ಮೈಸೂರು

ನನ್ನನ್ನು ಸನ್ಮಾನಿಸಬೇಡಿ, ಕೆಲಸ ಮಾಡಲು ಬಿಡಿ

Published On :

ಕ.ಪ್ರ.ವಾರ್ತೆ    ಮೈಸೂರು    ಜೂ. 17
ಇದೀಗ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಮೊದಲಿಗೆ ನನ್ನನ್ನು ಸನ್ಮಾನಿಸಬೇಡಿ. ಕೆಲಸ ಮಾಡಲು ಬಿಡಿ. ಮೈಸೂರಿನಲ್ಲಿ ಪ್ರಮುಖವಾಗಿ ಶಿಕ್ಷಣ, ಆರೋಗ್ಯ, ನೀರಿನ ಸೌಲಭ್ಯ ಒದಗಿಸುವುದು ನನ್ನ ಗುರಿ ಎಂದು ಚಾಮರಾಜ ಕ್ಷೇತ್ರದ ಶಾಸಕ ವಾಸು ಹೇಳಿದರು.
ಸೋಮವಾರ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಂಸಿಸಿಐ ಅಧ್ಯಕ್ಷರು ನನಗೆ ಕರೆ ಮಾಡಿದಾಗ ಸನ್ಮಾನಿಸುತ್ತೇವೆ ಎಂದರು. ನಾನು ಬೇಡ ಎಂದೆ.
ಆದರೂ ಸಾಂಪ್ರದಾಯಿಕವಾಗಿ ಸನ್ಮಾನಿಸಿದ್ದಾರೆ. ಮೈಸೂರಿನಲ್ಲಿ ಯಾರೇ ಜನಪ್ರತಿನಿಧಿಗಳಾಗಿ ಆಯ್ಕೆಯಾದಾಗ ಎಂಸಿಸಿಐ ಸನ್ಮಾನ ಸಮಾರಂಭ ಏರ್ಪಡಿಸುತ್ತದೆ. ಸನ್ಮಾನದ ಜತೆಗೆ ಬೇಡಿಕೆಯ ಭಿನ್ನವತ್ತಳೆ ಇಡುತ್ತಾರೆ. ಸನ್ಮಾನ ಈಡೇರುತ್ತದೆಯೇ ಹೊರತು ಬೇಡಿಕೆಗಳು ಮಾತ್ರ ಈಡೇರುವುದಿಲ್ಲ ಎಂದರು.
ನಗರ ಪಾಲಿಕೆಗೆ ಮೇಯರ್ ಆದವರಿಗೆ ಎಲ್ಲೆಲ್ಲಿಯೂ ಸನ್ಮಾನವಿರುತ್ತದೆ. 365 ದಿನಗಳೂ ಸನ್ಮಾನ ಸ್ವೀಕರಿಸುತ್ತಿರುತ್ತಾರೆ. ಸನ್ಮಾನ ಸ್ವೀಕರಿಸಿದಂತೆ ಅಭಿವೃದ್ಧಿಯನ್ನೂ ಮಾಡಿದರೆ ಅದಕ್ಕೆ ಅರ್ಥ ಬರುತ್ತದೆ. ಮೈಸೂರನ್ನು ಪಾರಂಪರಿಕ ನಗರಿ ಎನ್ನುತ್ತೇವೆ. ಈ ನಗರದ ಬೆಳವಣಿಗೆಗೆ ಹಲವಾರು ಕಾರ್ಯಕ್ರಮಗಳ ಅವಶ್ಯಕತೆ ಇದೆ. ಸಾರಿಗೆ ಮತ್ತು ಪ್ರವಾಸೋದ್ಯಮದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಿದೆ. ಈ ನಿಟ್ಟಿನಲ್ಲಿ ಹೇಳುವುದಾರೆ ನಾವೆಲ್ಲರೂ ಒಗ್ಗಟ್ಟಾಗಿ ಮೈಸೂರಿನ ಅಭಿವೃದ್ಧಿಗೆ ದುಡಿಯಬೇಕಾಗಿದೆ ಎಂದರು.
