ಕಾಡಾನೆ ದಾಳಿ: ಲಕ್ಷಾಂತರ ರು. ಬೆಳೆ ನಷ್ಟ
ಕ.ಪ್ರ.ವಾರ್ತೆ ಹುಣಸೂರು ಜೂ. 7
ತಾಲೂಕಿನ ಹನಗೋಡು ಭಾಗದಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು, ಕಳೆದ ಐದಾರು ತಿಂಗಳಿಂದ ಲಕ್ಷಾಂತರ ರುಪಾಯಿ ಬೆಳೆಹಾನಿ ಜತೆಗೆ ಜಾನುವಾರುಗಳ ಸಾವಿನ ಸರಣಿ ಮುಂದುವರಿದಿದೆ.
ಇತ್ತೀಚೆಗೆ ಹನಗೋಡು ಹೋಬಳಿಗೆ ಸೇರಿದ ಕಚುವಿನಹಳ್ಳಿ, ನೇರಳಕುಪ್ಪೆ, ಬಿಲ್ಲೇನಹೊಸಳ್ಳಿ, ಕೊಳವಿಗೆ, ಕೋಣನ ಹೊಸಳ್ಳಿ, ಕೆ.ಜಿ ಹೆಬ್ಬನಕುಪ್ಪೆ, ಸಿಂಡೇನಹಳ್ಳಿ, ನೇಗತ್ತೂರು, ಅಬ್ಬೂರು, ಭರತವಾಡಿ, ವೀರನಹೊಸಳ್ಳಿ, ಹರಳಳ್ಳಿ, ಪೆಂಜಳ್ಳಿ, ಗುರುಪುರ, ಸರ್ವೇ ನಂ. 25 ಮತ್ತಿತರ ಗ್ರಾಮಗಳಲ್ಲಿ ಕಾಡಾನೆ, ಹುಲಿ, ಚಿರತೆ, ಕಾಡು ಹಂದಿಗಳ ಹಾವಳಿಗೆ ರೈತರು ಕಂಗಾಲಾಗಿ ಹೋಗಿದ್ದಾರೆ.
ಬುಧವಾರ ಒಂಟಿಸಲಗವೊಂದು ಕೊಟ್ಟಿಗೆಗೆ ನುಗ್ಗಿ ಜಾನುವಾರುಗಳಿಗೆ ಗಾಯ ಮಾಡಿ, ಸಾಕಷ್ಟು ಬೆಳೆ ನಷ್ಟ ಉಂಟು ಮಾಡಿದ್ದರೆ, ಗುರುವಾರ ಹನಗೋಡಿಗೆ ಸಮೀಪದ ಕೆ.ಜಿ. ಹೆಬ್ಬನಕುಪ್ಪೆಯ ಗ್ರಾಮದ ಸಿ.ಎ. ಚಂಗಪ್ಪರಿಗೆ ಸೇರಿದ ಅವೋಕ ಫಾರಂನ ಮಾವಿನ ತೋಟಕ್ಕೆ ಕಾಡಾನೆ ಹಿಂಡುದಾಳಿ ಇಟ್ಟು 25ಕ್ಕೂ ಹೆಚ್ಚು ಫಲಭರಿತ ಮಾವಿನ ಮರಗಳನ್ನು ನಾಶಪಡಿಸಿದ್ದು, ಲಕ್ಷ ರು.ಗೂ ಹೆಚ್ಚು ನಷ್ಟ ಉಂಟಾಗಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿರುವ ಗ್ರಾಮಸ್ಥರಿಗೆ ಆನೆ ಹಾವಳಿಯೆನ್ನುವುದು ನಿತ್ಯದ ಗೋಳಾಗಿದೆ. ಇನ್ನೂ ಆಗಾಗ್ಗೆ ದಾಳಿ ಮಾಡುವ ಹುಲಿ, ಚಿರತೆ ಮತ್ತಿತರ ಪ್ರಾಣಿಗಳಿಂದ ಆಗುವ ಅನಾಹುತವಂತೂ ರೈತರು ತಾಳಲಾರದಷ್ಟು ನೋವು ನೀಡುತ್ತಿವೆ.
