ಮೈಸೂರು

ರಂಗಾಯಣದ 'ಬೆಳ್ಳಿ' ಮೇಲೆ ಕಪ್ಪು ಚುಕ್ಕೆ

Published On :

ಕ.ಪ್ರ.ವಾರ್ತೆ   ಮೈಸೂರು   ಜೂ. 19-
ಸರ್ಕಾರವೇ ನಡೆಸುವ ದಕ್ಷಿಣ ಭಾರತದ ಏಕೈಕ ರೆಪರ್ಟರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೈಸೂರು ರಂಗಾಯಣ 25ರ ಸಂಭ್ರಮದಲ್ಲಿದ್ದು, ಇಲ್ಲಿನ ಕ್ರಿಯಾಶೀಲ ಚಟುವಟಿಕೆಗಳಿಗೆ ಆಡಳಿತಾತ್ಮಕವಾಗಿ ಕೊಕ್ಕೆ ಹಾಕುತ್ತಿರುವುದು ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ.
ಹೆಚ್ಚು ಕ್ರಿಯಾಶೀಲವಾಗಿದ್ದ ರಂಗಾಯಣ ಇತ್ತೀಚೆಗೆ ವಿವಾದಗಳಿಂದಲೇ ಸದಾ ಸುದ್ದಿಯಲ್ಲಿದೆ. ಕಳೆದ ಮೂರು ತಿಂಗಳ ಹಿಂದೆ ರಂಗಾಯಣ ನಿರ್ದೇಶಕರನ್ನು ವಜಾಗೊಳಿಸುವುದರೊಂದಿಗೆ ಕಲಾವಿದರು ಹಾಗೂ ಸರ್ಕಾರದ ನಡುವೆ ತಿಕ್ಕಾಟ ಆರಂಭವಾಯಿತು. ಏಕ ತಂಡದಲ್ಲಿದ್ದ 18 ಕಲಾವಿದರನ್ನು ವಿಂಗಡಿಸಿ ಮೈಸೂರು, ಶಿವಮೊಗ್ಗ, ಧಾರವಾಡಕ್ಕೆ ಹಂಚಿದ್ದು, ಮತ್ತೊಂದು ಸಮಸ್ಯೆಯಾಯಿತು. ರಾಜ್ಯ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕಲಾವಿದರನ್ನು ವರ್ಗಾಯಿಸಲಾಗಿತ್ತು.

ಉಪನಿರ್ದೇಶಕರ ಹಸ್ತಕ್ಷೇಪ: ರಂಗಾಯಣ ನಿರ್ದೇಶಕರ ಜಾಗಕ್ಕೆ ಕನ್ನಡ ಮತ್ತು ಸಂಸ್ಕೃತಿ ಆಯುಕ್ತರನ್ನು ನೇಮಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೂ ಹಮ್ಮಿಕೊಂಡ ಕಾರ್ಯಕ್ರಮಗಳೆಲ್ಲ ಸೃಜನಶೀಲತೆ, ನೈಜತೆಯನ್ನು ಕಳೆದುಕೊಂಡವು. ಆಡಳಿತಕ್ಕೆ ಸೀಮಿತವಾಗಿದ್ದ ರಂಗಾಯಣ ಉಪನಿರ್ದೇಶಕರಾದ ನಿರ್ಮಲಾ ಮಠಪತಿ ಅವರು ಎಲ್ಲಿಲ್ಲದ ಉತ್ಸಾಹ ತೋರಿ ಎಲ್ಲ ವಿಚಾರಗಳಲ್ಲೂ ಹಸ್ತಕ್ಷೇಪ ಮಾಡಿದರು. ಅದೀಗ 'ನಾಟಕ ಮಾಡಿ' ಎಂದು ಕಲಾವಿದರಿಗೇ ಹೇಳುವಷ್ಟರ ಮಟ್ಟಿಗೆ ಮುಂದುವರಿದಿದೆ.

