ಸಂಚಾರಿ ವಿಜ್ಞಾನ ಪ್ರಯೋಗಾಲಯಕ್ಕೆ ಚಾಲನೆ
ಕ.ಪ್ರ. ವಾರ್ತೆ ಮೈಸೂರು ಜೂ. 12
ನಗರದ ಹೊರವಲಯದ ಹಿನಕಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಸಂಚಾರಿ ವಿಜ್ಞಾನ ಪ್ರಯೋಗಾಲಯಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಕೆ. ಆನಂದ್ ಚಾಲನೆ ನೀಡಿದರು.
ತಲಾ ಒಂದು ಶಾಲೆಗೆ ಹತ್ತು ದಿನಗಳಂತೆ 20 ಶಾಲೆಗಳಿಗೆ 200 ಬಾರಿ ಭೇಟಿ ನೀಡಲಿದೆ. ಪ್ರತಿ ಬಾರಿಯ ಭೇಟಿಯಲ್ಲಿಯೂ 8, 9 ಮತ್ತು 10ನೇ ತರಗತಿ ಮಕ್ಕಳಿಗೆ ವಿಜ್ಞಾನದ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅಲ್ಲದೆ, ಒಂದು ಭೇಟಿಗೂ ಮತ್ತೊಂದು ಭೇಟಿಗೂ ಮಕ್ಕಳ ಬೌದ್ಧಿಕ ಮಟ್ಟದ ಅಭಿವೃದ್ಧಿ ಪರೀಕ್ಷಿಸಲಾಗುತ್ತದೆ.
ಲಾರ್ಸನ್ ಆ್ಯಂಡ್ ಟೂಬ್ರೋ (ಎಲ್ ಆ್ಯಂಡ್ ಟಿ) ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಮತ್ತು ಅಗಸ್ತ್ಯ ಇಂಟರ್ ನ್ಯಾಷನಲ್ ಫೌಂಡೇಷನ್ನ ಸಹಯೋಗದಲ್ಲಿ ಗ್ರಾಮೀಣ ಪ್ರದೇಶದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಈ ವಾಹನ ಸಿದ್ಧಪಡಿಸಲಾಗಿದೆ.
ಈ ವಾಹನದಲ್ಲಿ ಪ್ರಮುಖವಾಗಿ ಬಿ.ಎಸ್ಸಿ, ಬಿ.ಇಡಿ ಮಾಡಿದ ಅನುಭವಿ ಶಿಕ್ಷಕರು ಇರುತ್ತಾರೆ. ಅವರು ಶಾಲೆಗಳಿಗೆ ಭೇಟಿ ನೀಡಿದಾಗ ವಿದ್ಯಾರ್ಥಿಗಳಿಗೆ ಪ್ರಯೋಗಿಕವಾಗಿ ವಿಜ್ಞಾನ ವಿಷಯ ತಿಳಿಸಿಕೊಡುವರು.
ವಾಹನದಲ್ಲಿ ಭೌತಶಾಸ್ತ್ರ ವಿಷಯಕ್ಕೆ ಸಂಬಂಧಿಸಿದಂತೆ ಸೂರ್ಯಗ್ರಹಣ, ಚಂದ್ರಗ್ರಹಣ, ಹಗಲು ರಾತ್ರಿಯ ಕ್ರಿಯೆ, ಚಂದ್ರನ ಮೇಲಿನ ಕಲೆಗಳು, ಕಾಮನಬಿಲ್ಲಿನ ದರ್ಶನ, ಶಕ್ತಿಯ ಸಂರಕ್ಷಣೆ ಕುರಿತು ಮಾಹಿತಿ ಲಭ್ಯವಾಗಲಿದೆ. ಜೀವಶಾಸ್ತ್ರ ವಿಷಯಕ್ಕೆ ಸಂಬಂಧಿಸಿದಂತೆ ಅಂಗರಚನೆ ಮತ್ತು ರಾಸಾಯನಿಕ ಶಾಸ್ತ್ರ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಲಭ್ಯವಾಗಿದೆ.
ವಾಹನಕ್ಕೆ ಚಾಲನೆ ನೀಡಿದ ಬಳಿಕ ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಆನಂದ್ ಮಾತನಾಡಿ, ವಿದ್ಯಾರ್ಥಿಗಳಿಗೆ ಈ ಸಂಚಾರಿ ಪ್ರಯೋಗ ಶಾಲೆಯಿಂದ ಸಾಕಷ್ಟು ಉಪಯೋಗವಿದೆ. ಪ್ರಾಯೋಗಿಕವಾಗಿ ವಿಷಯ ತಿಳಿದುಕೊಳ್ಳಬಹುದು ಎಂದರು.
ಡಿಡಿಪಿಐ ಬಿ.ಕೆ. ಬಸವರಾಜು ಮಾತನಾಡಿ, ಸರ್ಕಾರಿ ಶಾಲಾ ಕಟ್ಟಡದಲ್ಲಿ ಗುಣಾತ್ಮಕತೆ ಕಾಯ್ದುಕೊಳ್ಳಲು ಎಲ್ ಆ್ಯಂಡ್ ಟಿ ಸಹಾಯ ಮುಖ್ಯ. ಸರ್ಕಾರದ ಅನುದಾನದ ಜೊತೆಗೆ ತಮ್ಮ ಸಹಕಾರವನ್ನೂ ನೀಡಿ ಕಟ್ಟಡ ನಿರ್ಮಿಸಿಕೊಡಬೇಕು ಎಂದು ಹೇಳಿದರು.
ಬಿಇಒ ರಾಮಾರಾಧ್ಯ, ಎಲ್ ಆ್ಯಂಡ್ ಟಿ ಸಂಸ್ಥೆಯ ಜಾನ್ ಪಿ. ಜಕಾರಿಯಾ, ಅನಂತಕುಮಾರ್ ಗೌಡ, ಶಾಲೆಯ ಮುಖ್ಯೋಪಾಧ್ಯಾಯ ಮಹದೇವಸ್ವಾಮಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

