕಡಿಮೆ ಪ್ರಮಾಣದಲ್ಲಿ ಬಹು ಧಾನ್ಯ ಪದ್ಧತಿ ಅನುಸರಿಸಬೇಕು. ಆಗ ಉತ್ತಮವಾಗಿ ಮಾರಾಟ ಮಾಡಬಹುದು. ಕೃಷಿಯಿಂದ ನಷ್ಟ ಎಂಬುದು ಸುಳ್ಳು. ಕೃಷಿಗೆ ಪೂರಕ ವಾತಾವರಣ ನಿರ್ಮಿಸಬೇಕು. ಬೆಳೆ ನಿಯಂತ್ರಣ ಮಾಡಬೇಕು.
   ಆರ್. ಸ್ವಾಮಿಆನಂದ್, ಕೆ.ಜಿ. ಹುಂಡಿ

-ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.