ಕಿರುಕುಳ: ಪೋಸ್ಟ್ ಮಾಸ್ಟರ್ ಆತ್ಮಹತ್ಯೆ
ಕ.ಪ್ರ.ವಾರ್ತೆ ಬೈಲುಕುಪ್ಪೆ ಜೂ. 13
ಹಿರಿಯ ಅಧಿಕಾರಿಗಳ ಕಿರುಕುಳ ತಾಳಲಾರದೆ ಮನನೊಂದು ಪೋಸ್ಟ್ ಮಾಸ್ಟರ್ವೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೊಣಸೂರು ಗ್ರಾಮದಲ್ಲಿ ಗುರುವಾರ ಜರುಗಿದೆ.
ಕೊಣಸೂರು ಗ್ರಾಮದ ಬಸವರಾಜು ಎಂಬವರ ಪುತ್ರ ಕೆ.ಬಿ. ಜಲೇಂದ್ರ (24) ಮೃತಪಟ್ಟಪಟ್ಟವರು. ಜಲೇಂದ್ರ ಅವರು ಕಳೆದ ಎರಡು ವರ್ಷಗಳಿಂದ ಚಿಕ್ಕನೇರಳೆ ಶಾಖೆಯ ಅಂಚೆ ಕಚೇರಿಯಲ್ಲಿ ಪೋಸ್ಟ್ಮಾಸ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಬುಧವಾರ ಕೆ.ಆರ್. ನಗರದ ವಿಭಾಗದಿಂದ ಇನ್ಸ್ಪೆಕ್ಟರ್ ಅಮಿತಕುಮಾರ್ ಜಾ ಎಂಬವವರು ಚಿಕ್ಕನೇರಳೆ ಅಂಚೆ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿ, ಇಲ್ಲಿ ಅವ್ಯವಹಾರ ನಡೆದಿದೆ ಎಂದು ಕೆ.ಬಿ. ಜಲೇಂದ್ರ ಅವರನ್ನು ಅಮಾನತು ಮಾಡಿದರು ಎನ್ನಲಾಗಿದೆ.
ಈ ವಿಷಯವನ್ನು ತನ್ನ ಸಹಪಾಠಿಗಳೊಂದಿಗೆ ಹೇಳಿಕೊಂಡು ತುಂಬಾ ಬೇಜಾರಿನಲ್ಲಿದ್ದರು ಎನ್ನಲಾಗಿದೆ. ಗುರುವಾರ ಬೆಳಗ್ಗೆ 6ರ ಸಮಯದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಯತ್ನಿಸಿದರು. ಕೂಡಲೇ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವಾಗ ಪೂನಾಡಹಳ್ಳಿಯ ಗ್ರಾಮದ ಮಧ್ಯ ಮೃತಪಟ್ಟರು. ಬೆಟ್ಟದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಂಡನೆ: ಗ್ರಾಮೀಣ ಅಂಚೆ ನೌಕರರ ಸಂಘದ ಕಾರ್ಯದರ್ಶಿ ಡಿ.ಕೆ. ಸ್ವಾಮಿ ಮಾತನಾಡಿ, ಹಲವಾರು ವರ್ಷಗಳಿಂದ ದಿನಗೂಲಿ ನೌಕರರಿಗಾಗಿಯೇ ದುಡಿದು ಕಾಯಂ ಆಗದೆ, ಕೇವಲ ಮೂರರಿಂದ ನಾಲ್ಕು ಸಾವಿರ ರು. ವೇತನದಲ್ಲಿ ಜೀವನ ಸಾಗಿಸಲು ತುಂಬಾ ಪ್ರಯಾಸ ಪಡಬೇಕಾದ ಪರಿಸ್ಥಿತಿ ಇದೆ. ಜತೆಗೆ ನಮ್ಮ ಇಲಾಖೆಯ ಮೇಲಾಧಿಕಾರಿಗಳು 40 ರಿಂದ 50 ಸಾವಿರ ವೇತನ ಪಡೆದರೂ ನಮ್ಮಂತಹವರ ಮೇಲೆ ದೌರ್ಜನ್ಯವೆಸಗುತ್ತಲೆ ಬಂದಿದ್ದಾರೆ. ಈ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡಿ ಮೃತರ ಕುಟುಂಬಕ್ಕೆ ಪರಿಹಾರ ಕೊಡಬೇಕೆಂದು ಒತ್ತಾಯಿಸಿದರು. ಈ ಘಟನೆಗೆ ಕಾರಣರಾದ ಇನ್ಸ್ಪೆಕ್ಟರ್ ಅಮಿತಕುಮಾರ್ ಜಾ ಅವರು ಒರಿಸ್ಸಾದಿಂದ ಬಂದಿದ್ದು, ಇವರಿಗೆ ಕನ್ನಡ ಭಾಷೆ ಬರದೆ ನಮ್ಮ ಸಮಸ್ಯೆ ಅರ್ಥವಾಗುವುದಿಲ್ಲ. ಇವರನ್ನು ಈ ಕೂಡಲೇ ಅಮಾನತಿನಲ್ಲಿಡಬೇಕೆಂದು ಒತ್ತಾಯಿಸಿದರು.
ಗ್ರಾಮೀಣ ಅಂಚೆ ನೌಕರರ ಸಂಘದ ಅಧ್ಯಕ್ಷ ರಾಮ್ಪ್ರಿಯ, ಖಜಾಂಚಿ ಸಿ.ಆರ್. ಕುಮಾರ್, ಸದಸ್ಯರಾದ ಮಹದೇವ್, ದಿನೇಶ್, ಕೃಷ್ಣೇಗೌಡ, ನಾರಾಯಣ, ನಂಜೇಗೌಡ, ಎಂ.ಡಿ. ಶಿವಕುಮಾರ್, ನರಸಿಂಹಮೂರ್ತಿ, ಪರಶಿವಮೂರ್ತಿ, ಲತಾ ಮುಂತಾದವರು ಮೃತರಿಗೆ ಸಂತಾಪ ಸೂಚಿಸಿ, ಕುಟುಂಬಕ್ಕೆ ಪರಿಹಾರ ನೀಡಿ ಅಧಿಕಾರಿಯನ್ನು ಅಮಾನತಿನಲ್ಲಿಡುವಂತೆ ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