ಬೈಲಾ ಉಲ್ಲಂಘನೆ: ಬಿ.ವಿ. ಕಾರಂತರು ರಂಗಾಯಣ ಸ್ಥಾಪಿಸುವಾಗ ತಯಾರಿಸಿದ್ದ ಬೈಲಾ ಪ್ರಕಾರ ಸೃಜನಶೀಲ ಕೆಲಸ ಕಾರ್ಯಗಳ ನಿರ್ಧಾರ ರಂಗಾಯಣ ನಿರ್ದೇಶಕರೇ ತೆಗೆದುಕೊಳ್ಳಬೇಕು. ರಂಗಾಯಣದ ಖರ್ಚು ವೆಚ್ಚಕ್ಕೆ ಉಪನಿರ್ದೇಶಕರು ಸಹಿ ಮಾಡಬೇಕಷ್ಟೇ. ಇಷ್ಟಾದರೂ ನಿರ್ಮಲಾ ಮಠಪತಿ ಮೂಗು ತೂರಿಸುತ್ತಿರುವುದು ಬೈಲಾ ಉಲ್ಲಂಘಿಸಿದಂತಾಗಿದೆ.
ಕಳೆದ ಮಾರ್ಚ್ನಲ್ಲಿ ರಂಗಾಯಣ ನಿರ್ದೇಶಕರನ್ನು ವಜಾಗೊಳಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಕೆ.ಆರ್. ರಾಮಕೃಷ್ಣ ಅವರನ್ನು ನೇಮಿಸಲಾಗಿತ್ತು. ಅವರು ಜೂ.17 ರಿಂದ ದೀರ್ಘಾವಧಿ ರಜೆಯಲ್ಲಿದ್ದಾರೆ. ಅವರ ಜಾಗಕ್ಕೆ ನೀಲಾ ಮಂಜುನಾಥ್ ನೇಮಕ ಸಾಧ್ಯತೆ ಇದೆ. ಏತನ್ಮಧ್ಯೆ ಉಪನಿರ್ದೇಶಕರು ಆಡಳಿತಾತ್ಮಕ ವಿಚಾರ ಬಿಟ್ಟು, ಸೃಜನಶೀಲ ಕೆಲಸಕ್ಕೂ ಕೈಹಾಕಿ ಉದ್ಧಟತನ ಮೆರೆಯುತ್ತಿದ್ದಾರೆ ಎಂದು ಕಲಾವಿದರು ಆರೋಪಿಸುತ್ತಿದ್ದಾರೆ.
ಬೆಳ್ಳಿ ಮಹೋತ್ಸವ: 1989ರ ಜ.14ರ ಮಕರ ಸಂಕ್ರಾಂತಿಯಂದು ರಂಗಾಯಣ ಆರಂಭಗೊಂಡಿತು. ರಂಗಾಯಣ ಬಿ.ವಿ. ಕಾರಂತರ ಕಲ್ಪನೆಯ ಕೂಸು. ಇದನ್ನು ಪೋಷಿಸಿ ನೀರೆರೆದವರು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಹಾಗೂ ಸಚಿವರಾಗಿದ್ದ ಎಂ.ಪಿ. ಪ್ರಕಾಶ್. ಬಿ.ವಿ. ಕಾರಂತರ ನಂತರ ಸಿ. ಬಸವಲಿಂಗಯ್ಯ, ಪ್ರಸನ್ನ, ಎ.ಜಿ. ಚಿದಂಬರರಾವ್ ಜಂಬೆ ನಿರ್ದೇಶಕರಾಗಿ ರಂಗಾಯಣವನ್ನು ಸಮರ್ಥವಾಗಿ ಮುನ್ನೆಡೆಸಿದರು. ನಂತರ ಕಾ.ತ. ಚಿಕ್ಕಣ್ಣ, ಬಿ. ಜಯಶ್ರೀ, ಪ್ರೊ. ಲಿಂಗದೇವರು ಹಳೆಮನೆ, ಡಾ.ಬಿ.ವಿ. ರಾಜಾರಾಂ ಅಲ್ಪ ಕಾಲ ನಿರ್ದೇಶಕರಾಗಿದ್ದರು.
2014ರ ಜ.14ಕ್ಕೆ 25 ವರ್ಷ ಪೂರೈಸಲಿದ್ದು, ಬೆಳ್ಳಿ ಹಬ್ಬವನ್ನು ಅತ್ಯಂತ ವೈಭವಯುತವಾಗಿ ಆಚರಿಸಲು ನಿರ್ಧರಿಸಲಾಗಿತ್ತು. 25 ನಾಟಕಗಳನ್ನು ಪ್ರದರ್ಶಿಸಿ 'ಬಹುರೂಪಿ'ಗೆ ಮುಕ್ತಾಯ ಹಾಡುವ ಉದ್ದೇಶವೂ ಇತ್ತು. ಆದರೆ, ಇತ್ತೀಚಿಗೆ 'ಬೆಳ್ಳಿ' ಹಬ್ಬದ ಮೇಲೆ ಕಪ್ಪು ಚುಕ್ಕೆ ಕಾಣಿಸಿಕೊಳ್ಳುತ್ತಿರುವುದು ವಿಪರ್ಯಾಸವಾಗಿದೆ.

- ಜೆ. ಮಹದೇವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.