ಬೆಳೆ ಹಾನಿ, ಪ್ರಾಣ ಹಾನಿ ಸಂದರ್ಭಗಳಲ್ಲಿ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಅಷ್ಟೋ- ಇಷ್ಟೋ ಬೆಳೆ ಪರಿಹಾರ ನೀಡಿ ಕೈತೊಳೆದುಕೊಳ್ಳುವ ಪರಿಪಾಠ ನಡೆದು ಕೊಂಡು ಬಂದಿದೆಯಾದರು, ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೆಂಬಂತೆ ನೀಡುವ ಪರಿಹಾರ ಪಡೆಯಬೇಕಾದರೂ ಅದು ಹರಸಾಹಸವೇ ಆಗುತ್ತಿದೆ.
ಶಾಸಕ ಎಚ್.ಪಿ. ಮಂಜುನಾಥ್ ಅವರು ತಮ್ಮ ಸರ್ಕಾರದ ಮೇಲೆ ಒತ್ತಡ ತಂದು ತಡೆಗೋಡೆ ನಿರ್ಮಾಣಕ್ಕೆ ಕಾರಣರಾಗಬೇಕಿದೆ. ಈ ಹಿಂದಿನ ಎಲ್ಲಾ ಸರ್ಕಾರಗಳು ಆನೆ ತಡೆಗೋಡೆ ನಿರ್ಮಿಸುತ್ತೇವೆಂದು ವಾಗ್ದಾನ ಮಾಡಿ ಅಧಿಕಾರ ಅವಧಿಯಲ್ಲಿ ಮರೆತು ರೈತವಿರೋಧಿ ಎಂದೆನಿಸಿಕೊಂಡಿವೆ. ಅಂತಹ ಅಪವಾದದಿಂದ ಈ ಸರ್ಕಾರ ಹೊರಬರುವರೇ ಎಂಬುದನ್ನು ರೈತರು ಕಾದು ನೋಡಬೇಕಿದೆ.
ಬಂದೂಕು ನೀಡಿಲ್ಲ: ಧಾನಸಭಾ ಚುನಾವಣಾ ನೀತಿ ಸಂಹಿತೆ ಹಿನ್ನೆಯಲ್ಲಿ ಕಾಡಂಚಿನ ಗ್ರಾಮಗಳ ರೈತರು ತಮ್ಮ ಜಮೀನಿನ ಬೆಳೆ ರಕ್ಷಣೆಗೆಂದು ಪಡೆಯಲಾಗಿದ್ದ ಬಂದೂಕುಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸಿ ಎರಡು ತಿಂಗಳು ಕಳೆದರೂ ರೈತರಿಗೆ ಹಿಂದಿರುಗಿಸದೆ ಸತಾಯಿಸಲಾಗುತ್ತಿದೆ. ಹಾಡಹಗಲೇ ಕಾಡಾನೆಗಳು ಜಮೀನು ಮತ್ತು ಗ್ರಾಮಗಳಿಗೆ ಲಗ್ಗೆ ಇಡುತ್ತಿದ್ದರೂ ಬೆದರು ಗುಂಡು ಹಾರಿಸಿ ಆನೆ ಓಡಿಸುತ್ತಿದ್ದ ರೈತರು ಬಂದೂಕಿಲ್ಲದೆ ತೊಂದರೆ ಅನುಭವಿಸುತಿದ್ದಾರೆ. ರೈತರ ಹಿತದೃಷ್ಟಿಯಿಂದ ಬಂದೂಕುಗಳನ್ನು ಶೀಘ್ರ ವಾಪಸ್ ನೀಡುವುದು ಒಳಿತು. ಈ ಬಗ್ಗೆ ತಾಲೂಕು ಆಡಳಿತ ಗಮನ ಹರಿಸಲಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

