2030 ಕ್ಕೆ ಪರಿಸರಸ್ನೇಹಿ ವಿಮಾನ: ಡಾ. ರೊದ್ದಂ
ಮೈಸೂರು: 2030ಕ್ಕೆ ಪರಿಸರಸ್ನೇಹಿ ವಿಮಾನ ಬರಲಿದೆ ಎಂದು ಜವಹರಲಾಲ್ ನೆಹರು ಆಧುನಿಕ ವೈಜ್ಞಾನಿಕ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ, ಪದ್ಮವಿಭೂಷಣ ಡಾ.ರೊದ್ದಂ ನರಸಿಂಹ ಹೇಳಿದರು.
ಎಂಜಿನಿಯರುಗಳ ಸಂಸ್ಥೆಯ ಮೈಸೂರು ಶಾಖೆ ಹಾಗೂ ಡಾ.ಡಿ.ರಾಜಗೋಪಾಲ್ ರಾವ್ ಮತ್ತು ದೇಸಿರಾಜು ಕುಟುಂಬ ಸಂಯುಕ್ತವಾಗಿ ಶುಕ್ರವಾರ ಏರ್ಪಡಿಸಿದ್ದ ಡಾ.ವಿ.ನರಸಿಂಹರಾವ್ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾರತದ ವೈಮಾನಿಕ ಭವಿಷ್ಯ ಎಂಬ ವಿಷಯ ಕುರಿತು ಅವರು ಮಾತನಾಡಿದರು.
ಶೇ.100 ಜೈವಿಕ ಇಂಧನ ಬಳಕೆಯಿಂದ ಸಂಚರಿಸುವ ಹಾಗೂ ಸೌರಶಕ್ತಿಯಿಂದ ಹಾರಾಟ ಮಾಡಬಹುದಾದ ನೂತನ ಮಾದರಿಯ ಬೋಯಿಂಗ್ ಸುಗರ್ ಎಂಬ ಪರಿಸರ ಸ್ನೇಹಿ ವಿಮಾನವನ್ನು ತಯಾರಿಸುವ ಸಲುವಾಗಿ ನಾಸಾ ಸಂಸ್ಥೆಯು ಯೋಜನೆ ರೂಪಿಸಿ ಅದರ ವಿನ್ಯಾಸವನ್ನು ಈಗಾಗಲೇ ತಯಾರಿಸಿದೆ ಎಂದರು. ವಿಶ್ವದಲ್ಲಿಯೇ ನಾಗರಿಕ ವಿಮಾನ ಹಾರಾಟದಿಂದಾಗಿ ಗಗನದಲ್ಲಿ ಅಧಿಕ ಸಂಚಾರ ಉಂಟಾಗಿದೆ. ಅಲ್ಲದೆ ಅದರಿಂದ ಹೊರ ಸೂಸುವ ಕಾರ್ಬನ್ ಡೈ ಆಕ್ಸೈಡ್ ಜಾಗತಿಕ ತಾಪ ಹೆಚ್ಚಾಗಲು ಕಾರಣವಾಗಿದೆ. ಆದ್ದರಿಂದ ವಿನೂತನ ಮಾದರಿಯ ವಿಮಾನ ತಯಾರಿಕೆಗೆ ಸಿದ್ಧತೆ ನಡೆದಿದ್ದು, 2019ರಲ್ಲಿ ಟರ್ಬೋಜೆಟ್ ಹಾಗೂ 2030 ರಲ್ಲಿ ಬೋಯಿಂಗ್ ಸುಗರ್ ವಿಮಾನಗಳು ಬರಲಿವೆ ಎಂದು ತಿಳಿಸಿದರು.
ಚೀನಾ ಮುಂಚೂಣಿಯಲ್ಲಿ: ನಾಗರಿಕ ವಿಮಾನ ಸೇವೆಯಲ್ಲಿ ಇಡೀ ವಿಶ್ವದಲ್ಲಿಯೇ ಚೀನಾ ಮುಂಚೂಣಿಯಲ್ಲಿದೆ. ಭಾರತಕ್ಕಿಂತಲೂ ಸಣ್ಣದಾದ ದಕ್ಷಿಣ ಕೋರಿಯಾ ಉತ್ತಮ ಪ್ರಗತಿ ಸಾಧಿಸಿದೆ. ಆದರೆ ನಮ್ಮ ದೇಶದಲ್ಲಿ ಅನೇಕ ಖಾಸಗಿ ಸೇರಿದಂತೆ ವಿಮಾನ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದರೂ ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ. ಅದರ ಇಂಧನ ಬೆಲೆ, ಬಿಡಿಭಾಗಗಳ ಬೆಲೆ ಹೆಚ್ಚಿರುವ ಕಾರಣ ಪ್ರಯಾಣ ದರ ದುಬಾರಿಯಾಗಿದೆ. ಮುಂಬರುವ ಪರಿಸರ ಸ್ನೇಹಿ ವಿಮಾನಗಳು ನಾಗರಿಕರಿಗೆ ಉಳಿತಾಯ ಹಾಗೂ ಸಂಸ್ಥೆಗೆ ಆದಾಯ ತರಲಿವೆ ಎಂದರು.
ಇದಕ್ಕೂ ಮುನ್ನ ಅವರು, ಇಲ್ಲಿನ ಆವರಣದಲ್ಲಿರುವ ಸರ್.ಎಂ. ವಿಶ್ವೇಶ್ವರಯ್ಯ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಸಂಸ್ಥೆಯಿಂದ ಪ್ರೊ.ರೊದ್ದಂ ನರಸಿಂಹ ಅವರನ್ನು ಸನ್ಮಾನಿಸಲಾಯಿತು. ಎಂಜಿಯರಗಳ ಸಂಸ್ಥೆ ಅಧ್ಯಕ್ಷ ಡಾ.ಟಿ. ಅನಂತಪದ್ಮನಾಭ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಟಿ.ಆರ್. ಸತ್ಯನಾರಾಯಣ, ಜಂಟಿ ಕಾರ್ಯದರ್ಶಿ ಪಿ. ಸಂಪತ್ತು, ಮಾಜಿ ಅಧ್ಯಕ್ಷ ಎ.ಎಸ್. ಸತೀಶ್, ಡಿವಿಎನ್ ಮೆಮೋರಿಯಲ್ ಟ್ರಸ್ಟಿ ಡಾ.ಡಿ.ರಾಜಗೋಪಾಲ್ರಾವ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