ರಿಂಗ್ರೋಡ್ ಅಲ್ಲ, ರಾಂಗ್ ರೋಡ್: ಮೈಸೂರಿನ ನಾಲ್ಕು ಕಡೆಗಳಲ್ಲಿಯೂ ನಿರ್ಮಿಸುತ್ತಿರುವ ರಿಂಗ್ ರೋಡ್ ಎಂಬ ಹೆಸರನ್ನು ಬದಲಾಯಿಸಿ ರಾಂಗ್ ಎನ್ನಬೇಕು. ಆ ರಸ್ತೆ ಪೂರ್ಣವಾಗದಿರುವುದಕ್ಕೆ ಹಲವಾರು ಕಾರಣಗಳಿವೆ. ರಸ್ತೆ ಹಾದುಹೋಗುವ ಜಾಗದಲ್ಲಿ ಕೆಲವು ಮಂದಿ ಸಂಬಂಧಿಕರ ಜಾಗ ಇರುವುದು ಅಡ್ಡಗಾಲಾಗಿದೆ. ಯಾರೆ ತಪ್ಪು ಮಾಡಿದರೂ ಧೈರ್ಯವಾಗಿ ಕೇಳುವ ಮನೋಭಾವ ಬೆಳೆಸಿಕೊಳ್ಳಬೇಕು. ಅದರಲ್ಲೂ ಅಧಿಕಾರಿಗಳನ್ನು ಸ್ವಾರ್ಥಕ್ಕೆ ಬಳಸಿಕೊಳ್ಳದೇ ಅವರಿಂದ ಒಳ್ಳೆಯ ಕೆಲಸ ತೆಗೆಯಬೇಕು ಎಂದು ತಿಳಿಸಿದರು.
ಇದೇ ವೇಳೆ ಎಂಸಿಸಿಐ ಅಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ಅವರು ಶಾಸಕರಿಗೆ ಹಲವು ಬೇಡಿಕೆಗಳನ್ನು ಸಲ್ಲಿಸಿದರು. ರೇಸ್ ಕೋರ್ಸ್- ಕಾರಂಜಿಕೆರೆ ರಸ್ತೆಯನ್ನು ಅಭಿವೃದ್ಧಿಪಡಿಸುವುದು, ಬೆಂಗಳೂರಿನಂತೆ ಮೈಸೂರಿನಲ್ಲಿಯೂ ನಾಲ್ಕು ಕಡೆ ಪಾರ್ಕಿಂಗ್ ಲಾಟ್ ನಿರ್ಮಿಸುವುದು, ದಸರಾ ಪ್ರಾಧಿಕಾರ ರಚಿಸುವುದು, ದಸರಾ ಕಾರ್ಯಕ್ರಮದಲ್ಲಿ ವ್ಯಾಪಾರಸ್ಥರನ್ನು ತೊಡಗಿಸಿಕೊಳ್ಳುವುದು, ಪ್ರತ್ಯೇಕ ಜಲಮಂಡಳಿ ರಚಿಸುವುದು, ಕೈಗಾರಿಕೆಗಳಿಗೆ 6 ರಿಂದ 8 ಗಂಟೆಗಳ ಕರೆಂಟ್, ನೀರು ಒದಗಿಸಿಕೊಡಲು ಕ್ರಮ ಕೈಗೊಳ್ಳುವಂತೆ ಭಿನ್ನವತ್ತಳೆ ಸಲ್ಲಿಸಿದರು. ಎಂಸಿಸಿಐ ಪದಾಧಿಕಾರಿಗಳಾದ ಎ.ಎಸ್. ಸತೀಶ್, ಬನ್ಸಾಲ್, ಸುರೇಶ್ಕುಮಾರ್ ಜೈನ್, ನಾರಾಯಣಗೌಡ, ಕೆ. ಮಹದೇವ್ ಇನ್ನಿತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.