ಅಖಿಲೇಶ್ಗೆ ಸನ್ಮಾನ
ಮೈಸೂರು: ಮೈಸೂರಿಗೆ ಆಗಮಿಸಿದ್ದ ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ ಅವರನ್ನು ಮೈಸೂರು ಜಿಲ್ಲಾ ಯಾದವ ಸಂಘದ ವತಿಯಿಂದ ಶುಕ್ರವಾರ ಸನ್ಮಾನಿಸಲಾಯಿತು. ಯಾದವ ಸಂಘದ ವತಿಯಿಂದ ಪಾಲಿಕೆ ಸದಸ್ಯ ಡಿ. ನಾಗಭೂಷಣ್ ಅವರ ನೇತೃತ್ವದಲ್ಲಿ ಟೋಲ್ಗೇಟ್ ಬಳಿ ಮೈಸೂರು ಪೇಟ ಹಾಕಿ ಸ್ವಾಗತಿಸಲಾಯಿತು. ಮುಂದಿನ ದಿನಗಳಲ್ಲಿ ಎಸ್ಪಿ ಪಕ್ಷದ ರಾಷ್ಟ್ರಾಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರು ದೇಶದ ಪ್ರಧಾನಿ ಹುದ್ದೆಗೆ ಏರಲಿ ಎಂದು ಸಂಘದ ಕಾರ್ಯದರ್ಶಿ ಟಿ.ಆರ್. ವಾಸುದೇವ್ ಆಶಿಸಿದ್ದಾರೆ.
ಸಾರ್ವಜನಿಕರಿಗೆ ತೊಂದರೆ ನೀಡದಿರಿ
ಮೈಸೂರು: ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಅರ್ಜಿದಾರರು ಮತ್ತು ಪ್ರತಿ ಅರ್ಜಿದಾರರಿಗೆ ಏಕಕಾಲದಲ್ಲಿ ದಿನಾಂಕ ನೀಡಿ, ವಿಚಾರಣೆ ನಡೆಸಿ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸಬೇಕು. ವಿನಾಕಾರಣ ಸಾರ್ವಜನಿಕರಿಗೆ ತೊಂದರೆ ನೀಡಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ದಿಲೀಪ್ ಸೂಚಿಸಿದ್ದಾರೆ. ಸಾರ್ವಜನಿಕರು ಹಾಗೂ ನೊಂದ ವ್ಯಕ್ತಿಗಳು ಕಚೇರಿಗೆ ಬಂದು ಪೊಲೀಸ್ ಠಾಣೆಗಳಲ್ಲಿ ಕ್ರಮಬದ್ಧ ನ್ಯಾಯ ದೊರಕುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಆದ್ದರಿಂದ ಅರ್ಜಿ ವಿಚಾರಣೆಯಲ್ಲಿ ಯಾವುದೇ ನಿರ್ಲಕ್ಷ್ಯತನವನ್ನು ಠಾಣಾಧಿಕಾರಿಯು ತೋರಿದಲ್ಲಿ, ಅಂಥವರ ವಿರುದ್ಧ ಸೂಕ್ತ ಇಲಾಖಾ ಶಿಸ್ತಿನ ಕ್ರಮ ಜರುಗಿಸಲಾಗುವುದು. ಈ ದಿಸೆಯಲ್ಲಿ ಅರ್ಜಿ ವಿಚಾರಣೆ ವೇಳೆ ತೊಂದರೆ ಉಂಟಾದಲ್ಲಿ ಸಾರ್ವಜನಿಕರು ಎಸ್ಪಿ- 9480805001, ಎಸ್ಪಿ ಕಚೇರಿ- 0821- 2520040, ವೈರ್ಲೆಸ್ ಕೇಂದ್ರ- 0821- 2444800 ತಿಳಿಸುವಂತೆ ಕೋರಿದ್ದಾರೆ.
