ಮದ್ದು ಸಿಡಿದು ವೃದ್ಧೆ ಸಾವು
ಕ.ಪ್ರ.ವಾರ್ತೆ ನಂಜನಗೂಡು ಜೂ. 10
ದಂಪತಿ ಪಟಾಕಿಗೆ ಮದ್ದು ತುಂಬುವಾಗ ಆಕಸ್ಮಿಕ ಬೆಂಕಿ ತಗುಲಿ, ಪತ್ನಿ ಸ್ಥಳದಲ್ಲೆ ಮೃತಪಟ್ಟರೆ, ಪತಿ ತೀವ್ರ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ತಾಲೂಕಿನ ಬದನವಾಳು ಗ್ರಾಮದಲ್ಲಿ ಸೋಮವಾರ ಜರುಗಿದೆ.
ಗ್ರಾಮದ ಶಿವನಂಜಮ್ಮ(65) ಮೃತಪಟ್ಟ ದುರ್ದೈವಿ. ಈಕೆಯ ಪತಿ ನಂಜಯ್ಯನಿಗೆ ಬೆಂಕಿಯ ಶಾಖದಿಂದ ದೇಹದ ಶೇ. 50 ರಷ್ಟು ಭಾಗ ಸುಟ್ಟಿದ್ದು, ನಂಜನಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಮೃತ ಶಿವನಂಜಮ್ಮ ಅವರಿಗೆ ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಈ ಘಟನೆ ನಡೆದಾಗ ಎಲ್ಲರೂ ಕೂಲಿ ಕೆಲಸಕ್ಕೆ ತೆರಳಿದ್ದರು ಎನ್ನಲಾಗಿದೆ.
ಬದನವಾಳು ಗ್ರಾಮದಲ್ಲಿ ಕಳೆದ 60 ವರ್ಷದಿಂದ ನಂಜಯ್ಯನ ಕುಟುಂಬ ಪಟಾಕಿ ಮದ್ದನ್ನು ತುಂಬುವ ಕೆಲಸ ನಿರ್ವಹಿಸುತ್ತಿದ್ದು, ಸೋಮವಾರ ಎಂದಿನಂತೆ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆಯಲ್ಲಿದ್ದ ಪಟಾಕಿ ಮದ್ದು ಸಿಡಿದು ಈ ಘಟನೆ ಸಂಭವಿಸಿದ್ದು, ಮದ್ದು ಸಿಡಿತದಿಂದ ಅಕ್ಕ-ಪಕ್ಕದ 7 ಮನೆಗಳು ಜಖಂ ಆಗಿ ನಾಲ್ಕು ಮನೆಗಳು ಸಂಪೂರ್ಣವಾಗಿ ಆಸ್ತಿ-ಪಾಸ್ತಿ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಮಾಜಿ ಧರ್ಮದರ್ಶಿ ವಿ.ಎಸ್. ರಾಮು ಮಾತನಾಡಿ, ಈ ದುರಂತದಿಂದ 7 ಕುಟುಂಬಗಳು ತೊಂದರೆಗೊಳಪಟ್ಟಿದ್ದು, ಸುಮಾರು ಐದು ಲಕ್ಷಕ್ಕೂ ಹೆಚ್ಚು ಆಸ್ತಿ-ಪಾಸ್ತಿ ನಷ್ಟವಾಗಿದೆ ಎಂದು ತಿಳಿಸಿದರು. ಎಲ್ಲರೂ ಕೂಲಿ ಮಾಡಿ ಜೀವನ ನಡೆಸುತ್ತಿದ್ದರು. ಈ ಪಟಾಕಿ ದುರಂತದಿಂದ ತಮ್ಮ ಎಲ್ಲ ಆಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ತಕ್ಷಣವೆ ಇವರಿಗೆ ಪುನರ್ವಸತಿ ಹಾಗೂ ಮೃತ ಶಿವನಂಜಮ್ಮಳ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್, ಸಂಸದ ಆರ್. ಧ್ರುವನಾರಾಯಣ್ ಅವರನ್ನು ಒತ್ತಾಯಿಸಿದ್ದಾರೆ.
ತಪ್ಪಿದ ಭಾರಿ ಅನಾಹುತ: ಮದ್ದು ಸಿಡಿತದ ತೀವ್ರತೆಯಿಂದ ಮತ್ತು ಬೆಂಕಿ ಜ್ವಾಲೆಯಿಂದ 7 ಮನೆಗಳ ಛಾವಣಿಗಳು ಸಿಡಿದು ಜಖಂ ಆಗಿ ಬೆಂಕಿ ಹಾಗೂ ದೊಡ್ಡ ಪ್ರಮಾಣದ ಶಬ್ದದಿಂದ ಅಕ್ಕ-ಪಕ್ಕದ ಮನೆಗಳಿಗೂ ಬೆಂಕಿ ತಗುಲಿ ಹೆಚ್ಚಿನ ಅನಾಹುತವಾಗುತ್ತಿದ್ದುದನ್ನು ಕಂಡ ಗ್ರಾಮಸ್ಥರು ಬೆಂಕಿ ನಂದಿಸಿ ದೊಡ್ಡ ಪ್ರಮಾಣದ ಅನಾಹುತ ತಪ್ಪಿಸಿದರು. ಅಗ್ನಿಶಾಮಕದಳದ ಜಿಲ್ಲಾ ಮುಖ್ಯಸ್ಥರಾದ ಆರ್.ಎಫ್. ಬಸವಣ್ಣ ಹಾಗೂ ಸಿಬ್ಬಂದಿ ವರ್ಗ ಪಟಾಕಿ ಸಿಡಿತದಿಂದ ಉರಿಯುತ್ತಿದ್ದ ಬೆಂಕಿ ಜ್ವಾಲೆ ನಂದಿಸಿ ದುರಂತದಲ್ಲಿ ಮೃತಪಟ್ಟ ಶಿವನಂಜಮ್ಮ ಅವರ ಶವವನ್ನು ಹೊರ ತೆಗೆಯಲು ಶ್ರಮಿಸಿದರು. ಸ್ಥಳಕ್ಕೆ ತಹಸೀಲ್ದಾರ್ ಅರುಳ್ಕುಮಾರ್, ಡಿವೈಎಸ್ಪಿ ವಿಜಯಕುಮಾರ್, ಇನ್ಸ್ಪೆಕ್ಟರ್ ರಘು, ಇಒ ಕೃಷ್ಣಂರಾಜು, ತಾಪಂ ಸದಸ್ಯೆ ರೇವಮ್ಮ ಸೋಮಣ್ಣ ಭೇಟಿ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