ವಾರಸುದಾರರ ಪತ್ತೆಗೆ ಮನವಿ
ಮೈಸೂರು: ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಯ ರಾಜೇಂದ್ರನಗರ ಬಸ್ ನಿಲ್ದಾಣದ ಫುಟ್ಪಾತ್ನಲ್ಲಿ ಜೂ. 12ರ ರಾತ್ರಿ 9.45 ರಲ್ಲಿ ಅಸ್ವಸ್ಥಗೊಂಡಿದ್ದ ಸುಮಾರು 60 ವರ್ಷ ವಯಸ್ಸಿನ ವ್ಯಕ್ತಿಯನ್ನು ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇವರ ಹೆಸರು ವಿಳಾಸ ಕೇಳಲಾಗಿ ಸಂಪಂಗಿ ಬಿನ್ ಮರಿಯಪ್ಪ, ನೆಲಮಂಗಲ, ಬೆಂಗಳೂರು ಎಂದು ತಿಳಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪೂರ್ಣ ವಿಳಾಸ ವಿವರ ಕೊಡಲು ವಿಫಲನಾಗಿದ್ದು, ಹೇಳಿಕೆ ಕೊಡುವ ಸ್ಥಿತಿಯಲ್ಲಿಲ್ಲ. ವ್ಯಕ್ತಿಯ ಚಹರೆ ಹೀಗಿದೆ. 5.2 ಅಡಿ ಎತ್ತರ, ಸಾಧಾರಣ ಶರೀರ, ಗೋದಿ ಮೈಬಣ್ಣ, ಗುಂಡು ಮುಖ, ಕಪ್ಪು ಮಿಶ್ರಿತ ಬಿಳಿ ತಲೆಕೂದಲು, ಕನ್ನಡ ಭಾಷೆ, ಎಡತೊಡೆಯ ಒಳಭಾಗ ಒಂದು ಚಿಕ್ಕ ಕಪ್ಪು ಕಾರಳ್ಳು ಇರುತ್ತದೆ. ಇವರ ವಾರಸುದಾರರು ಎನ್.ಆರ್. ಪೊಲೀಸ್ ಠಾಣೆ, ದೂ. 2418112, ಕಂಟ್ರೋಲ್ ರೂಂ, ದೂ, 2418339, ಸಬ್ ಇನ್ಸ್ಪೆಕ್ಟರ್ ಮೊ. 8861786329 ಸಂಪರ್ಕಿಸಬಹುದು.
ಗೃಹಿಣಿ ಆತ್ಮಹತ್ಯೆ
ಮೈಸೂರು: ವರದಕ್ಷಿಣೆ ಕಿರುಕುಳ ತಾಳಲಾರದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಶುಕ್ರವಾರ ಮೃತಪಟ್ಟಿದ್ದಾರೆ. ತಾಲೂಕಿನ ಯಲಚಹಳ್ಳಿ ನಿವಾಸಿ ಪ್ರಭಾಕರ್ ಎಂಬವರ ಪತ್ನಿ ಪುಷ್ಪಾ (23) ಮೃತಪಟ್ಟವರು. ನಾಲ್ಕು ತಿಂಗಳ ಹಿಂದೆಯಷ್ಟೆ ಪ್ರಭಾಕರ್ ಜೊತೆ ಪುಷ್ಪ ಮದುವೆಯಾಗಿತ್ತು. ಮದುವೆಯಾದ ಹೊಸತರಲ್ಲೆ ವರದಕ್ಷಿಣೆಗಾಗಿ ಪ್ರಭಾಕರ್ ಪುಷ್ಪಾಳನ್ನು ಪೀಡಿಸುತ್ತಿದ್ದ. ಕಳೆದ ವಾರ ಇದೆ ವಿಷಯಕ್ಕೆ ಸಂಬಂಧಿಸಿದಂತೆ ಪ್ರಭಾಕರ್ ಮತ್ತು ಪುಷ್ಪಾ ನಡುವೆ ಗಲಾಟೆ ಸಹ ಆಗಿತ್ತು. ಅಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಂದೆ ಈ ಸಂಬಂಧ ಪ್ರಕರಣ ದಾಖಲಾಗಿ ಪ್ರಭಾಕರ್ನನ್ನು ಪೊಲೀಸರು ಬಂಧಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

